Advertisement

ನಕಲಿ ಪ್ರಮಾಣ ಪಡೆದು ಬಡ್ತಿ: ತನಿಖೆಗೆ ಆದೇಶ

11:37 AM Sep 17, 2018 | |

ಕಲಬುರಗಿ: ಪೊಲೀಸ್‌ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ ಅಧಿಕಾರಿಗಳು 371(ಜೆ) ಪ್ರಮಾಣ ಪತ್ರವನ್ನು ನಕಲಿಯಾಗಿ ಪಡೆದು ಬಡ್ತಿ ಸೌಲಭ್ಯ ಪಡೆದಿರುವುದನ್ನು ಸೂಕ್ತ ತನಿಖೆಗೆ ನಿರ್ದೇಶಿಸಲಾಗಿದೆ. ವರದಿ ಬಂದರ ನಂತರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಹಾಗೂ 371ನೇ ಕಲಂ ಅನುಷ್ಠಾನ ಉಪಸಮಿತಿ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ ಸ್ಪಷ್ಟಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ್ತಿ ರದ್ದುಪಡಿಸುವುದರ ಜತೆಗೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮುಖ್ಯವಾಗಿ ನೌಕರಿ ಸೇರುವಾಗ ಯಾವ ಜಿಲ್ಲೆಯವರು ಎಂಬುದು ಸ್ಪಷ್ಟವಾಗಿರುತ್ತದೆ. ಅಷ್ಟಿದ್ದರೂ ನಕಲಿಯಾಗಿ ಪ್ರಮಾಣ ಪತ್ರ ಪಡೆದು ಬಡ್ತಿ ಪಡೆದಿರುವುದು ನಿಜಕ್ಕೂ ಗಂಭೀರ ಸಂಗತಿಯಾಗಿದೆ. ಹೀಗಾಗಿ ತನಿಖೆಗೆ ಮುಂದಾಗಲಾಗಿದೆ. ಕ್ರಮ ನಿಶ್ಚಿತ ಎಂದು ಹೇಳಿದರು.
 
ಇತಿಹಾಸದಲ್ಲಿ ಸೇರ್ಪಡೆಗೆ ಪ್ರಯತ್ನ: ಹೈದ್ರಾಬಾದ ಕರ್ನಾಟಕ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ತರಬೇಕೆಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ. 371ಜೆ ಅನುಷ್ಠಾನ ಸಮಿತಿಯ ಅಧ್ಯಕ್ಷನಾದ ಕೂಡಲೇ ಈ ಸಂಬಂಧ ಈಗಾಗಲೆ
ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆ ನೀಡಲಾಗಿದೆ. ಅಲ್ಲದೇ 371 (ಜೆ) ಅನುಷ್ಠಾನದ ಮೇಲ್ವಿಚಾರಣೆಗೆ ಬೆಂಗಳೂರಿನಲ್ಲಿರುವ ಹೆಚ್‌.ಕೆ.ಸೆಲ್‌ ಜೊತೆಯಲ್ಲಿಯೆ ಕಲಬುರಗಿಯಲ್ಲಿಯೂ ವಿಶೇಷ ಕೋಶ ತೆರೆಯಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಹೆಚ್ಚುವರಿ ಅನುದಾನ ಮಾತ್ರ: ಹೈ.ಕ.ಭಾಗದಲ್ಲಿ ಯಾವುದೇ ಇಲಾಖೆಯ ಯೋಜನೆ ಅನುಷ್ಠಾನಕ್ಕಾಗಿ ಸಂಬಂಧಿಸಿದ ಮೂಲ ಇಲಾಖೆಗಳಿಂದ ಅದಕ್ಕೆ ಮೊದಲು ಅನುದಾನ ಪಡೆಯಬೇಕು. ಹೆಚ್ಚುವರಿಯಾಗಿ ಅನುದಾನ ಮಾತ್ರ ಹೆಚ್‌.ಕೆ.ಆರ್‌.ಡಿ.ಬಿ. ಒದಗಿಸುತ್ತದೆ ವಿನಹಃ ಸಂಪೂರ್ಣ ಅನುದಾನ ಭರಿಸುವುದಿಲ್ಲ ಎಂದು ತಿಳಿಸಿದರು. ಪ್ರಸ್ತುತ ಹೈ.ಕ.ಮಂಡಳಿ ಅಧ್ಯಕ್ಷರ ಹುದ್ದೆ ಖಾಲಿ ಇದ್ದು, ಕೂಡಲೆ ಹುದ್ದೆಯನ್ನು ಭರ್ತಿ ಮಾಡುವಂತೆ ಕಲಬುರಗಿ ಸಂಸದರಾಗಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ತಾವು ಈಗಾಗಲೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದೇವೆ. ಸೋಮವಾರವೂ ಮುಖ್ಯಮಂತಿ ಬಳಿ ಈ ವಿಷಯ ಪ್ರಸ್ತಾಪ ಮಾಡುತ್ತೇನೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ 3.72 ಲಕ್ಷ ಕ್ವಿಂಟಾಲ್‌ ಹೆಸರು ಬೇಳೆ ಉತ್ಪನ್ನವನ್ನು ಸರ್ಕಾರ ಖರೀದಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ. ಆದರೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಕೇವಲ 45 ಸಾವಿರ ಕ್ವಿಂಟಾಲ್‌ ಖರೀದಿಗೆ ಮಾತ್ರ ಅವಕಾಶ ನೀಡಿದೆ. ಕೇಂದ್ರ ಸರ್ಕಾರ ಖರೀದಿ ಮಾಡುವ ಪ್ರಮಾಣಕ್ಕೆ ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡಲು ಸಿದ್ಧವಾಗಿದ್ದು, ಈ ಪ್ರಮಾಣ ಹೆಚ್ಚಿಸಿಬೇಕೆಂದು ರಾಜ್ಯ ಸರ್ಕಾರ ಈಗಾಗಲೆ ನ್ಯಾಫೆಡ್‌ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದರು.
 
