Advertisement
ಪ್ರಸಿದ್ಧ ಫ್ಯಾಷನ್ ಸಂಸ್ಥೆಯಾಗಿರುವ ನೈಕಾ ನ.10ರಂದು ಷೇರುಮಾರುಕಟ್ಟೆಗೆ ಕಾಲಿಟ್ಟಿದೆ. ಅತೀ ವಿಶೇಷವೆಂಬಂತೆ ಕಾಲಿಟ್ಟ ಕ್ಷಣವೇ ಅದೃಷ್ಟವೆಂಬಂತೆ ನೈಕಾದ ಷೇರುಗಳ ಮೌಲ್ಯ ಗಣನೀಯ ಏರಿಕೆ ಕಂಡಿದೆ. ಸಂಸ್ಥೆಯ ಪ್ರತೀ ಷೇರಿಗೆ 1,125 ರೂಪಾಯಿಯಂತೆ ಬಿಪಿಒ ಬಿಡುಗಡೆ ಮಾಡಲಾಗಿತ್ತು. ಆದರೆ 2,248 ರೂಪಾಯಿಯಂತೆ ಮೊದಲ ದಿನದ ಷೇರು ಸೂಚ್ಯಂಕ ಅಂತ್ಯವಾಗಿದೆ. ಒಂದೇ ದಿನದಲ್ಲಿ ಷೇರುಗಳ ಮೌಲ್ಯ ಬರೋಬ್ಬರಿ ಶೇ. 89 ಹೆಚ್ಚಾಗಿದೆ. ಈ ಮೂಲಕ ನೈಕಾ ಸಂಸ್ಥೆಯ ಮೌಲ್ಯ ಒಂದೇ ದಿನದಲ್ಲಿ 1 ಲಕ್ಷ ಕೋಟಿ ರೂಪಾಯಿ ದಾಟಿದೆ. ಹಾಗೆಯೇ ಸಂಸ್ಥೆಯ ಶೇ. 54 ಷೇರನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಫಲ್ಗುಣಿ ಅವರ ಮೌಲ್ಯವೂ 48,000 ಲಕ್ಷ ಕೋಟಿ ರೂಪಾಯಿ ದಾಟಿದೆ. ಕಳೆದ ಒಂಬತ್ತು ವರ್ಷಗಳಿಂದ ಸಂಸ್ಥೆಗಾಗಿ ದುಡಿದಿದ್ದ ಫಲ್ಗುಣಿ ಅವರು ಒಂದೇ ದಿನದಲ್ಲಿ ದೇಶದ ಅತ್ಯಂತ ಶ್ರೀಮಂತ ಮಹಿಳೆಯರ ಪಟ್ಟಿಯ ಎರಡನೇ ಸ್ಥಾನಕ್ಕೆ ಏರಿಬಿಟ್ಟಿದ್ದಾರೆ.
