ರಬಕವಿ-ಬನಹಟ್ಟಿ: ಕಲಿತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿ, ಮುಂದೆ ಅಲ್ಲಿಯೇ ಅಧ್ಯಾಪಕನಾಗಿ ಸೇವೆ ಪ್ರಾರಂಭಿಸಿ, ಶಾಲೆಯ ಮುಖ್ಯ ಅಧ್ಯಾಪಕನಾಗಿ ನಿವೃತ್ತಿ ನಂತರ ಅದೇ ಸಂಸ್ಥೆಯ ನಿರ್ದೇಶಕನಾಗಿ, ಚುನಾಯಿತ ಕಾರ್ಯಾಧ್ಯಕ್ಷರಾಗಿ, ಹೀಗೆ ಸುಮಾರು ಎಂಟು ದಶಕಗಳ ಕಾಲ ಬನಹಟ್ಟಿಯ ಪ್ರತಿಷ್ಠಿತ ಜನತಾ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದ ಶ್ರೇಯಸ್ಸು ಶತಾಯುಷಿ ಎಂ.ಎಸ್. ಮುನ್ನೊಳ್ಳಿ ಅವರದು ಕ್ರಿಯಾಶೀಲ ವೈಶಿಷ್ಟ್ಯಮಯ ವ್ಯಕ್ತಿತ್ವ ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಹೇಳಿದರು.
ಶಿಕ್ಷಕ ದಿನಾಚರಣೆಯ ಅಂಗವಾಗಿ ಸೆ.5ರ ಮಂಗಳವಾರ ಸಂಜೆ ಬನಹಟ್ಟಿಯಲ್ಲಿ ನಡೆದ ನಿವೃತ್ತ ಶಿಕ್ಷಕ ಎಂ.ಎಸ್. ಮುನ್ನೊಳಿಯವರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
‘ಪ್ರಾಮಾಣಿಕತೆ ಮತ್ತು ಶುದ್ಧ ಭಾವದ ಆದರ್ಶ ಶಿಕ್ಷಕರಾಗಿ ಬೋಧನೆ ಕಾಯಕ ಮಾಡಿದವರು. ಅವರು ಈ ವೃತ್ತಿಯನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದ ಶ್ರೇಯಸ್ಸು ಮುನ್ನೊಳ್ಳಿ ಇವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಪೇಟೆ ದೈವ ಮಂಡಲದ ಚೇರ್ಮನ್ ಶ್ರೀಶೈಲಪ್ಪ ಧಬಾಡಿ ಅಧ್ಯಕ್ಷತೆ ವಹಿಸಿದ್ದರು. ಜನತಾ ಶಿಕ್ಷಣ ಸಂಘದ ಹಿಂದಿನ ಕಾರ್ಯಧ್ಯಕ್ಷ ಸುರೇಶ ಕೋಲಾರ ಮತ್ತು ಕಲ್ಲಪ್ಪ ಹೊರಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಶೇಖರ ಮುನ್ನೊಳ್ಳಿ ಮಹಾನಂದ ಹೊರಟ್ಟಿ, ಡಾ. ಬಸವರಾಜ ಮಾಲಾಪುರ, ಗಿರೀಶ ಟಕಾಳೆ, ಪ್ರವೀಣ್ ಬಕ್ಕನ್ನವರ ಮುಂತಾದವರು ಮಾತನಾಡಿದರು. ಮಹದೇವಪ್ಪ ಮುನ್ನೊಳ್ಳಿ ವಂದಿಸಿದರು ಪ್ರಭಾವತಿ ಬಕ್ಕನ್ನವರ ನಿರೂಪಿಸಿದರು.
ದೀಪಾ ಬಕ್ಕನ್ನವರ, ಗೀತಾ ಟಕಾಳೆ, ಡಾ. ಜ್ಯೋತಿ ಬಕ್ಕನ್ನವರ ಮುಂತಾದವರು ಉಪಸ್ಥಿತರಿದ್ದರು.