50 ಲಕ್ಷ ರೂ ಬಿಡುಗಡೆ: ಕಲಬುರಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಆಯಾ ತಾಲೂಕಿನ ಟಾಸ್ಕ್ ಫೋರ್ಸ್‌ ಸಮಿತಿಗೆ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಶಾಸಕರ ನೇತೃತ್ವದ ಸಮಿತಿ ಕೂಡಲೆ ಕ್ರಿಯಾ ಯೋಜನೆ ಸಲ್ಲಿಸಬೇಕು.

ಇನ್ನು ಕಲಬುರಗಿ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ನಗರದಲ್ಲಿ ಅಗತ್ಯವಿದ್ದೆಡೆ ಕೊಳವೆ ಬಾವಿಗಳಿಗೆ ಫ್ಲಶ್‌ ಮತ್ತು ದುರಸ್ತಿಗಾಗಿ ಈಗಾಗಲೆ 1.5 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಅಲ್ಲದೆ 12 ಕೋಟಿ ರೂ. ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Advertisement

ಸೂಚನೆ: ಜಿಲ್ಲಾ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಜರುಗುವ ಹೈ.ಕ.ವಿಮೋಚನಾ ದಿನಾಚರಣೆಗೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಡೆಯುವ ಸಮಾರಂಭಕ್ಕೆ ಹಾಜರಿರಬೇಕೆಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು. ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಇದ್ದರು.

ಒದಿತಿನಿ ಪದ ಬಳಕೆಗೆ ಸಮರ್ಥನ
ಕಲಬುರಗಿ: ಹುಟ್ಟು ಗುಣ ಸುಟ್ಟರೂ ಹೋಗೋದಿಲ್ಲ ಎನ್ನುವಂತೆ ತಮ್ಮ ನಡೆ-ನುಡಿ ಯಾವತ್ತೂ ಬದಲಾಗೋದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಡಿಪಿ ಸಭೆಯಲ್ಲಿ ಮಹಾನಗರ ಪಾಲಿಕೆಯವರು ಶಿಷ್ಟಾಚಾರ ಪ್ರಕಾರ ಕಳೆದ ಎರಡುವರೆ ವರ್ಷಗಳಲ್ಲಿ ಒಮ್ಮೆಯೂ ತಮಗೆ ಆಹ್ವಾನ ನೀಡಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದರೆ ನಿಮ್ಮಂತಹ ನೂರು ಅಧಿಕಾರಿಗಳಿಗೆ ಒದಿತಿನಿ ಹಾಗೂ ಹೊರಗೆ ಹಾಕುತ್ತೇನೆ ಎಂದು ಅಧಿಕಾರಿ ಆರ್‌.ಪಿ. ಜಾಧವ್‌ ಅವರಿಗೆ ಗದರಿಸಿದ್ದೇನೆ. ಆದರೆ ನಾನು ವೈಯಕ್ತಿಕವಾಗಿ ಯಾವುದನ್ನು ಗುರಿ ಮಾಡಿಲ್ಲ. ಕೆಲವೊಮ್ಮೆ ಬಡಿದೆಬ್ಬಿಸು ಎನ್ನಲಾಗುತ್ತದೆ. ಅಂದರೆ ಹೊಡೆದು ಎಬ್ಬಿಸಲಾಗುತ್ತದೆಯೋ? ಹಾಗೆ ತಾವೂ ಕೂಡಾ ಅಭಿವೃದ್ಧಿ ಹಾಗೂ ಕಾರ್ಯವೈಖರಿ ಬದಲಾವಣೆ ದೃಷ್ಟಿ ಹಿನ್ನೆಲೆಯಲ್ಲಿ ಹೇಳಿದ್ದೇವೆ.