Related Articles
Advertisement
ನೈಕಾ ಎನ್ನುವ ಹೆಸರಿನ ಮೂಲ ಸಂಸ್ಕೃತ. ಸಂಸ್ಕೃತದಲ್ಲಿ ನಾಯಿಕಾ ಎಂದರೆ ನಾಯಕಿ ಎನ್ನುವ ಅರ್ಥವಿದೆ. ಅದೇ ಅರ್ಥದಲ್ಲಿ ಫಲ್ಗುಣಿ ಅವರು ತಮ್ಮ ಸಂಸ್ಥೆಗೆ ಹೆಸರಿಟ್ಟಿದ್ದಾರೆ. ಹೆಣ್ಣು ಮಕ್ಕಳಿಗೆ ವಯಸ್ಸು, ಮಕ್ಕಳು, ಕುಟುಂಬ ಎನ್ನುವುದು ಯಾವುದೇ ಕಾರಣಕ್ಕೂ ಒಂದು ತಡೆಯಲ್ಲ ಎಂದು ಅವರು ಬಲವಾಗಿ ನಂಬುತ್ತಾರೆ, ಹಾಗೆಯೇ ನಡೆದು ತೋರಿಸಿದ್ದಾರೆ ಕೂಡ. “ನಮ್ಮ ಹೆಣ್ಣು ಮಕ್ಕಳು ತಮಗೆ ತಾವೇ ಆವಶ್ಯಕತೆ ಯಿಲ್ಲದ ಚಿಂತೆಗೆ ದೂಡಿ ಕೊಳ್ಳುತ್ತಾರೆ. ಇಂದು ಎಷ್ಟೋ ಹೆಣ್ಣು ಮಕ್ಕಳು ತಮ್ಮ ಮಕ್ಕಳ ಬದುಕನ್ನು ಸಂಭಾಳಿಸುವುದರ ಜತೆ ಯೇ ಶ್ರೇಷ್ಠ ಉದ್ಯಮಿಗಳೂ ಆಗಿದ್ದಾರೆ. ಯಾವುದೇ ಕಾರಣ ಕ್ಕೂ ಅದೊಂದು ತಡೆಯಲ್ಲ. ನನಗೆ ಮಾಡಬೇಕು ಎನಿಸಿದಾಗ ನಾನು ಮಾಡಿದೆ. ನನಗೆ ಕನಸು ಕಾಣಬೇಕೆನಿಸಿ ದಾಗ ನಾನು ಕಂಡೇ. ಉದ್ಯಮದಲ್ಲಿ ಯಾವುದೇ ಅನುಭವವೇ ಇಲ್ಲದ ನಾನು ಒಂಬತ್ತು ವರ್ಷಗಳ ಹಿಂದೆ ನನ್ನ ಕನಸನ್ನು ನನಸು ಮಾಡಿಕೊಳ್ಳಲು ಹೊರಟೆ. ಹಾಗೆಯೇ ಈಗಿನ ಪ್ರತೀ ಹೆಣ್ಣು ಮಕ್ಕಳು ಅವರ ಬದುಕಿನ ನಾಯಕಿ ಅವರೇ ಆಗಬೇಕು’ ಎಂದು ಹೇಳುತ್ತಾರೆ ಅವರು.
ಸೋಶಿಯಲ್ ಮೀಡಿಯಾ ನನಗೆ ಬೇಡ:
ಸೋಶಿಯಲ್ ಮೀಡಿಯಾ ಇತ್ತೀಚಿನ ದಿನಗಳಲ್ಲಿ ಅತೀ ಸಾಮಾನ್ಯ ವಿಚಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಯವರಿಂದ ಹಿಡಿದು ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್ ಮಸ್ಕ್ವರೆಗೆ ಬಹುತೇಕ ಗಣ್ಯರು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಫಲ್ಗುಣಿ ಅವರು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಇಲ್ಲ. ಅವರದ್ದೊಂದು ಟ್ವಿಟರ್ ಖಾತೆಯಿದೆಯಾದರೂ ನೈಕಾ ಸಂಸ್ಥೆ ಆರಂಭಿಸಿದ ಅನಂತರ ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಅವರು ಕೇವಲ ಒಂದು ಟ್ವೀಟ್ ಮಾಡಿದ್ದಾರಷ್ಟೇ. ಹಾಗೆಂದ ಮಾತ್ರಕ್ಕೆ ಅವರಿಗೆ ಸೋಶಿಯಲ್ ಮೀಡಿಯಾಗಳ ಬಗ್ಗೆ ಬೇಸರವೂ ಇಲ್ಲವಂತೆ. “ಸೋಶಿಯಲ್ ಮೀಡಿಯಾ ಎನ್ನುವುದು ಒಳ್ಳೆಯ ವಿಚಾರವೇ. ಆದರೆ ಅದಕ್ಕೆ ಸಾಕಷ್ಟು ಸಮಯ ಬೇಕು. ನನಗೆ ಸಿಗುವ ಎಲ್ಲ ಸಮಯವನ್ನು ನಾನು ಸ್ಪ್ರೆಡ್ ಶೀಟ್ ಎದುರೇ ಕಳೆಯುತ್ತೇನೆ. ಹಾಗಿರುವಾಗ ನನಗೆ ಸೋಶಿಯಲ್ ಮೀಡಿಯಾಗೆಂದು ಯಾವುದೇ ಸಮಯ ಸಿಗುವುದೇ ಇಲ್ಲ. ನನಗೆ ಅತೀ ಇಷ್ಟವಾಗುವುದು ಸೋಶಿಯಲ್ ಮೀಡಿಯಾ ಹಿಂಬಾಲಕರ ಸಂಖ್ಯೆಯಲ್ಲ ಬದಲಾಗಿ ಸ್ಪ್ರೆಡ್‌ಶೀಟ್‌ನಲ್ಲಿರುವ ಸಂಖ್ಯೆ’ ಸೋಶೀಯಲ್ ಮೀಡಿಯಾ ಬಳಸದಿರುವುದಕ್ಕೆ ಫಲ್ಗುಣಿ ಅವರ ಕಾರಣವಿದು.
