ದಾಂಡೇಲಿ: ನಗರದ ಸಮೀಪದಲ್ಲಿರುವ ಹಸನ್ಮಾಳದಲ್ಲಿ ಬಿದ್ದು ಗಾಯಗೊಂಡು ನರಾಳುಡುತ್ತಿದ್ದ ಗಿಡುಗ ಪಕ್ಷಿಯೊಂದನ್ನು ಸ್ಥಳೀಯ ಯುವಕರು ರಕ್ಷಿಸಿ, ಉಪಚರಿಸಿ, ಕೊನೆಗೆ ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ನಡೆದಿದೆ.
ಹಸನ್ಮಾಳದಲ್ಲಿರುವ ವೈಟ್ ಪೆಟಲ್ ಹೋಂ ಸ್ಟೇ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಿಡುಗವೊಂದು ಬಿದ್ದು ಗಾಯಗೊಂಡು ಜೀವ ಉಳಿಸಲು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಅಲ್ಲೆ ಇದ್ದ ವೈಟ್ ಪೆಟಲ್ ಹೋಂಸ್ಟೇಯ ವ್ಯವಸ್ಥಾಪಕರಾದ ಕುಮಾರ್ ಅವರು ಸ್ಥಳಕ್ಕೆ ಹೋಗಿ ಗಿಡುಗ ಹಕ್ಕಿಯನ್ನು ಹೋಂಸ್ಟೇಗೆ ತಂದು ನೀರುಣಿಸಿ, ಗಾಯಕ್ಕೆ ಅರಸಿನ ಪುಡಿ ಹಚ್ಚಿ ಉಪಚರಿಸಿದ್ದಾರೆ.
ಈ ಸಂದರ್ಭದಲ್ಲಿ ಹೋಂಸ್ಟೇಯ ಸಿಬ್ಬಂದಿ ಪ್ರಕಾಶ್ ಸಹಕರಿಸಿದ್ದಾರೆ. ಉಪಚರಿಸಿದ ಬಳಿಕ ಗಿಡುಗ ತಕ್ಕಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದಂತೆಯೆ ಕುಮಾರ್ ಮತ್ತು ಪ್ರಕಾಶ್ ಅವರು ಗಿಡುಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಯುವಕರಿಬ್ಬರ ವನ್ಯ ಕಾಳಜಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಗಿಡುಗವನ್ನು ರಕ್ಷಿಸಿದ ಕುಮಾರ್ ಮತ್ತು ಪ್ರಕಾಶ್ ಅವರಿಗೆ ಅನಿಲ್ ಪಾಟ್ನೇಕರ್ ಹಾಗೂ ಶಮಲ್ ಅಬ್ದುಲ್ಲಾ ಅವರು ಬಹುಮಾನವನ್ನು ಘೋಷಿಸಿದ್ದಾರೆ.