ಬೆಂಗಳೂರು: ಮದ್ಯಸೇವಿಸಿ ವಾಹನ ಚಾಲನೆ ಮಾಡುವ ಸವಾರರಿಗೆ ಕಳ್ಳ ಮಾರ್ಗದ ಮೂಲಕ ದಂಡ ಹಾಕಿ ಸುಲಿಗೆ ಮಾಡುತ್ತಿದ್ದ ನಾಲ್ವರು ಸಂಚಾರ ಪೊಲೀಸರು ಸಿಕ್ಕಿಬಿದ್ದಿದ್ದಾರೆ!
ಅಶೋಕನಗರ ಸಂಚಾರ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಮುನಿಯಪ್ಪ, ಪೊಲೀಸ್ ಪೇದೆಗಳಾದ ಗಂಗರಾಜ್, ನಾಗರಾಜ್, ಹರ್ಷ ಸಿಕ್ಕಿಬಿದ್ದ ಪೊಲೀಸರು. ಸಂಚಾರ ನಿಯಮಗಳ ದುಬಾರಿ ದಂಡಕ್ಕೆ ವಾಹನ ಸವಾರರ ಜೇಬಿಗೆ ಭಾರೀ ಕತ್ತರಿ ಬೀಳುತ್ತಿರುವ ಬೆನ್ನಲ್ಲೇ ಸಂಚಾರ ಪೊಲೀಸರ ಈ ಕಳ್ಳಾಟದ ಕಾರ್ಯಾಚರಣೆ, ಸಂಚಾರ ಪೊಲೀಸರ ಕಾರ್ಯವೈಖರಿಯತ್ತ ಬೊಟ್ಟು ಮಾಡುವಂತಾಗಿದೆ.
ನಗರದ ಸಂಚಾರ ಪೊಲೀಸರು ಕೆಲವೆಡೆ ಅನಧಿಕೃತವಾಗಿ ಮದ್ಯ ಪ್ರಮಾಣ ಪರೀಕ್ಷೆ ನಡೆಸಿ, ನ್ಯಾಯಾಲಯಕ್ಕೆ ಹೋದರೆ ದುಬಾರಿ ದಂಡ ಪಾವತಿಸಬೇಕಾಗುತ್ತದೆ. ಹೀಗಾಗಿ ಇಲ್ಲಿಯೇ ಕಡಿಮೆ ಹಣ ನೀಡಿ ಎಂದು ಪಾನ ಮತ್ತ ಚಾಲಕರಿಂದ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದವು. ಈ ಅಕ್ರಮ ಪತ್ತೆಹಚ್ಚಲು ಸಂಚಾರ ವಿಭಾಗದಲ್ಲಿ ವಿಶೇಷತನಿಖಾ ತಂಡವೊಂದು ರಚನೆಯಾಗಿತ್ತು.
ಶನಿವಾರ ರಾತ್ರಿ ಅಶೋಕನಗರ ವ್ಯಾಪ್ತಿಯ ಶ್ರೀನಿವಾಗಿಲು ಬಳಿ ಮದ್ಯ ಪ್ರಮಾಣ ಪರೀಕ್ಷೆ ನಡೆಯುತ್ತಿದ್ದು ಪೊಲೀಸರ ಕಾರ್ಯವೈಖರಿ ಅನುಮಾನದಿಂದ ಕೂಡಿದೆ ಎಂಬ ಮಾಹಿತಿ ವಿಶೇಷ ತಂಡಕ್ಕೆ ಸಿಕ್ಕಿದೆ. ಕೂಡಲೇ ಅಲ್ಲಿಗೆ ತೆರಳಿದ ವಿಶೇಷ ತನಿಖಾ ತಂಡ ಸ್ಥಳದಲ್ಲಿದ್ದ ಎಎಸ್‌ಐ ಮುನಿಯಪ್ಪ ಹಾಗೂ ಇತರೆ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ, ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೆ ಅವರು ಕಾರ್ಯನಿರ್ವಹಿಸುತ್ತಿದ್ದರು. ಈ ಅಕ್ರಮಕ್ಕೆ ಖಾಸಗಿ ಅಲ್ಕೋಮೀಟರ್‌ಗಳನ್ನು ಬಳಸುತ್ತಿದ್ದರು ಎಂಬುದು ಗೊತ್ತಾಗಿದೆ. ಅವರು ಅಕ್ರಮಕ್ಕೆ ಬಳಸುತ್ತಿದ್ದ ಮೂರು ಖಾಸಗಿ ಅಲ್ಕೋಮೀಟರ್, 32 ಸಾವಿರ ರೂ. ಅನಧಿಕೃತ ನಗದು ಹಾಗೂ ವಾಹನವನ್ನು ಜಪ್ತಿ ಮಾಡಲಾಗಿದೆ. ಅಕ್ರಮ ನಡೆಸಿದ ಸಿಬ್ಬಂದಿ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ
ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ. ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ. ಆರೋಪಿತ ಸಿಬ್ಬಂದಿ ಕಳೆದ ಒಂದು ತಿಂಗಳಿನಿಂದ ಅನಧಿಕೃತವಾಗಿ ಖಾಸಗಿಯಾಗಿ ಆಲ್ಕೋಮೀಟರ್‌ಗಳನ್ನು ಬಳಸಿ ಮದ್ಯ ಪ್ರಮಾಣ ಪರೀಕ್ಷೆ ನಡೆಸಿ ಹಣ ಗಳಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಸದ್ಯ ನಾಲ್ಕೂ ಮಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಆರೋಪಿತರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅಕ್ರಮ ಕಾರ್ಯಾಚರಣೆ ಸಹಿಸುವುದಿಲ್ಲ : ಕಾನೂನುಬಾಹಿರವಾಗಿ ಕಾರ್ಯಾಚರಣೆ ನಡೆಸುವ ಸಿಬ್ಬಂದಿ ವಿರುದ್ಧ ನಿಗಾ ಇಡಲಾಗುತ್ತದೆ. ಯಾವುದೇ ಕಾರಣಕ್ಕೂ ಅಕ್ರಮ ಕಾರ್ಯಾಚರಣೆ ಸಹಿಸುವುದಿಲ್ಲ. ಸಂಚಾರ ಪೊಲೀಸರು ಮದ್ಯ ಪ್ರಮಾಣ ಪರೀಕ್ಷೆ ಕಾರ್ಯ ಸೇರಿ ಇನ್ನಿತರೆ ಸಂಚಾರ ನಿಯಮಗಳ ಉಲ್ಲಂಘನೆ ಕಾರ್ಯ ನಿರ್ವಹಣೆಯಲ್ಲಿ ಅನುಮಾನ ವ್ಯಕ್ತವಾದರೆ ಸಂಚಾರ ನಿಯಂತ್ರಣ ಕೊಠಡಿ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ಸಾರ್ವಜನಿಕರು ತರಬಹುದು ಎಂದು ಜಂಟಿ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.