ಸ್ವಯಂ ಪ್ರಯತ್ನದಿಂದ ಶ್ರೀಮಂತರಾದವರು:
ಸದ್ಯ ಫಲ್ಗುಣಿ ನಾಯರ್ ಅವರು ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆ ಪಟ್ಟಿ ಯ ಮೊದಲನೇ ಸ್ಥಾನದಲ್ಲಿ ಜಿಂದಾಲ್ ಗ್ರೂಪ್ಸ್ ಸಂಸ್ಥೆಯ ಸಂಸ್ಥಾಪಕ ಓಂ ಪ್ರಕಾಶ್ ಜಿಂದಾಲ್ ಅವರ ಪತ್ನಿ ಸಾವಿತ್ರಿ ಜಿಂದಾಲ್ ಇದ್ದಾರೆ. ಆದರೆ ಸ್ವಯಂ ದುಡಿಮೆ ಯಿಂದ ಶ್ರೀಮಂತರ ಪಟ್ಟಿ ಸೇರಿದವರಲ್ಲಿ ಅಗ್ರ ಸ್ಥಾನಕ್ಕೆ ಫಲ್ಗುಣಿ ಸೇರಿದ್ದಾರೆ.
ಫಲ್ಗುಣಿ ನಾಯರ್ ಅವರು ನಮ್ಮ ದೇಶದ ಹೆಣ್ಣು ಮಕ್ಕಳಿಗೆ ನಿಜ ಸ್ಫೂರ್ತಿ. “ಮದುವೆಯಾಗಿ, ಮಕ್ಕಳಾ ಯಿತು.. ಇನ್ನೇನು ಮಾಡಲು ಸಾಧ್ಯ. ನನ್ನ ಜೀವನವೇ ಇಷ್ಟು’ ಎಂದು ಕೊರಗುವ ಅದೆಷ್ಟೋ ಮಹಿಳೆಯರಿಗೆ ಫಲ್ಗುಣಿಯವರ ಕಥೆ ನಿಜಕ್ಕೂ ಬಡಿದೆಚ್ಚರಿಸುವಂತಹ ಕಥೆಯೇ. ಮಕ್ಕಳಾಗಿ ಮಕ್ಕಳ ಜೀವನ ಇನ್ನೇನು ಸೆಟಲ್ ಆಗುತ್ತಿದೆ ಎನ್ನುವ ಸಮಯದಲ್ಲೂ ನಿಮ್ಮ ಕನಸಿಗೆ ರೆಕ್ಕೆ ಕಟ್ಟಲು ಸಾಧ್ಯ ಎನ್ನುವುದಕ್ಕೆ ಫಲ್ಗುಣಿಯವರೇ ನಿಜ ನಿದರ್ಶನ.
-ಮಂದಾರ ಸಾಗರ