Advertisement

ನಕಲಿ ವೆಬ್‌ಸೈಟ್‌ ತೆರೆದು ಅರ್ಚಕರಿಂದ ಭಾರೀ ಮೋಸ

10:55 AM Jun 23, 2022 | Team Udayavani |

ಕಲಬುರಗಿ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಜಿಲ್ಲೆಯ ಅಫ‌ಜಲಪುರ ತಾಲೂಕಿನ ಸುಕ್ಷೇತ್ರ ದೇವಲ್‌ ಗಾಣಗಾಪುರದ ದತ್ತಾತ್ರೇಯ ಹೆಸರಿನಲ್ಲಿ ದೇವಾಲಯದ ಅರ್ಚಕ (ಪೂಜಾರಿ)ರು ನಕಲಿ ವೆಬ್‌ಸೈಟ್‌ ತೆರೆದು ಕೋಟ್ಯಂತರ ರೂ. ಗುಳುಂ ಮಾಡಿರುವುದು ಬೆಳಕಿಗೆ ಬಂದಿದೆ.

Advertisement

ಮುಜರಾಯಿ ಇಲಾಖೆಗೆ ಸೇರಿರುವ ದತ್ತಾತ್ರೇಯ ದೇವಸ್ಥಾನದ ಆದಾಯವು ಸರ್ಕಾರಕ್ಕೆ ಸೇರಬೇಕು. ಆದರೆ ಅರ್ಚಕರು ಏಳೆಂಟು ನಕಲಿ ವೆಬ್‌ಸೈಟ್‌ ತೆರೆದು ಭಕ್ತರಿಂದ ಹಣ ಪಡೆದು ಲಪಟಾಯಿಸಿರುವ ಪ್ರಕರಣ ಇದಾಗಿದೆ.

ಐದಾರು ವರ್ಷಗಳಿಂದ ಈ ದಂಧೆ ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಬರಲಾ ಗಿದ್ದು, ಕೋಟ್ಯಂತರ ರೂ. ಹಗರಣ ಇದಾಗಿದೆ. ಜಿಲ್ಲಾಧಿಕಾರಿ ಹಾಗೂ ದೇವಲ್‌ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಯಶವಂತ ಗುರುಕರ್‌ ಅವರು ಮಂಗಳವಾರ ಅಫ‌ಜಲಪುರದಲ್ಲಿ ಜನಸ್ಪಂದನ ನಡೆಸಿ ವಾಪಸ್‌ ಬರುವಾಗ ದೇವಲ್‌ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳಿದ್ದರು.

ದೇವಸ್ಥಾನಕ್ಕೆ ತೆರಳಿದ ಜಿಲ್ಲಾಧಿಕಾರಿ ದೇವಸ್ಥಾನ ವೆಬ್‌ಸೈಟ್‌ ಪರಿಶೀಲಿಸಿದ್ದಾರೆ. ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ (shri dattatreya temple. ghanagapur)ಇದಾಗಿದೆ. ಆದರೆ ಅರ್ಚಕರು ಇತರ ಆರೇಳು ಮಾದರಿಯಲ್ಲಿ ನಕಲಿ ಇಮೇಲ್‌ ಹಾಗೂ ವೆಬ್‌ಸೈಟ್‌ಗಳನ್ನು ರೂಪಿಸಿ ಭಕ್ತರಿಂದ ನೇರವಾಗಿ ಹಣವನ್ನು ಸಂಗ್ರಹಿಸಿ, ತಮ್ಮ ಜೇಬಿಗೆ ಇಳಿಸಿಕೊಂಡಿದ್ದು ಜಿಲ್ಲಾಧಿಕಾರಿ ಭೇಟಿ ವೇಳೆ ಪತ್ತೆಯಾಗಿದೆ.

