Advertisement

Sowing: ಜಿಲ್ಲಾದ್ಯಂತ ಹಿಂಗಾರು ಬಿತ್ತನೆ ಕುಸಿತ!

04:35 PM Nov 28, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಿಂಗಾರು ಮಳೆಯ ಕಣ್ಣಾಮುಚ್ಚಾಲೆ ಮುಂದುವರೆದಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಹಿಂಗಾರು ಮಳೆ ರೈತರ ಕೈ ಹಿಡಿಯದ ಪರಿಣಾಮ ಜಿಲ್ಲಾದ್ಯಂತ ಬಿತ್ತನೆಯ ಸಾಧನೆ ತೀರಾ ಕುಸಿದಿದ್ದು ಬರೊಬ್ಬರಿ 5,422 ಹೆಕ್ಟೇರ್‌ ಗುರಿ ಪೈಕಿ ಇಲ್ಲಿವರೆಗೂ ಕೇವಲ 532 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ.

Advertisement

ಜಿಲ್ಲೆಯಲ್ಲಿ ಮುಂಗಾರು ಕೈ ಕೈಕೊಟ್ಟರು ಹಿಂಗಾರು ಮಳೆ ಕೈ ಹಿಡಿಯುವ ಆಶಾಭಾವನೆ ರೈತರಲ್ಲಿ ಮೂಡಿತ್ತು. ಆದರೆ ಬಿತ್ತನೆ ಅವಧಿಯಲ್ಲಿ ಮಳೆ ಬೀಳದ ಪರಿಣಾಮ ಜಿಲ್ಲೆಯಲ್ಲಿ ಹಿಂಗಾರು ಮಳೆ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಜಿಲ್ಲೆಯ ಪಾಲಿಗೆ 2023 ಸಂಪೂರ್ಣ ಬರಕ್ಕೆ ತುತ್ತಾಗುವಂತಾಗಿದೆ. ಹಿಂಗಾರಿನಲ್ಲಿ ಸಾಮಾನ್ಯವಾಗಿ ಜಿಲ್ಲೆಯಲ್ಲಿ ನೀರಾವರಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಾರೆ. ಉಳಿದಂತೆ ಹುರುಳಿ, ನೆಲಗಲಡೆ, ಮಸುಕಿನ ಜೋಳ, ರಾಗಿ ಬೆಳೆಯುತ್ತಾರೆ. ಆದರೆ ಹಿಂಗಾರು ಮಳೆ ಕೂಡ ಜಿಲ್ಲೆಯಲ್ಲಿ ರೈತರ ಮೇಲೆ ಕೃಪೆ ತೋರದ ಪರಿಣಾಮ ಬಿತ್ತನೆ ಸಮಯಕ್ಕೆ ಸರಿಯಾಗಿ ಮಳೆ ಬೀಳದೇ ರೈತರು ಬಿತ್ತನೆಗೆ ಎದುರು ನೋಡುವಂತಾಗಿದೆ.

ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲಿ 1,800 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿ ಗುರಿ ಇದ್ದರೂ ಇಲ್ಲಿವರೆಗೂ ಕೇವಲ 5 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಭತ್ತ ನಾಟಿ ಮಾಡಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಕೈ ಕೊಟ್ಟಿರುವ ಪರಿಣಾಮ ಯಾರು ಭತ್ತದ ನಾಟಿಗೆ ಧೈರ್ಯ ತೋರುತ್ತಿಲ್ಲ. ಜೊತೆಗೆ ಭತ್ತಕ್ಕೆ ಹೆಚ್ಚು ನೀರು ಬೇಕಿರುವುದರಿಂದ ಕೊಳವೆ ಬಾವಿಗಳನ್ನು ನಂಬಿ ಭತ್ತ ನಾಟಿ ಮಾಡಿದರೂ ಕರೆಂಟ್‌ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ ಎಂದು ರೈತರು ಭತ್ತಕ್ಕೆ ಆಸಕ್ತಿ ತೋರುತ್ತಿಲ್ಲ.

ಗೌರಿಬಿದನೂರಲ್ಲಿ ಹೆಚ್ಚು ಬಿತ್ತನೆ: ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲಿ ಆಗಿರುವ ಒಟ್ಟು 532 ಹೆಕ್ಟೇರ ಪೈಕಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಒಂದರಲ್ಲಿಯೆ ಒಟ್ಟು 361 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಸಾಧಿಸಲಾಗಿದ್ದು, ಗೌರಿಬಿದನೂರಲ್ಲಿ 60 ಹೆಕ್ಟೇರ್‌ನಲ್ಲಿ ಭತ್ತ, 18 ಹೆಕ್ಟೇರ್‌ ರಾಗಿ, 62 ಹೆಕ್ಟೇರ್‌ ಮಲ್ಲಿ ಮುಸುಕಿನ ಜೋಳ, 230 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೇ, 32 ಹೆಕ್ಟೇರ್‌ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಆಗಿದೆ. ಉಳಿದಂತೆ ಬಾಗೇಪಲ್ಲಿ ತಾಲೂಕಿನಲ್ಲಿ 2,058 ಹೆಕ್ಟೇರ್‌ ಪೈಕಿ ಇಲ್ಲಿವರೆಗೂ ಬರೀ 82 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದೆ.