ತಾವು ಸಚಿವರಾಗಿದ್ದು, ಸರ್ಕಾರದಂತೆ ನಡೆದುಕೊಳ್ಳಲಾಗುವುದು. ಜನ ತಮ್ಮನ್ನು ಕೆಲಸ ಮಾಡಲಿ ಎಂದೇ ಆರಿಸಿ ಕಳುಹಿಸಿದ್ದಾರೆ. ಒಟ್ಟಾರೆ ತಮ್ಮ ನಡೆ ನುಡಿಯಲ್ಲಿ ಯಾವತ್ತೂ ಬದಲಾಗೋದಿಲ್ಲ. ತಮ್ಮ ಸ್ಟೈಲೇ ಹೀಗೆ ಎಂದರು. ಕೆಡಿಪಿ ಸಭೆಯಲ್ಲಿ ತಾವು ಅಸಾಂವಿಧಾನಿಕ ಬಳಕೆ ಮಾಡಲಾಗಿದೆ ಎಂದು ಬಂಜಾರಾ ಸಮುದಾಯದ ನಾಯಕರು ತಮ್ಮ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಆದರೆ ತಾವೆಂದೂ ಸಮಾಜದ ದೃಷ್ಟಿಯಲ್ಲಿ ಮಾತನಾಡಿಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು. ಅಲ್ಲದೇ  ಹುಮುಖ್ಯವಾಗಿ ಈ ಹಿಂದೆ ಬಾಬುರಾವ್‌ ಚವ್ಹಾಣ ಅವರ ಸಚಿವ ಪದವಿ ಯಾಕೆ ಹೋಯಿತು ಎಂಬುದನ್ನು ಅವರೇ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಇನ್ನು ಸುಭಾಷ ರಾಠೊಡ ಅವರು ಮಾಜಿ ಸಚಿವ ರೇವು ನಾಯಕ ಬೆಳಮಗಿ ಅವರಿಗೆ ಅನ್ಯಾಯವಾದಾಗ ಸಮಾಜದ ಪರ ಧ್ವನಿ ಎತ್ತಬೇಕಿತ್ತು ಎಂದು ತಿರುಗೇಟು ನೀಡಿದರು.

ಕಲಬುರಗಿ ಸೇರಿದಂತೆ ಹೈದ್ರಾಬಾದ ಕರ್ನಾಟಕ ಬಹುತೇಕ ಭಾಗದಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಹೀಗಾಗಿ ಹಲವು ತಾಲೂಕುಗಳನ್ನು ಬರಪೀಡಿ ತವೆಂದು ಘೋಷಿಸಲಾಗಿದೆ. ಮಳೆ ಬಾರದೇ ನಾಪತ್ತೆಯಾಗಿದ್ದರಿಂದ ಮೋಡ ಬಿತ್ತನೆ ಮಾಡಬೇಕೆಂಬುದರ ಕುರಿತು ಕಳೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಒಟ್ಟಾರೆ ಪ್ರಸ್ತುತ ಮಾಸಾಂತ್ಯಕ್ಕೆ ಮಳೆಯ ಪ್ರಮಾಣ ನೋಡಿ ಮೋಡ ಬಿತ್ತನೆ ಕುರಿತಾಗಿ ನಿರ್ಧಾರ ಕೈಗೊಳ್ಳಲಿದೆ. 
ಪ್ರಿಯಾಂಕ್‌ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next