Advertisement

ಕನ್ನಡ ಸಂಸ್ಕೃತಿ ಇಲಾಖೆಗೆ ನಕಲಿ ಸಂಘ-ಸಂಸ್ಥೆಗಳ ಹಾವಳಿ

03:45 AM Feb 12, 2017 | |

ಬೆಂಗಳೂರು: ಸಾಂಸ್ಕೃತಿಕ ಚಟುವಟಿಕೆ ಪ್ರೋತ್ಸಾಹಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಧನಸಹಾಯ ಗುಳುಂ ಮಾಡಲು ಹುಟ್ಟಿಕೊಂಡಿರುವ “ಲೆಟರ್‌ಹೆಡ್‌’ನಲ್ಲಿ ಮಾತ್ರ ಚಾಲ್ತಿಯಲ್ಲಿರುವ ನಕಲಿ ಸಂಘ -ಸಂಸ್ಥೆಗಳ ಹಾವಳಿ ತಲೆನೋವಾಗಿ ಪರಿಣಮಿಸಿದೆ.

Advertisement

ಯಾರೋ ಮಾಡಿದ ಕಾರ್ಯಕ್ರಮದ ಪೋಟೋಗಳು ಹಾಗೂ ನಡೆದೇ ಇಲ್ಲದ ಕಾರ್ಯಕ್ರಮದ ವರದಿಯನ್ನು ಗ್ರಾಫಿಕ್‌ ತಂತ್ರಜ್ಞಾನ ಬಳಸಿ ಕಾರ್ಯಕ್ರಮ ನಡೆದಿದೆ ಎಂದು ವರದಿ ಸಿದ್ಧಪಡಿಸಿ ಅನುದಾನಕ್ಕೆ ಅರ್ಜಿ ಸಲ್ಲಿಸಿ ಇಲಾಖೆ ಕಣ್ಣಿಗೆ ಮಣ್ಣೆರಚಲು ಯತ್ನಿಸಿರುವುದು ಪತ್ತೆಯಾಗಿದೆ.

ಜಿಲ್ಲಾ ಮಟ್ಟದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಪ್ರತಿವರ್ಷ ಲಕ್ಷಾಂತರ ರೂ. ನೀಡುತ್ತಿದೆ. ಈ ಅನುದಾನದ ಮೇಲೆ ಕಣ್ಣಿಟ್ಟು ನಕಲಿ ಸಂಘ ಸಂಸ್ಥೆಗಳು ಹುಟ್ಟಿಕೊಂಡಿವೆ. ಅಂತಹ ಸಂಘ ಸಂಸ್ಥೆಗಳ ಪತ್ತೆ ಮಾಡುವುದೇ ಇಲಾಖೆಗೆ ದೊಡ್ಡ ಸವಾಲಾಗಿದೆ.

ಆನ್‌ಲೈನ್‌ವ್ಯವಸ್ಥೆ ಜಾರಿ ಸೇರಿದಂತೆ ನಕಲಿ ಸಂಘಗಳ ಕಡಿವಾಣಕ್ಕೆ ಇಲಾಖೆಯೂ ಸಾಕಷ್ಟು ಕಸರತ್ತು ನಡೆಸುತ್ತಿದೆಯಾದರೂ ಪೂರ್ಣ ಪ್ರಮಾಣದ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಕಳೆದ ನಾಲ್ಕು ವರ್ಷಗಳ ಹಿಂದೆ ಧನ ಸಹಾಯ ಕೋರಿ ಇಲಾಖೆ ಸುಮಾರು 300ರಿಂದ 400 ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಇದೀಗ  ಅವುಗಳ ಸಂಖ್ಯೆ 7 ಸಾವಿರ ದಾಟಿದೆ. ಇಲಾಖೆಗೆ 20 ಕೋಟಿ ಅನುದಾನವನ್ನು ಸರ್ಕಾರ ಒದಗಿಸುತ್ತದೆ. ಅರ್ಹ ಫ‌ಲಾನುಭವಿಗಳಿಗೆ ಸಿಗಬೇಕು ಎಂಬುದು ಕೂಡ ಸರ್ಕಾರದ ಉದ್ದೇಶ. ಆದರೆ ಅನುದಾನ ಹೆಚ್ಚಾಗಿದೆ ಎಂದು ಹೇಳಿ ಹಣ ಪಡೆಯುವ ಸಲುವಾಗಿಯೇ ಕೆಲವು ಸಂಘ-ಸಂಸ್ಥೆಗಳು ಹುಟ್ಟಿಕೊಂಡಿವೆ.

Advertisement

ನೋಟಿಸ್‌ ಜಾರಿ
ಇಲಾಖೆಯು ಈಗಾಗಲೇ ಕಾರ್ಯಕ್ರಮ ನಡೆಯದಿದ್ದರೂ ನಡೆದಿದೆ ಎಂದು ವರದಿ ಸಿದ್ಧಪಡಿಸಿ ಧನಸಹಾಯಕ್ಕೆ ಅರ್ಜಿ ಸಲ್ಲಿಸಿದ್ದ ಸಂಘ-ಸಂಸ್ಥೆಗಳಿಗೆ ಇಲಾಖೆ ನೋಟಿಸ್‌ ಜಾರಿ ಮಾಡಿದೆ.

