ರಾಮನಗರ: ಜಿಲ್ಲೆಯ ರೈತರ ಪ್ರಮುಖ ಉತ್ಪನ್ನಗಳಲ್ಲಿ ಒಂದಾಗಿರುವ ರೇಷ್ಮೆಗೂಡಿನ ಬೆಲೆ ಕಳೆದ ಮೂರು ತಿಂಗಳಿಂದ ಕುಸಿತ ಕಂಡಿದ್ದು, ಪ್ರತಿ ಕೆ.ಜಿ. ಗೂಡಿಗೆ 150ರಿಂದ 200 ರೂ. ನಷ್ಟು ಬೆಲೆ ಕುಸಿತವಾಗಿದೆ. ನಿರಂತರ ಬೆಲೆ ಕುಸಿತದಿಂದಾಗಿ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಬೆಳೆಯಲು ಮಾಡಿದ ಖರ್ಚು ಸಿಗದೆ ರೈತ ಕಂಗಾಲಾಗಿದ್ದಾನೆ.
ಕಳೆದ ಮಾರ್ಚ್‌ನಿಂದ ಬೆಲೆ ಕುಸಿತ ಆರಂಭಗೊಂಡಿದ್ದು ನಿರಂತರವಾಗಿ ಬೆಲೆ ಕುಸಿತ ಕಾಣುತ್ತಲೇ ಇದೆ. ಮಾರ್ಚ್ ಗಿಂತ ಮೊದಲು ಮಿಶ್ರತಳಿ ರೇಷ್ಮೆ ಗೂಡಿನ ಪ್ರತಿ ಕೆ.ಜಿ.ಗೆ 450 ರೂ. ನಿಂದ 600 ರೂ. ಇದ್ದರೆ, ಬೈವೋಲ್ಟಿನ್ ಬೆಲೆ 650 ರಿಂದ 800 ರೂ.ವರೆಗೆ ಇತ್ತು. ಆದರೆ, ಇದೀಗ ಮಿಶ್ರತಳಿ ರೇಷ್ಮೆ ಗೂಡಿಗೆ 300ರೂ. ನಿಂದ 350 ರೂ. ದೊರೆತರೆ ಹೆಚ್ಚು ಎಂಬಂತಾಗಿದೆ. ಇನ್ನು ಬೈವೋಲ್ಟನ್ ಗೂಡಿನ ಬೆಲೆ 450 ರೂ. ನಿಂದ 550 ರೂ.ಗೆ ಕುಸಿತಗೊಂಡಿದೆ.
ಪ್ರತಿದಿನ 50 ಟನ್ ಗೂಡು ವಹಿವಾಟು: ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆ ಏಷ್ಯಾದ ಅತಿದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ರಾಮನಗರ ಜಿಲ್ಲೆ ಮಾತ್ರವಲ್ಲದೆ ಉತ್ತರ ಕರ್ನಾಟಕ, ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಭಾಗದ ರೈತರುಗಳು ರೇಷ್ಮೆಗೂಡನ್ನು ಮಾರಾಟ ಮಾಡಲು ತರುತ್ತಾರೆ. ಪ್ರತಿದಿನ 2ರಿಂದ 3 ಸಾವಿರ ಮಂದಿ ರೈತರು ಇಲ್ಲಿಗೆ ರೇಷ್ಮೆ ಗೂಡು ತರಲಿದ್ದು, 40 ರಿಂದ 50 ಟನ್‌ಗಳಷ್ಟು ರೇಷ್ಮೆ ಗೂಡು ಮಾರಾಟವಾಗುತ್ತದೆ. ಇನ್ನು ರಾಮನಗರ ಮಾರುಕಟ್ಟೆ ಮಾತ್ರವಲ್ಲದೆ ಚನ್ನಪಟ್ಟಣ, ಕನಕಪುರ ಮಾರುಕಟ್ಟೆಗಳಲ್ಲಿ ರೇಷ್ಮೆಗೂಡಿನ ವಹಿವಾಟು ನಡೆಯುತ್ತಿದ್ದು, ರಾಮನಗರ ಜಿಲ್ಲೆ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ.
ರೇಷ್ಮೆಗೂಡಿನ ಧಾರಣೆ ಕುಸಿತ: ಕೊರೊನಾ ಬಳಿಕ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಹಿಂದಿರುಗಿದ ಸಾಕಷ್ಟು ಯುವಕರಿಗೆ ರೇಷ್ಮೆಕೃಷಿ ಆಧಾರವಾಗಿತ್ತು. ಕಳೆದ ಎರಡು ವರ್ಷಗಳಿಂದ ರೇಷ್ಮೆಗೆ ಬಂಪರ್ ಬೆಲೆ ದೊರೆತ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಗಾರರು ಖುಷಿಯಾಗಿದ್ದು, ವೈಜ್ಞಾನಿಕ ರೇಷ್ಮೆ ಹುಳು ಸಾಕಾಣಿಕಾ ಮನೆ, ಆಧುನಿಕ ಸಲಕರಣೆಗಳು ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ರೇಷ್ಮೆ ಕೃಷಿಕರು ಸಾಕಷ್ಟು ಬಂಡವಾಳ ಹೂಡಿದ್ದು, ಇದೀಗ ರೇಷ್ಮೆಗೂಡಿನ ಧಾರಣೆ ಕುಸಿದಿರುವುದು ರೈತರನ್ನು ಆತಂಕಕ್ಕೀಡುಮಾಡಿದೆ.