ನೀರಾವರಿ ಪ್ರದೇಶದಲ್ಲಿ ಕುಸಿತ: ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲಿ ಒಟ್ಟು 5,422 ಹೆಕ್ಟೇರ್‌ ಗುರಿ ಪೈಕಿ ಸುಮಾರು 4,037 ಹೆಕ್ಟೇರ್‌ ನೀರಾವರಿ ಪ್ರದೇಶ ಹೊಂದಿದೆ. ಆದರೆ ಜಿಲ್ಲೆಯಲ್ಲಿ ಇಲ್ಲಿವರೆಗೂ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಆಗಿದ್ದು ಕೇವಲ 210 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ. ಇನ್ನೂ 3,827 ಹೆಕ್ಟೇರ್‌ ಪ್ರದೇ ಶದಲ್ಲಿ ಬಿತ್ತನೆ ಬಾಕಿದೆ. ಅದೇ ರೀತಿ ಖುಷ್ಕಿ ಬೇಸಾಯ ದಲ್ಲಿ ಒಟ್ಟು 1,385 ಹೆಕ್ಟೇರ್‌ ಪ್ರದೇಶದಲ್ಲಿ ಗುರಿ ಇದ್ದರೂ ಇಲ್ಲಿವರೆಗೂ ಆಗಿರುವುದು ಕೇವಲ 322 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ. ಇನ್ನೂ 1,063 ಹೆಕ್ಟೇರ್‌ ಪ್ರದೇಶ ದಲ್ಲಿ ಬಿತ್ತನೆ ನಡೆಯಬೇಕಿದೆ. ರೈತರು ಬಿತ್ತನೆಗೆ ಸಿದ್ದಪಡಿಸಿ ಕೊಂಡು ಮಳೆಗೆ ಎದುರು ನೋಡುವಂತಾಗಿದೆ.

Advertisement

ಜಿಲ್ಲೆಯ ರೈತರಿಗೆ ಬಾರದ ಬರ ಪರಿಹಾರ!: ಜಿಲ್ಲೆಯನ್ನು ಸಂಪೂರ್ಣ ಬರ ಪೀಡಿತ ಜಿಲ್ಲೆಯೆಂದು ಘೋಷಿಸಿ ಸರ್ಕಾರ ಎರಡು ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಇನ್ನೂ ರೈತರಿಗೆ ಬೆಳೆ ನಷ್ಟ ಪರಿಹಾರ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಬರಕ್ಕೆ ಬರೋಬ್ಬರಿ 75,209 ಹೆಕ್ಟೇರ್‌ ಪ್ರದೇಶದಲ್ಲಿ ರೈತರ ಬೆಳೆ ಹಾನಿ ಆಗಿದೆ. ಎನ್‌ಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಒಟ್ಟು 64 ಕೋಟಿಯಷ್ಟು ಬೆಳೆ ಹಾನಿ ಜಿಲ್ಲೆಯಲ್ಲಿ ಆಗಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಜಿಲ್ಲಾಡಳಿತ 464 ಕೋಟಿ ಬರ ಪರಿಹಾರಕ್ಕೆ ಮನವಿ ಮಾಡಿದೆ. ಆದರೆ ಇನ್ನೂ ಕೂಡ ರೈತರಿಗೆ ಬರ ಪರಿಹಾರ ಹಣ ಸೇರಿಲ್ಲ. ಬರ ಪರಿಹಾರಕ್ಕಾಗಿ ರೈತರು ಜಿಲ್ಲೆಯ ವಿವಿಧಡೆಗಳಲ್ಲಿ ಧರಣಿ, ಪ್ರತಿಭಟನೆಗಳನ್ನು ಶುರು ಮಾಡಿದ್ದಾರೆ.

ಆಶಾಭಾವನೆ ಮೂಡಿಸಿದ ಕಡಲೆ ಬೆಳೆ: ಇನ್ನೂ ಇದೇ ಮೊದಲ ಬಾರಿಗೆ ಕೃಷಿ ಇಲಾಖೆ ಬರಗಾಲದ ಹಿನ್ನೆಲೆ ಯಲ್ಲಿ ಮುಂಗಾರು ಕೈ ಕೊಟ್ಟರೂ ಹಿಂಗಾರು ಕೈ ಹಿಡಿಯಬಹು ದೆಂದು ಹೇಳಿ ಈ ಬಾರಿ ಕಡಲೆ ಬೆಳೆಯನ್ನು ಜಿಲ್ಲೆ ರೈತರಿಗೆ ವಿಶೇಷ ವಾಗಿ ಪರಿಚಯಿಸಲಾಗಿದ್ದು, ಒಟ್ಟು 500 ಹೆಕ್ಟೇರ್‌ ಗುರಿ ಪೈಕಿ ಈಗಾಗಲೇ 244 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೇ ಬೆಳೆ ಬಿತ್ತನೆ ಆಗಿದೆ.ಮಂಜು ಬೀಳುವ ಹನಿಗಳಿಗೆ ಕಡಲೇ ಬೆಳೆ ರೈತರಿಗೆ ಸಿಗುತ್ತದೆಂಬ ಆಶಾಭಾವನೆ ಮೂಡಿದ್ದು, ಡಿಸೆಂಬರ್‌ ವರೆಗೂ ಹಿಂಗಾರು ಅವಧಿ ಇರುವುದರಿಂದ ಕಡಲೇ ಗುರಿ ಮಿರಿ ಬಿತ್ತನೆ ಆಗುವ ಸಾಧ್ಯತೆ ಇದೆ. ಈಗಾಗಲೇ ಕಡಲೇ ಜಿಲ್ಲೆಯಲ್ಲಿ ಬಾಗೇಪಲ್ಲಿ 35, ಚಿಕ್ಕಬಳ್ಳಾಪುರ 15, ಚಿಂತಾಮಣಿಯಲ್ಲಿ 45, ಗೌರಿಬಿದನೂರಲ್ಲಿ 335 ಹಾಗೂ ಗುಡಿಬಂಡೆ 2 ಹಾಗೂ ಶಿಡ್ಲಘಟ್ಟದಲ್ಲಿ 8 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೇ ಬಿತ್ತನೆ ನಡೆದಿದೆ.

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next