ಬೆಂಗಳೂರು: ಇಂಧನ ಸಚಿವ ಕೆ.ಜೆ.ಜಾರ್ಜ್ ಹೆಸರಿನಲ್ಲಿ ನಕಲಿ ಸಂಭಾಷಣೆಯ ಆಡಿಯೋ ವಿಡಿಯೋವನ್ನು ನಕಲಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆರೋಪದಡಿ ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಕಾರ್ಯಕರ್ತನನ್ನು ಪೂರ್ವವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದ ಕರೀಂನಗರ ನಿವಾಸಿ ರವಿಕಾಂತಿ ಶರ್ಮಾ (33) ಬಂಧಿತ.
ಆರೋಪಿ ಕೆಲ ತಿಂಗಳ ಹಿಂದೆ ರಾಜ್ಯದ ವಿದ್ಯುತ್ ಪರಿಸ್ಥಿತಿ ಮತ್ತು ಗೃಹ ಜ್ಯೋತಿ ಯೋಜನೆ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಮಾತನಾಡಿದ್ದಾರೆ ಎನ್ನಲಾದ ನಕಲಿ ಸಂಭಾಷಣೆ ವಿಡಿಯೋ ಸಿದ್ಧಪಡಿಸಿ, ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ “ತೆಲಗುಸ್ಕೈಬ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದ. ಅದನ್ನು ಗಮನಿಸಿದ ಬೆಸ್ಕಾಂ ಪ್ರಧಾನ ವ್ಯವಸ್ಥಾಪಕರು ನ.28ರಂದು ಪೂರ್ವ ವಿಭಾಗದ ಸೆನ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕೆಲ ತಾಂತ್ರಿಕ ತನಿಖೆ ನಡೆಸಿದಾಗ ರವಿಕಾಂತಿ ಶರ್ಮಾನ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ತೆಲಂಗಾಣದ ಕರೀಂನಗರದಲ್ಲಿ ಗುರುವಾರ ಬಂಧಿಸಿ, ಬೆಂಗಳೂರಿಗೆ ಕರೆ ತರಲಾಗಿತ್ತು. ಶುಕ್ರವಾರ ಕೋರ್ಟ್‌ನಲ್ಲಿ ಆರೋಪಿಗೆ ಜಾಮೀನು ಸಿಕ್ಕಿದೆ. ಈತನ ವಿಚಾರಣೆಯಲ್ಲಿ ಇಂಧನ ಸಚಿವರ ಹೆಸರಿಗೆ ಧಕ್ಕೆ ತರುವ ಉದ್ದೇಶದಿಂದಲೇ ನಕಲಿ ವಿಡಿಯೋ ಸಂಭಾಷಣೆ ಮಾಡಿದ್ದಾನೆ ಎಂಬುದು ಗೊತ್ತಾಗಿದೆ.
ಬಂಧಿತನ ಪೋಷಕರು ಪಕ್ಷದ ಮಾಜಿ ಕಾರ್ಪೋರೇಟರ್‌ಗಳು ಎಂಬುದು ಗೊತ್ತಾಗಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.