ಲೂಟಿ ಹೇಗೆ?: ಭಕ್ತರು ವಿಶೇಷ  ಪೂಜೆ ಸಲ್ಲಿಸಲು ಹಾಗೂ ವಿಶೇಷ ದರ್ಶನ ಪಡೆಯಲು  ಕಡಿಮೆ ಶುಲ್ಕವಿದೆ. ಆದರೆ ಅರ್ಚಕರು ನಕಲಿ ವೆಬ್‌ ಸೈಟ್‌ನಲ್ಲಿ ಬುಕ್‌ ಮಾಡಿ ಪೂಜೆಗೆ 10ರಿಂದ 50 ಸಾವಿರ  ರೂ. ಆಗುತ್ತದೆ ಎಂದು ಹೇಳಿ ಆನ್‌ಲೈನ್‌ನಲ್ಲಿ ಬುಕ್‌  ಮಾಡಿಸಿಕೊಂಡಿದ್ದಾರೆ. ಭಕ್ತರು ಆನ್‌ಲೈನ್‌ ಮುಖಾಂತರ  ಬುಕ್‌ ಮಾಡಿರುವ ಹಣ ದೇವಸ್ಥಾನದ ಅಭಿವೃದ್ಧಿಗೆ  ಹೋಗುತ್ತದೆ ಎಂದು ತಿಳಿದುಕೊಂಡು ಹಣ ಪಾವತಿ  ಮಾಡಿದ್ದಾರೆ. ಈ ದಂಧೆ ಕಳೆದ ಐದಾರು ವರ್ಷಗಳಿಂದ  ನಡೆದುಕೊಂಡು ಬಂದು ನೂರು ಕೋಟಿ ರೂ.ಗೂ  ಅಧಿಕ ಅವ್ಯವಹಾರ ಎಸಗಲಾಗಿದೆ ಎಂದು ಗೊತ್ತಾಗಿದೆ.  ಜಿಲ್ಲಾಧಿಕಾರಿ ಪರಿಶೀಲನೆ ಮಾಡಿದಾಗ ವೆಬ್‌ಸೈಟ್‌  ಮೂಲಕ ಸಂದಾಯವಾದ ಹಣವು ನಕಲಿ ಖಾತೆಯಲ್ಲಿ  20 ಕೋಟಿ ರೂ.ಗೂಅಧಿಕ ಇರುವುದು ಪತ್ತೆಯಾಗಿದೆ  ಎಂದು ಮೂಲಗಳು ತಿಳಿಸಿವೆ.

Advertisement

ಹುಂಡಿಯಲ್ಲೂ ಕಳ್ಳತನ ಶಂಕೆ?: ಅಫ‌ಜಲಪುರ  ತಾಲೂಕಿನ ಘತ್ತರಗಿ ಭಾಗ್ಯವಂತಿ ದೇವಸ್ಥಾನದ ಹುಂಡಿ  ತೆರೆದಾಗ ಸುಮಾರು ಒಂದು ಕೋಟಿ  ರೂ. ಸಂಗ್ರಹವಾಗಿರುತ್ತದೆ. ಆದರೆ  ದತ್ತಾತ್ರೇಯ ದೇವಸ್ಥಾನದ ಹುಂಡಿ  ತೆರೆದಾಗ 50 ರಿಂದ 60 ಲಕ್ಷ ರೂ. ಮಾತ್ರ  ಸಂಗ್ರಹವಾಗಿರುತ್ತದೆ. ಅಂದರೆ ಸಿಸಿ  ಕ್ಯಾಮರಾ ಬಂದ್‌ ಮಾಡಿ ಹುಂಡಿಯ  ಹಣ ಸಹ ಲಪಟಾಯಿಸಿರುವ ಆರೋಪ  ಕೇಳಿ ಬರುತ್ತಿದೆ.

ಇದು ಆನ್‌ಲೈನ್‌ ವೆಬ್‌ಸೈಟ್‌  ಮೂಲಕ ಅವ್ಯವಹಾರವಾದರೆ ಇನ್ನು  ವಿಐಪಿ ದರ್ಶನ ಮೂಲಕ ಅರ್ಚಕರು  ಪ್ರತಿ ದಿನ ಲಕ್ಷಾಂತರ ರೂ. ಜೇಬಿಗೆ  ಹಾಕಿರುವ ದೂರು ಸಹ ಇದೇ ಸಂದರ್ಭದಲ್ಲಿ  ಜಿಲ್ಲಾಧಿಕಾರಿ ಗಮನಕ್ಕೆ ಬಂದಿದೆ. ಒಟ್ಟಾರೆ ದೇವಸ್ಥಾನದ  ಅವ್ಯವಹಾರ ತನಿಖೆ ನಡೆದಲ್ಲಿ ಇನ್ನಷ್ಟು ಹಗರಣಗಳು  ಬಯಲಿಗೆ ಬರುವ ಸಾಧ್ಯತೆಗಳಿವೆ. ಇದರ ಹಿಂದೆ ದೊಡ್ಡ  ಪೂಜಾರಿಗಳ ಹಾಗೂ ಕೆಲ ರಾಜಕೀಯ ಮುಖಂಡರ  ಕೈವಾಡ ಸಹ ಇರಬಹುದೆಂದು ಶಂಕಿಸಲಾಗಿದೆ.

