ಬೆಂಗಳೂರು: ನರ್ಸ್ ವೇಷದಲ್ಲಿ ಬಂದ ಯುವತಿ ಯೊಬ್ಬಳು ಆಸ್ಪತ್ರೆಯ ರೋಗಿಗಳ ಮೈಮೇಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಶನಿವಾರ ಅಶೋಕನಗರ ಠಾಣೆ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಈ ಸಂಬಂಧ ರಮೇಶ್ ಎಂಬುವರು ಅಶೋಕನಗರ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ರಮೇಶ್ ಕುಮಾರ್ ಎಂಬುವರು ತಮ್ಮ 72 ವರ್ಷದ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಶನಿವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ನರ್ಸ್ ವೇಷದಲ್ಲಿದ್ದ ಯುವತಿ, ರಮೇಶ್ ಕುಮಾರ್‌ಗೆ ತಾಯಿಗೆ ಚಿಕಿತ್ಸೆ ನೀಡಬೇಕಿದೆ. ಹೊರಗಡೆ ಹೋಗುವಂತೆ ಸೂಚಿಸಿದ್ದಾರೆ. 10 ನಿಮಿಷದ ಬಳಿಕ ಹೊರಬಂದು “ನಿಮ್ಮ ತಾಯಿ ಮಲಗಿದ್ದಾರೆ, ತೊಂದರೆ ಕೊಡಬೇಡಿ’ ಎಂದು ಹೇಳಿ ಆಸ್ಪತ್ರೆಯಿಂದ ತೆರಳಿದ್ದಾಳೆ.
ಸ್ವಲ್ಪ ಸಮಯದ ನಂತರ ಆಸ್ಪತ್ರೆಯ ನರ್ಸ್ ಬಂದಾಗ, “ಈಗ ತಾನೇ ಚಿಕಿತ್ಸೆ ನೀಡಿದ್ದೀರಿ. ಮತ್ತೆ ಯಾಕೆ ಬಂದಿದ್ದೀರಾ?’ ಎಂದು ರಮೇಶ್ ಪ್ರಶ್ನಿಸಿದ್ದಾರೆ. ಆಗ ನರ್ಸ್ “ನಾನು ಈಗ ತಾನೇ ಬರುತ್ತಿದ್ದೇನೆ’ ಎಂದು ಉತ್ತರಿಸಿದ್ದಾರೆ. ಅನುಮಾನಗೊಂಡ ರಮೇಶ್, ತಾಯಿಯ ಬಳಿ ಬಂದು ಪರಿಶೀಲಿಸಿದಾಗ ಚಿನ್ನದ ಸರ, ಚಿನ್ನದ ಉಂಗುರದ ಬದಲು ನಕಲಿ ಆಭರಣ ಹಾಕಿರುವುದು ಬಯಲಾಗಿದೆ. ಬಳಿಕ ಕೂಲಂಕುಷವಾಗಿ ಪರಿಶೀಲಿಸಿದಾಗ ಆಸ್ಪತ್ರೆಯಲ್ಲಿ ಇದೇ ರೀತಿಯಾಗಿ ಈ ಹಿಂದೆಯೂ ಕೋಮಲಾ ಎಂಬಾಕೆಗೂ ವಂಚಿಸಿರುವುದು ಬಯಲಾಗಿದೆ.
ಆಸ್ಪತ್ರೆಯ ಸಿಸಿ ಕ್ಯಾಮೆರಾ ದೃಶ್ಯಗಳಲ್ಲಿ ಪರಿಶೀಲಿಸಿದಾಗ ನಕಲಿ ನರ್ಸ್ ಚಲನವಲನ ಪತ್ತೆಯಾಗಿದ್ದು, ಆಕೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.