ಬಾಗೇಪಲ್ಲಿಯ ಶ್ರೀಕೃಷ್ಣ ಕಲ್ಚರ್‌ ನಾಟ್ಯ ಮಂಡಳಿ, ಸೂರ್ಯ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ, ಕಲ್ಚರ್‌ ಆ್ಯಂಡ್‌ ಆರ್ಟ್‌ ಡೆವಲಪ್‌ಮೆಂಟ್‌ ಟ್ರೈನಿಂಗ್‌ ಸೊಸೈಟಿ, ಸಾಂಸ್ಕೃತಿಕ ಡ್ಯಾನ್ಸ್‌ ಅಂಡ್‌ ಡ್ರಾಮಾ ಡೆವಲಪ್‌ಮೆಂಟ್‌ ಸೊಸೈಟಿ, ಕಲ್ಚರಲ್‌ ಡ್ರಾಮಾ ಆ್ಯಂಡ್‌ ಮ್ಯೂಸಿಕ್‌ ಡೆವಲಪ್‌ಮೆಂಟ್‌ ಸೊಸೈಟಿ ಹಾಗೂ ಗುಡಿಬಂಡೆಯ ರೂರಲ್‌ ಇಂಟಿಗ್ರೇಟೆಡ್‌ ಡೆವಲಪ್‌ಮೆಂಟ್‌ ಸೊಸೈಟಿಗೆ ನೋಟಿಸ್‌ ಜಾರಿ ಮಾಡಿದ್ದು, ಕ್ರಿಮಿನಲ್‌ ಕೇಸು ಹಾಕಲು ಸಿದ್ಧತೆ ನಡೆಸಿದ್ದಾರೆ.

ಈ ಸಂಸ್ಥೆಗಳು ಬಾಗೇಪಲ್ಲಿಯ ಕಾಲೇಜು ಪ್ರಾಂಶುಪಾಲರಿಂದ ದೃಢೀಕರಿಸಿ, ಮುದ್ರೆ ಹಾಕಿಸಿ ಆ ನಕಲಿ ವರದಿ ಇರುವ ಪತ್ರಿಕೆಗಳ ಕಟಿಂಗನ್ನು ಕಳುಹಿಸಿದ್ದವು. ಈ ಹಿನ್ನೆಲೆಯಲ್ಲಿ ಆ ಕಾಲೇಜು ಪ್ರಾಚಾರ್ಯರಿಗು ಕೂಡ ನೋಟಿಸ್‌ ಜಾರಿ ಮಾಡಿದ್ದು, ತಾವು ಸಹಿ ಮತ್ತು ಮುದ್ರೆ ಹಾಕಿಲ್ಲವೆಂದು ಇಲಾಖೆಗೆ ಪ್ರತ್ಯುತ್ತರ ನೀಡಿದ್ದಾರೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

ಕಳೆದ ಒಂದೂವರೆ ವರ್ಷಗಳಲ್ಲಿ ಸುಮಾರು 7ಕ್ಕೂ ಅಧಿಕ ಅರ್ಜಿಗಳಲ್ಲಿ ಎಂಎಲ್‌ಎಗಳ ನಕಲಿ ಶಿಫಾರಸ್ಸು ಪತ್ರಗಳು ಪತ್ತೆಯಾಗಿದ್ದವು. ನಕಲಿ ಲೆಟರ್‌ಹೆಡ್‌ಗಳು, ಪತ್ರಿಕೆಗಳ ವರದಿಗಳು ಸಿಕ್ಕಿಬಿದ್ದಿದ್ದು, ಇಲಾಖೆ ನೋಟಿಸ್‌ ನೀಡಿದ್ದಲ್ಲದೆ. ಇಬ್ಬರ ವಿರುದ್ಧ ಕ್ರಿಮಿನಲ್‌ ಕೇಸನ್ನು ದಾಖಲಿಸಿದ್ದು ಇಲ್ಲಿ ಸ್ಮರಿಸಬಹುದು.

ಶಿಫಾರಸ್ಸು ಕಾರುಬಾರು
ಕೆಲವು ಸಂಘ ಸಂಸ್ಥೆಗಳು ಕಲಾವಿದರು ಭಾಗವಹಿಸಿದ್ದು, ನಡೆಯದ ಕಾರ್ಯಕ್ರಮದ ನಕಲಿ ಲೆಕ್ಕಾಚಾರದ ಬಿಲ್‌ ಸೇರಿದಂತೆ ಒಂದು ಯಶಸ್ವಿ ಕಾರ್ಯಕ್ರಮಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಕರಾರುವಕ್ಕಾಗಿ ಲೆಕ್ಕ ಬರೆದು ಅದಕ್ಕೆ ಶಾಸಕರು, ಸಚಿವರಿಂದ ಶಿಫಾರಸ್ಸು ಪತ್ರಗಳನ್ನು ತಂದಂತಹ ಪ್ರಕರಣಗಳು ಇವೆ.

ಇಲಾಖೆ ಯಾವುದೇ ಮುಲಾಜಿಲ್ಲದೆ ನಕಲಿ ಸಂಘ, ಸಂಸ್ಥೆಗಳನ್ನು ಪತ್ತೆ ಮಾಡಿ ನೋಟಿಸ್‌ ಜಾರಿ ಮಾಡಿದೆ. ಕ್ರಿಮಿನಲ್‌ ಕೇಸು ದಾಖಲಿಸಿ ಅಂತಹವುಗಳನ್ನು ಕಪ್ಪುಪಟ್ಟಿಗೆ ಸೇರಿಸಲಿದೆ. ಇಂತಹ ಅಕ್ರಮಗಳು ನಡೆಯಬಾರದೆಂದೇ ಆನ್‌ಲೈನ್‌ ಮೂಲಕ ಫ‌ಲಾನುಭವಿಗಳು ಅರ್ಜಿ ಸಲ್ಲಿಸಬೇಕೆಂದು ಸೂಚನೆ ನೀಡಲಾಗಿದೆ.
– ಕೆ.ಎ.ದಯಾನಂದ್‌, ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

– ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next