ಗಾಂಧಿನಗರ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳನ್ನು ನಿರ್ಮಿಸಿ ಹಣ ಸಂಗ್ರಹ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸರ್ಕಾರವು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಿ ಟೋಲ್ ಸಂಗ್ರಹ ಮಾಡುತ್ತದೆ. ಕೆಲವೆಡೆ ಈ ಟೋಲ್ ಪ್ಲಾಜಾಗಳ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ಮಾಡಿದ ಘಟನೆಯೂ ನಡೆಯುತ್ತದೆ. ಆದರೆ ನಕಲಿ ಟೋಲ್ ಪ್ಲಾಜಾವೊಂದು ವರ್ಷಗಳಿಂದ ಜನರಿಂದ ಹಣ ಸಂಗ್ರಹಿಸುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.
ಗುಜರಾತ್ ನ ಬಂಬನ್ಬೋರ್ – ಕಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಅಧಿಕಾರಿಗಳನ್ನು, ಪೊಲೀಸರನ್ನು ವಂಚಿಸಿ ನಕಲಿ ಟೋಲ್ ಗೇಟ್ ಮಾಡಲಾಗಿದೆ. ಸುಮಾರು ಒಂದೂವರೆ ವರ್ಷದಿಂದ ಇಲ್ಲ ಹಣ ಸಂಗ್ರಹ ಮಾಡಲಾಗುತ್ತಿತ್ತು ಎಂದು ವರದಿ ಹೇಳಿದೆ.
ಗುಜರಾತ್ ನ ಮೊರ್ಬಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬೈಪಾಸ್ ಮಾಡುವ ಮೂಲಕ ಖಾಸಗಿ ಭೂಮಿಯಲ್ಲಿ ಸ್ಥಾಪಿಸಲಾಗಿತ್ತು. ಅವರ “ಟೋಲ್ ಬೂತ್” ನಲ್ಲಿ ಅರ್ಧದಷ್ಟು ಬೆಲೆಯನ್ನು ವಿಧಿಸಿ ಒಂದೂವರೆ ವರ್ಷಗಳ ಕಾಲ ಜನರು, ಪೊಲೀಸರು ಮತ್ತು ಜಿಲ್ಲೆಯ ಉನ್ನತ ಸರ್ಕಾರಿ ಅಧಿಕಾರಿಗಳನ್ನೂ ವಂಚಿಸಿದ್ದಾರೆ.
ಈ ರಸ್ತೆಯ ಅಧಿಕೃತ ಟೋಲ್ ಪ್ಲಾಜಾವಾದ ವಘಾಸಿಯಾ ಟೋಲ್ ಪ್ಲಾಜಾದ ಮ್ಯಾನೇಜರ್ ಈ ಬಗ್ಗೆ ಮಾತನಾಡಿದ್ದು, ಖಾಸಗಿ ಜಾಗದ ಮಾಲಕರು ಕಳೆದೊಂದು ವರ್ಷದಿಂದ ಪ್ರತಿದಿನ ಜನರಿಂದ ಸಾವಿರಾರು ರೂ ಅಕ್ರಮವಾಗಿ ಸಂಗ್ರಹ ಮಾಡುತ್ತಿದ್ದರು. ಆರೋಪಿಗಳು ವೈಟ್ ಹೌಸ್ ಸೆರಾಮಿಕ್ ಕಂಪನಿಯ ಒಡೆತನದ ಜಮೀನು, ಮುಚ್ಚಿದ ಕಾರ್ಖಾನೆ ಮತ್ತು ವರ್ಗಾಸಿಯಾ ಗ್ರಾಮದ ಮೂಲಕ ನಿಜವಾದ ಮಾರ್ಗದಿಂದ ಟ್ರಾಫಿಕನ್ನು ತಿರುಗಿಸುತ್ತಿದ್ದರು ಎಂದಿದ್ದಾರೆ.
ಇದನ್ನೂ ಓದಿ:ಬೆಳ್ತಂಗಡಿ ಟು ಸ್ಯಾಂಡಲ್ ವುಡ್: ಮನೆ ಕೆಲಸದಲ್ಲಿದ್ದಾಕೆ ಖ್ಯಾತ ನಟಿಯಾಗಿ ಮಿಂಚಿದ ಲೀಲಾವತಿ
ವಘಾಸಿಯಾ ಟೋಲ್ ಪ್ಲಾಜಾದಿಂದ ಇಲ್ಲಿ ಅರ್ಧದಷ್ಟು ಟೋಲ್ ಸಂಗ್ರಹ ಮಾಡುತ್ತಿದ್ದ ಕಾರಣ ಟ್ರಕ್ ಚಾಲಕರು ಈ ದಾರಿ ಹಿಡಿಯಲ್ಲಿ ಸಾಗುತ್ತಿದ್ದರು. ಅಕ್ರಮ ತೆರಿಗೆ ಸಂಗ್ರಹವು ಒಂದು ವರ್ಷದಿಂದ ಗಮನಕ್ಕೆ ಬಂದಿರಲಿಲ್ಲ.
“ಕೆಲವು ವಾಹನಗಳನ್ನು ವರ್ಗಾಸಿಯಾ ಟೋಲ್ ಪ್ಲಾಜಾದ ರಸ್ತೆಯಿಂದ ತಿರುಗಿಸಲಾಗುತ್ತಿದೆ, ಅಲ್ಲದೆ ಅನಧಿಕೃತವಾಗಿ ಟೋಲ್ ತೆರಿಗೆ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ನಮಗೆ ಬಂದಿತು. ಪೊಲೀಸರು ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ ವಿವರವಾದ ದೂರು ದಾಖಲಿಸಿದ್ದಾರೆ” ಎಂದು ಮೊರ್ಬಿ ಜಿಲ್ಲಾಧಿಕಾರಿ ಜಿಟಿ ಪಾಂಡ್ಯ ತಿಳಿಸಿದ್ದಾರೆ.
ವೈಟ್ ಹೌಸ್ ಸೆರಾಮಿಕ್ ಕಂಪನಿಯ ಮಾಲೀಕ ಅಮರ್ಷಿ ಪಟೇಲ್, ವನರಾಜ್ ಸಿಂಗ್ ಝಾಲಾ, ಹರ್ವಿಜಯ್ ಸಿಂಗ್ ಝಾಲಾ, ಧರ್ಮೇಂದ್ರ ಸಿಂಗ್ ಝಾಲಾ, ಯುವರಾಜ್ ಸಿಂಗ್ ಝಾಲಾ ಮತ್ತು ಅಪರಿಚಿತರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.