ಗಂಗಾವತಿ: ಬೇಸಿಗೆ ಹಂಗಾಮಿನಲ್ಲಿ ಭತ್ತದ ನಾಟಿ ಮಾಡಲು ರೈತರು ಹಾಕಿರುವ ಭತ್ತದ ಸಸಿ ಮಡಿ ಮೊಳಕೆಯೊಡೆದಿರುವ ಕುರಿತಂತೆ ಪರಿಶೀಲನೆ ನಡೆಸಲು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ|ಚಂದ್ರಕಾಂತ ನಾಡಗೌಡ ನೇತೃತ್ವದ ಅಧಿಕಾರಿಗಳ ತಂಡ ಆನೆಗೊಂದಿ, ಹನುಮನಹಳ್ಳಿ, ವಿರೂಪಾಪುರಗಡ್ಡಿ ಸಾಣಾಪುರ ತಿರುಮಲಾಪುರ ಗ್ರಾಮಗಳ ರೈತರ ಗದ್ದೆಗೆ ತೆರಳಿ ಸಸಿ ಮಡಿ ಮೊಳಕೆ ಒಡೆಯದ ಕುರಿತು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ರೈತರ ಜತೆ ಮಾತನಾಡಿ ಭತ್ತದ ಬೀಜ ಖರೀದಿ ಮತ್ತು ರಸೀದಿ ಪಡೆಯುವ ಕುರಿತು ಸಮಗ್ರ ಮಾಹಿತಿ ನೀಡಿದರು. ಬೇಸಿಗೆ ಹಂಗಾಮಿನಲ್ಲಿ ರೈತರು ಬೇಗ ಕಟಾವಿಗೆ ಬರುವಂತಹ ಭತ್ತದ ತಳಿಯನ್ನು ನಾಟಿ ಮಾಡುತ್ತಾರೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ 100-120 ದಿನದೊಳಗೆ ಕಟಾವಿಗೆ ಬರುವ ಭತ್ತದವನ್ನು ರೈತರು ಬೇಸಿಗೆಯಲ್ಲಿ ಬೆಳೆಯುತ್ತಾರೆ.
ಕಳೆದ ನಾಲ್ಕೆದು ವರ್ಷಗಳಿಂದ ಬೇಸಿಗೆಯಲ್ಲಿ ನೀರಿಲ್ಲದ ಕಾರಣ ಭತ್ತ ರೈತರು ಭತ್ತ ನಾಟಿ ಮಾಡಿಲ್ಲ. ಆದ್ದರಿಂದ ಯಾರ ಹತ್ತಿರ ಬೇಸಿಗೆಗೆ ನಾಟಿ ಮಾಡಲು ಭತ್ತದ ಬೀಜವಿಲ್ಲ. ತಾಲೂಕಿನ ಹೊಸ್ಕೇರಾ ಕ್ಯಾಂಪಿನ ಭತ್ತದ ಬೀಜೋತ್ಪಾದನೆ ಮಾಡುತ್ತಿದ್ದು ಈ ಭಾರಿ ಗಂಗಾವತಿ ಸೇರಿ ಸುತ್ತಲಿನತಾಲೂಕಿನ ರೈತರು ಇವರ ಹತ್ತಿರ ಭತ್ತದ ಬೀಜ ಖರೀದಿ ಮಾಡಿದ್ದಾರೆ. ಭತ್ತದ ಸಸಿ ಮಡಿ ಹಾಕಿದ ಹಲವು ದಿನಗಳು ಕಳೆದರೂ ಮೊಳಕೆ ಒಡೆದಿರಲಿಲ್ಲ.
ಈ ಕುರಿತು “ಉದಯವಾಣಿ’ ಪತ್ರಿಕೆ ರೈತರ ಮನವಿ ಹಿನ್ನೆಲೆಯಲ್ಲಿ ಮಂಗಳವಾರ ವಿಸ್ತೃತ ವರದಿ ಮಾಡಿತ್ತು. ವರದಿಗೆ ತಾಲೂಕು ಕೃಷಿ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೇಸಿಗೆ ಹಂಗಾಮಿನಲ್ಲಿ ಭತ್ತದ ನಾಟಿ ಮಾಡಲು ರೈತರು ಖಾಸಗಿ ಕಂಪನಿಯಿಂದ ಬೀಜ ಖರೀದಿಸಿ ಸಸಿ ಮಡಿ ಹಾಕಿದ್ದು ಬೀಜ ಮೊಳಕೆ ಒಡೆದಿಲ್ಲ. ಇದರಿಂದ ರೈತರು ಮಾಡಿದ ಖರ್ಚು ವ್ಯರ್ಥವಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಲಾಗಿದೆ. ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಶ್ವವಿದ್ಯಾಲಯದ ಕೃಷಿ ತಜ್ಞರನ್ನು ಕರೆಸಿ ಇನ್ನಷ್ಟು ಪರಿಶೀಲನೆ ನಡೆಸಿ ಬೀಜೋತ್ಪಾದನೆ ಮಾಡಿದ ಕಂಪನಿಯವರ ವಿರುದ್ಧ ರೈತರಿಂದ ದೂರಿನ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
–ಡಾ| ಚಂದ್ರಕಾಂತ ನಾಡಗೌಡ, ಸಹಾಯಕ ಕೃಷಿ ನಿರ್ದೇಶಕರು