ಮಂಗಳೂರು: ಕೇರಳದಿಂದ ಮಂಗಳೂರಿಗೆ ಆಗಮಿಸಲು ನಕಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹಾಜರುಪಡಿಸಿದ್ದ ಆರೋಪದಡಿ ತಲಪಾಡಿ ಗಡಿಯಲ್ಲಿ ಎರಡು ದಿನಗಳಲ್ಲಿ 4 ಪ್ರತ್ಯೇಕ ಪ್ರಕರಣಗಳಲ್ಲಿ ಕೇರಳದ 6 ಮಂದಿ ಹಾಗೂ ಕರ್ನಾಟಕದ ಓರ್ವ ಸೇರಿದಂತೆ ಒಟ್ಟು 7 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿ ಸಾಂಕ್ರಾಮಿ ರೋಗ ನಿಯಂತ್ರಣ ಕಾಯ್ದೆ ಹಾಗೂ ನಕಲಿ ದಾಖಲೆ ಸೃಷ್ಟಿ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು ಚೆಂಗಳದ ಅಬ್ದುಲ್ ತಮೀಮ್ (19), ಚೆರುವತ್ತೂರಿನ ಹಸೀನ್ (31), ಹಾದಿಲ್ (25), ಕಬೀರ್ ಎ.ಎಂ. (24) ಮತ್ತು ಕಾಸರಗೋಡು ಕಡಪ್ಪುರದ ಇಸ್ಮಾಯಿಲ್ (48) ಅವರನ್ನು ಬುಧವಾರ ಹಾಗೂ ಮಂಜೇಶ್ವರದ ಅಬೂಬಕರ್ (28) ಮತ್ತು ಮಂಗಳೂರು ನಗರದ ಪಡೀಲ್‌ನ ಮೊಹಮದ್ ಶರೀಫ್ (34) ಅವರನ್ನು ಗುರುವಾರ ಬಂಧಿಸಲಾಗಿದೆ. 2 ಕಾರು, 2 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಆತಂಕಕಾರಿ ಬೆಳವಣಿಗೆ:
ಕೊರೊನಾ 2ನೇ ಅಲೆಯ ಆತಂಕದ ಜತೆಗೆ 3ನೇ ಅಲೆಯ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನೆರೆ ರಾಜ್ಯಗಳಿಂದ ದ.ಕ. ಜಿಲ್ಲೆಗೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿದೆ. ಜಿಲ್ಲೆಯ ಗಡಿ ಭಾಗದಲ್ಲಿ 17 ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ. ಹಾಗಿದ್ದರೂ ಕೆಲವರು ನಕಲಿ ನೆಗೆಟಿವ್ ವರದಿಯ ಮೂಲಕ ರಾಜ್ಯ ಪ್ರವೇಶಿಸಿ ಕೊರೊನಾ ಹೆಚ್ಚಳಕ್ಕೆ ಕಾರಣರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ನಕಲಿ ವರದಿಯ ಸೃಷ್ಟಿಕರ್ತನೂ ಬಲೆಗೆ! :
ಮೊದಲು ಬಂಧಿತರಾದ ನಾಲ್ವರನ್ನು ವಿಚಾರಿಸಿದಾಗ ಕಬೀರ್ ಎ.ಎಂ. ಎಂಬಾತ ನಕಲಿ ದಾಖಲೆ ಸೃಷ್ಟಿಸಿ ಕೊಡುತ್ತಿದ್ದ ಎಂಬುದು ತಿಳಿದುಬಂತು. ಬಳಿಕ ಆತನನ್ನೂ ಬಂಧಿಸಲಾಯಿತು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.