ಬೆಲೆ ಕುಸಿತಕ್ಕೆ ಕಾರಣ ವೇನು..?: ರೇಷ್ಮೆ ಗೂಡಿನ ಬೆಲೆ ಕುಸಿದಿರುವುಕ್ಕೆ ಮುಖ್ಯ ಕಾರಣ ಹೊರದೇಶಗಳಿಂದ ರೇಷ್ಮೆಯನ್ನು ಆಮದು ಮಾಡಿಕೊಂಡಿರುವುದು ಎಂಬುದು ರೇಷ್ಮೆ ಇಲಾಖೆ ಅಧಿಕಾರಿಗಳ ಮಾಹಿತಿಯಾಗಿದೆ. ಪ್ರಸಕ್ತ ವರ್ಷದಲ್ಲಿ ಭಾರತ 3600 ಮೆಟ್ರಿಕ್ ಟನ್‌ನಷ್ಟು ರೇಷ್ಮೆಯನ್ನು ಆಮದು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ರೇಷ್ಮೆ ಸರಿಯಾಗಿ ಬಳಕೆಯಾಗುತ್ತಿಲ್ಲ ಈ ಹಿನ್ನೆಲೆಯಲ್ಲಿ ಬೆಲೆ ಕುಸಿತವಾಗಿದೆ. ಅಲ್ಲದೆ, ರೇಷ್ಮೆ ಉತ್ಪಾದನೆ ಸಹ ಹೆಚ್ಚಾಗಿದ್ದು, ಶೇ.25ರಷ್ಟು ಉತ್ಪಾದನೆ ಹೆಚ್ಚಳವಾಗಿರುವುದು ಬೆಲೆ ಕಡಿಮೆಯಾಗುವುದಕ್ಕೆ ಕಾರಣ ಎನ್ನುತ್ತಾರೆ ಮಾರುಕಟ್ಟೆ ಅಧಿಕಾರಿಗಳು.
ಇನ್ನು ಕೆಲ ದಿನಗಳಿಂದ ಮೋಡಕವಿದ ವಾತಾವರಣ ನಿರ್ಮಾಣವಾಗಿರುವುದರಿಂದ ರೇಷ್ಮೆಗೂಡಿನಲ್ಲಿ ನೂಲುಸರಿಯಾಗಿ ಬಿಚ್ಚಲಾಗದು ಎಂಬ ಕಾರಣಕ್ಕೆ ರೀಲರ್ಗಳು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆಗೂಡು ಖರೀದಿಗೆ ಮುಂದಾಗುತ್ತಿಲ್ಲ. ಅಲ್ಲದೆ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ರೀಲರ್ಗಳು ಹಾಗೂ ನೂಲುಬಿಚ್ಚಾಣಿಕೆ ಕೇಂದ್ರಗಳು ಕೆಲಸ ಮಾಡುತ್ತಿಲ್ಲವಾದ ಕಾರಣ ಬೆಲೆ ಕುಸಿತ ಸ್ವಲ್ಪ ಹೆಚ್ಚಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಕಳೆದ ಮಾರ್ಚ್‌ನಿಂದ ರೇಷ್ಮೆಗೂಡಿನ ಧಾರಣೆ ಕುಸಿತ ಕಂಡಿದೆ. ಉತ್ಪಾದನೆ ಹೆಚ್ಚಾಗಿರುವುದು, ರೇಷ್ಮೆ ಮೂಮೆಂಟ್ ಕಡಿಮೆಯಾಗಿರುವುದು ಸೇರಿದಂತೆ ಹಲವು ಕಾರಣದಿಂದ ಬೆಲೆ ಕುಸಿತ ಕಂಡಿದೆ. ಮುಂದೆ ಸ್ವಲ್ಪದಿನಗಳಲ್ಲಿ ಬೆಲೆ ಸಮಸ್ಯೆ ಸರಿಯಾಗುವ ನಿರೀಕ್ಷೆ ಇದೆ.
● ರವಿ, ಉಪನಿರ್ದೇಶಕ, ರೇಷ್ಮೆ ಗೂಡಿನ ಮಾರುಕಟ್ಟೆ, ರಾಮನಗರ
ರೇಷ್ಮೆಗೂಡು ಬೆಳೆದು ಜೀವನ ಸಾಗಿಸುತ್ತಿದ್ದೆವು. ಇದೀಗ ಕೆ.ಜಿ. ರೇಷ್ಮೆ ಗೂಡಿಗೆ 250ರಿಂದ 300 ರೂ.ಬೆಲೆ ಸಿಕ್ಕರೆ ಹೆಚ್ಚು ಎಂಬಂತಾಗಿದೆ. ನಮಗೆ ಸಿಗುತ್ತಿರುವ ಬೆಲೆ ಏನೇನೂ ಸಾಲದು. ಕೂಡಲೇ ಸರ್ಕಾರ ರೇಷ್ಮೆ ಬೆಳೆಗಾರರ ನೆರವಿಗೆ ಧಾವಿಸಬೇಕು.
● ನಟರಾಜ್, ರೈತ
–ಸು.ನಾ.ನಂದಕುಮಾರ್