ಬೈಲಹೊಂಗಲ: ತಾಲೂಕಿನಾದ್ಯಂತ ನಕಲಿ ಪತ್ರಕರ್ತರು ಸೇರಿದಂತೆ ನಕಲಿ ಯುಟ್ಯೂಬ್ ಗಳ ಹಾವಳಿ ಹೆಚ್ಚಾಗಿದ್ದು ಅಧಿಕಾರಿ, ಸಿಬ್ಬಂದಿಗಳು ಬೆಚ್ಚಿ ಬೀಳುವಂತಾಗಿದೆ.
ಬೈಲಹೊಂಗಲ ಪಟ್ಟಣದ ತಾಲೂಕು ಮಟ್ಟದ ಕಚೇರಿಗಳು, ಮಿನಿ ವಿಧಾನಸೌಧ, ಎಆರ್ ಟಿಓ ಕಚೇರಿ, ಪುರಸಭೆ, ತಾ.ಪಂ ಕಚೇರಿ, ತಹಶೀಲ್ದಾರ ಕಛೇರಿ ಸೇರಿದಂತೆ ತಾಲೂಕಿನ ಸರಕಾರಿಯ ಹಲವಾರು ಕಛೇರಿ, ಗ್ರಾಮ ಪಂಚಾಯತಿ, ಪ್ರಾಥಮಿಕ ಸರಕಾರಿ ಆಸ್ಪತ್ರೆಗಳು, ಸಹಕಾರಿ ಸಂಘ, ನ್ಯಾಯಬೆಲೆ ಅಂಗಡಿ, ಅಂಗನವಾಡಿ ಮತ್ತು ಸಂಘ-ಸಂಸ್ಥೆ, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅಧಿಕಾರಿ, ಸಿಬ್ಬಂದಿಗಳಿಗೆ ನಿತ್ಯ ಬೆದರಿಕೆ ಹಾಕುವುದು ಕಂಡು ಬರುತ್ತಿದೆ.
ಎನೇನೋ ಸಬೂಬು ಹೇಳಿ ಅಧಿಕಾರಿ, ಸಿಬ್ಬಂದಿಗಳನ್ನು ಹಣಕ್ಕಾಗಿ ಹೆದರಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ. ಸರಕಾರಿ ಮಾಹಿತಿ ಹಕ್ಕು ನೆಪದಲ್ಲಿ ಅವರಿಗೆ ಕಿರುಕುಳ ಕೊಡಲಾಗುತ್ತಿದ್ದು ಇಂಥಹ ನಕಲಿ ಪತ್ರಕರ್ತರ ಹಾವಳಿಯಿಂದ ನೌಕರರಿಗೆ ಕರ್ತವ್ಯ ಮಾಡುವುದು ಸಾಕಾಗಿ ಹೋಗಿದೆ ಎಂದ ಹೇಳಲಾಗುತ್ತಿದೆ. ಕಾನೂನು ಬಾಹೀರ ಅನಧಿಕೃತವಾಗಿ ವಾಹನಗಳ ಮೇಲೆ ಪ್ರೆಸ್ ಅಂತಲೂ ಬರೆಯಿಸಿಕೊಳ್ಳಲಾಗುತ್ತಿದೆ.
ಅಂತಹ ಅನಧಿಕೃತ ವಾಹನಗಳು ತಾಲೂಕಿನಲ್ಲಿ ಕಂಡು ಬಂದಲ್ಲಿ ಪೊಲೀಸರು ಸೂಕ್ತವಾಗಿ ಪರಿಶೀಲಿಸಿ ದಿಟ್ಟ ಕ್ರಮ ಜರುಗಿಸಬೇಕು. ಪತ್ರಕರ್ತರಾದವರು ಸತ್ಯಾಂಶ ಬಯಲಿಗೆಳೆದು ಬರೆಯಬೇಕೇ ವಿನಃ ಈ ರೀತಿ ಮಾಡುವುದರಿಂದ ಪತ್ರಿಕಾ ವೃತ್ತಿಗೆ ಅಪಮಾನವಾಗುತ್ತದೆ.
ಪ್ರಜಾಪ್ರಭುತ್ವದ ಪವಿತ್ರ ನಾಲ್ಕನೇ ಸ್ಥಂಭವಾದ ಪತ್ರಿಕಾ ರಂಗ ಸಮಾಜದಲ್ಲಿ ಅತೀ ಶ್ರೇಷ್ಠವಾಗಿದ್ದು ಈಚೆಗೆ ಇದನ್ನೇ ನಕಲಿಗಳು ಮೂಲ ಉದ್ಯೋಗವಾಗಿಸಿಕೊಂಡು ಜನರನ್ನು, ಅಧಿಕಾರಿಗಳನ್ನು ವಂಚಿಸಲಾಗುತ್ತಿದ್ದಾರೆ. ಬೇರೆ-ಬೇರೆ ಊರುಗಳಿಂದ ನಕಲಿ ವಾರಪತ್ರಿಕೆಯವರು, ನಕಲಿ ಯೂಟ್ಯೂಬ್ ಪತ್ರಕರ್ತರು ಆಗಮಿಸುತ್ತಿದ್ದು, ತಾಲೂಕಿನ ಯಾವುದೇ ಪ್ರದೇಶದಲ್ಲಿ ಇಂತವರು ಕಂಡು ಬಂದರೆ ಕರ್ನಾಟಕ ಬೈಲಹೊಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ರಿ) ಬೈಲಹೊಂಗಲ ಇಲ್ಲಿಗೆ ಅಥವಾ ಸಮೀಪದ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕೆಂದು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ತುರಮರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