Advertisement

ಫ‌ಖರ್‌ ದ್ವಿಶತಕ; ಪಾಕ್‌ ದಾಖಲೆ ಆಟ

06:00 AM Jul 21, 2018 | Team Udayavani |

ಬುಲವಾಯೊ: ಸಾಲು ಸಾಲು ದಾಖಲೆಗಳ ಮೂಲಕ ಆತಿಥೇಯ ಜಿಂಬಾಬ್ವೆ ಮೇಲೆ ಸವಾರಿ ಮಾಡಿದ ಪಾಕಿಸ್ಥಾನ, ಶುಕ್ರವಾರದ 4ನೇ ಏಕದಿನ ಪಂದ್ಯವನ್ನು 244 ರನ್ನುಗಳಿಂದ ಗೆದ್ದು 5 ಪಂದ್ಯ ಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ಪಾಕಿಸ್ಥಾನ ಪರ ಮೊದಲ ದ್ವಿಶತಕ ಬಾರಿಸಿದ ಫ‌ಖರ್‌ ಜಮಾನ್‌, ಮೊದಲ ವಿಕೆಟಿಗೆ ಫ‌ಖರ್‌ ಜಮಾನ್‌-ಇಮಾಮ್‌ ಉಲ್‌ ಹಕ್‌ ಜೋಡಿಯ 304 ರನ್ನುಗಳ ವಿಶ್ವದಾಖಲೆಯ ಜತೆಯಾಟ, ಏಕದಿನ ಇತಿಹಾಸದಲ್ಲಿ ಪಾಕಿಸ್ಥಾನದ ಗರಿಷ್ಠ ಸ್ಕೋರ್‌… ಈ ರೀತಿಯಾಗಿ ಬುಲವಾಯೊ ಪಂದ್ಯ ಇತಿಹಾಸ ನಿರ್ಮಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ ಕೇವಲ ಒಂದು ವಿಕೆಟಿಗೆ 399 ರನ್‌ ಪೇರಿಸಿತು. ಇದರಲ್ಲಿ ಫ‌ಖರ್‌ ಜಮಾನ್‌ ಪಾಲು ಅಜೇಯ 210 ರನ್‌. ಅವರ ಜತೆಗಾರ ಇಮಾಮ್‌ ಉಲ್‌ ಹಕ್‌ 113 ರನ್‌ ಬಾರಿಸಿದರು. ಜವಾಬಿತ್ತ ಜಿಂಬಾಬ್ವೆ 42.4 ಓವರ್‌ಗಳಲ್ಲಿ 155ಕ್ಕೆ ಆಲೌಟ್‌ ಆಯಿತು. ಶಾಬಾದ್‌ ಖಾನ್‌ 4 ವಿಕೆಟ್‌ ಉರುಳಿಸಿದರು.

ಪಾಕ್‌ ಪರ ಮೊದಲ ಡಬಲ್‌ ಸೆಂಚುರಿ
17ನೇ ಪಂದ್ಯವಾಡುತ್ತಿರುವ ಎಡಗೈ ಆರಂಭಕಾರ ಫ‌ಖರ್‌ ಜಮಾನ್‌ ಪಾಕಿಸ್ಥಾನ ಏಕದಿನ ಇತಿಹಾಸದಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರನಾಗಿ ಮೂಡಿಬಂದರು. ಜಿಂಬಾಬ್ವೆ ಬೌಲರ್‌ಗಳಿಗೆ ಜಿಗುಟಾಗಿ ಕಾಡಿದ ಅವರು 156 ಎಸೆತಗಳಿಗೆ ಜವಾಬಿತ್ತರು. ಸಿಡಿಸಿದ್ದು 24 ಬೌಂಡರಿ ಹಾಗೂ 5 ಸಿಕ್ಸರ್‌. 1997ರಷ್ಟು ಹಿಂದೆ ಭಾರತದೆದುರಿನ ಚೆನ್ನೈ ಪಂದ್ಯದಲ್ಲಿ ಆರಂಭಕಾರ ಸಯೀದ್‌ ಅನ್ವರ್‌ 194 ರನ್‌ ಬಾರಿಸಿದ್ದು ಪಾಕ್‌ ಕ್ರಿಕೆಟಿಗನೊಬ್ಬನ ಈವರೆಗಿನ ಸರ್ವಾಧಿಕ ಮೊತ್ತವಾಗಿತ್ತು. ನಿಧಾನ ಗತಿಯಲ್ಲಿ ಆಡಿದ ಇಮಾಮ್‌ 122 ಎಸೆತಗಳಿಂದ 113 ರನ್‌ ಬಾರಿಸಿದರು (8 ಬೌಂಡರಿ).

ಫ‌ಖರ್‌ ಜಮಾನ್‌-ಇಮಾಮ್‌ ಉಲ್‌ ಹಕ್‌ ಜೋಡಿ ಮೊದಲ ವಿಕೆಟಿಗೆ 42 ಓವರ್‌ಗಳಲ್ಲಿ 304 ರನ್‌ ಪೇರಿಸಿತು. ಇದು ಏಕದಿನದಲ್ಲಿ ಮೊದಲ ವಿಕೆಟಿಗೆ ದಾಖಲಾದ ಮೊದಲ ತ್ರಿಶತಕದ ಜತೆಯಾಟ. ಒಟ್ಟಾರೆಯಾಗಿ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ದಾಖಲಾದ 4ನೇ ತ್ರಿಶತಕದ ಜತೆಯಾಟ. ಇದರೊಂದಿಗೆ ಇಂಗ್ಲೆಂಡ್‌ ಎದುರಿನ 2006ರ ಲೀಡ್ಸ್‌ ಪಂದ್ಯದಲ್ಲಿ ಸನತ್‌ ಜಯಸೂರ್ಯ-ಉಪುಲ್‌ ತರಂಗ ಪ್ರಥಮ ವಿಕೆಟಿಗೆ 286 ರನ್‌ ಒಟ್ಟುಗೂಡಿಸಿದ ದಾಖಲೆ ಪತನಗೊಂಡಿತು.

ಪಾಕಿಸ್ಥಾನ ಕೇವಲ ಒಂದು ರನ್‌ ಕೊರತೆಯಿಂದ 400 ರನ್ನುಗಳ ಕ್ಲಬ್‌ ಸೇರುವಲ್ಲಿ ವಿಫ‌ಲವಾಯಿತು. ಆದರೆ ಇದು ಪಾಕಿಸ್ಥಾನದ ಗರಿಷ್ಠ ಸ್ಕೋರ್‌ ಆಗಿ ದಾಖಲಾಯಿತು. ಇದಕ್ಕೂ ಮುನ್ನ 2010ರ ಬಾಂಗ್ಲಾದೇಶ ವಿರುದ್ಧದ ಡಂಬುಲ ಪಂದ್ಯದಲ್ಲಿ 7 ವಿಕೆಟಿಗೆ 385 ರನ್‌ ಗಳಿಸಿದ್ದು ಸರ್ವಾಧಿಕ ಮೊತ್ತವಾಗಿತ್ತು.

Advertisement

ಏಕದಿನ ದ್ವಿಶತಕ ಸರದಾರರು


 

Advertisement

Udayavani is now on Telegram. Click here to join our channel and stay updated with the latest news.

Next