ಒಂದೆಡೆ ಸ್ವಚ್ಛ ಭಾರತ ಅಭಿಯಾನ ದೇಶಾದ್ಯಂತ ನಡೆಯುತ್ತಿದ್ದರೆ, ಬುದ್ಧಿವಂತರ ಜಿಲ್ಲೆ ಎಂದು ಗುರುತಿಸಿ ಕೊಂಡಿರುವ ಮಂಗಳೂರಿನಲ್ಲಿ ಕಸದ ಸಮಸ್ಯೆಗೆ ಮುಕ್ತಿ ದೊರಕಿಲ್ಲ. ಪ್ರವಾಸಿಗರು ಆಗಮಿಸುತ್ತಿರುವ, ಸದಾ ಸ್ವಚ್ಛವಾಗಿರಬೇಕಾಗಿದ್ದ ನಗರದ ಸುಲ್ತಾನ್ ಬತ್ತೇರಿ ಬಳಿ ಇರುವ ಫಲ್ಗುಣಿ ನದಿ ದಡವೀಗ ಕಲುಷಿತಗೊಂಡಿದೆ. ನದಿಯ ತುಂಬೆಲ್ಲ ಕಸ, ಪ್ಲಾಸ್ಟಿಕ್ ಬಾಟಲಿಗಳ ಸಹಿತ ಕಾರ್ಖಾನೆಗಳ ತ್ಯಾಜ್ಯ ನೀರು ನದಿಯನ್ನು ಸೇರುತ್ತಿದೆ.ಮತ್ತೊಂದೆಡೆ ಇದೇ ನೀರನ್ನು ದೈನಂದಿನ ಕೆಲಸ ಕಾರ್ಯಗಳಿಗೆ ಹೆಚ್ಚಿನ ಮಂದಿ ಉಪಯೋಗಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಮೈದುಂಬಿ ಹರಿಯುತ್ತಿದ್ದ ಫಲ್ಗುಣಿ ನದಿ ಈಗ ಸಂಪೂರ್ಣ ಕಲುಷಿತಗೊಂಡಿದ್ದು ಸುತ್ತಮುತ್ತಲಿನ ಮಂದಿ ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳಿಗೂ ಇದು ಕಾರಣ ಆಗುತ್ತಿದೆ.
ನಗರದ ಕೂಳೂರು, ತೋಕೂರು, ಮೇಲ್‌ಕೊಪ್ಪಲು, ಅತ್ರೆಬೈಲು, ಮರವೂರು ಸಹಿತ ಸುತ್ತಮುತ್ತಲಿನ ಅನೇಕ ಭಾಗದ ಜನರು ಈ ನೀರನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದೇ ಕಾರಣಕ್ಕೆ ಈ ನದಿಗೆ ಮರವೂರಿನಲ್ಲಿ ಅಣೆಕಟ್ಟು ನಿರ್ಮಿಸಿ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲಾಗುತ್ತಿದೆ. ಇಲ್ಲಿನ ತೋಕೂರು ಹಳ್ಳವಂತೂ ಸಂಪೂರ್ಣ ಮಲಿನಗೊಂಡಿದ್ದು, ಇದರಿಂದಾಗಿ ಸ್ಥಳೀಯರು ತರಕಾರಿ ಬೆಳೆ ಬೆಳೆಯುವುದನ್ನು ನಿಲ್ಲಿಸಿದ್ದಾರೆ.
ಈ ನದಿಯಲ್ಲಿ ಕೆಲವು ವರ್ಷಗಳ ಹಿಂದೆ ಮೀನುಗಳು ಯಥೇಚ್ಛವಾಗಿ ಸಿಗುತ್ತಿತ್ತು. ಆದರೆ ಕೊಳೆತ ತ್ಯಾಜ್ಯಗಳು, ಕಾರ್ಖಾನೆಯ ತ್ಯಾಜ್ಯದಿಂದ ಕೂಡಿದ ನೀರು ನದಿಗೆ ಸೇರುತ್ತಿರುವುದರಿಂದ ನದಿಯಲ್ಲಿರುವ ಜಲಚರಗಳೂ ಸಾವನ್ನಪ್ಪುತ್ತಿವೆ. ರಾತ್ರಿ ಹೊತ್ತಿನಲ್ಲಿ ಕೆಲವರು ಕೂಳೂರು ಸೇತುವೆಯಿಂದ ನದಿಗೆ ತ್ಯಾಜ್ಯಗಳನ್ನು ಹಾಕುತ್ತಿದ್ದಾರೆ. ಹೀಗಾಗಿ ತ್ಯಾಜ್ಯ ಹಾಕುವವರನ್ನು ತಡೆಯಲು ಸಂಬಂಧಪಟ್ಟವರು ಗಮನಹರಿಸಿ ಕಠಿನ ಕ್ರಮಕೈಗೊಳ್ಳಬೇಕು ಹಾಗೂ ನದಿ ಸ್ವಚ್ಛತೆ ಗಾಗಿಯೂ ಆಡಳಿತ ವರ್ಗ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕಿದೆ.
. ನವೀನ್ ಭಟ್ ಇಳಂತಿಲ