ಎಫ್ಐಆರ್‌  ದಾಖಲಿಸಲು ಇಒ ಅರ್ಜಿ

ದೇವಲ್‌ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ  ಅರ್ಚಕರು ನಕಲಿ ವೆಬ್‌ಸೈಟ್‌ ರೂಪಿಸಿಕೊಂಡು  ಸರ್ಕಾರದ ಬೊಕ್ಕಸಕ್ಕೆ ಹಾನಿ  ಮಾಡಿರುವುದು ಕಂಡು  ಬಂದಿದೆ. ಹೀಗಾಗಿ ತನಿಖೆ  ಮಾಡಿ ಸೂಕ್ತ ಕ್ರಮ  ಕೈಗೊಳ್ಳುವಂತೆ ಅಫ‌ಜ  ಲಪುರ ತಾಲೂಕು  ಕಾರ್ಯನಿರ್ವಾ ಹಕ  ಅಧಿಕಾರಿ ನಾಮದೇವ  ಅವರು ದೇವಲ್‌  ಗಾಣಗಾಪೂರ ಠಾಣೆಗೆ ದೂರಿನ ಅರ್ಜಿ ಸಲ್ಲಿಸಿದ್ದಾರೆ.  ನಕಲಿ ವೆಬ್‌ಸೈಟ್‌ ಖಾತೆ ತೆರೆದಿರುವ  ವಲ್ಲಭ ತಂದೆ ದಿನಕರ ಭಟ್ಟ ಪೂಜಾರಿ,  ಅಂಕುರ ತಂದೆ ಆನಂದರಾವ ಪೂಜಾರಿ,  ಪ್ರತೀಕ ತಂದೆ ಸದಾಶಿವ ಪೂಜಾರಿ,  ಗಂಗಾಧರ ತಂದೆ ಶ್ರೀಕಾಂತ ಭಟ್ಟ  ಪೂಜಾರಿ, ಶರತ್‌ ಭಟ್ಟ ತಂದೆ ನಂದುಭಟ್ಟ  ಈ ಅರ್ಚಕರ ವಿರುದ್ಧ ತನಿಖೆ ನಡೆಸಿ  ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿದ್ದಾರೆ.

ಅರ್ಧ ಗಂಟೆಯಲ್ಲೇ ವೆಬ್‌ಸೈಟ್‌  ಡಿಲಿಟ್‌!: ಜಿಲ್ಲಾಧಿಕಾರಿ ದತ್ತಾತ್ರೇಯ  ದೇವಸ್ಥಾನಕ್ಕೆ ಹೋಗಿ ಪರಿಶೀಲನೆ  ಮಾಡಿ ಬಂದ ನಂತರ  ಅರ್ಧಗಂಟೆಯೊಳಗೆ ನಕಲಿ ವೆಬ್‌ ಸೈಟ್‌ ಎಲ್ಲವನ್ನೂ ಡಿಲಿಟ್‌ ಮಾಡಲಾಗಿದೆ. ಮುಂಚೆ  ಇದ್ದ ವೆಬ್‌ಸೈಟ್‌ನಲ್ಲಿ ದಾಖಲಿಸಿದ್ದ ಮೊಬೈಲ್‌ಗೆ ಕರೆ  ಮಾಡಿದರೆ, ನಾನು ಊರಲ್ಲಿ ಇಲ್ಲ. ದೇವಸ್ಥಾನದ ವೆಬ್‌ ಸೈಟ್‌ಗೆ ಹೋಗಿ ಹೆಸರು ನೊಂದಾಯಿಸಿ ಎಂದು  ಹೇಳಿರುವುದೂ ಗೊತ್ತಾಗಿದೆ.

ದೇವಲ್‌ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಹೋದ  ಸಂದರ್ಭದಲ್ಲಿ ನಕಲಿ ವೆಬ್‌ಸೈಟ್‌ ಮೂಲಕ ಸರ್ಕಾರದ  ಬೊಕ್ಕಸಕ್ಕೆ ಹಾನಿ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಎಫ್ ಐಆರ್‌ ದಾಖಲಿಗೆ ಸೂಚನೆ ನೀಡಲಾಗಿದೆ. ಆಗಿರುವ  ಅವ್ಯವಹಾರವನ್ನು ಎಸಗಿದವರಿಂದ ವಸೂಲಿ ಮಾಡಲಾಗುವುದು.  ●ಯಶವಂತ ಗುರುಕರ್‌, ಕಲಬುರಗಿ ಜಿಲ್ಲಾಧಿಕಾರಿ

-ಹಣಮಂತರಾವ ಭೈರಾಮಡಗಿ

 

Advertisement

Udayavani is now on Telegram. Click here to join our channel and stay updated with the latest news.

Next