ಮೂಡಬಿದಿರೆ: ‘ಮಂಗಳೂರು ಲಾಲ್‌ಭಾಗ್‌ನಲ್ಲಿ ನಿಮ್ಮ ವಾಹನ ಸಿಗ್ನಲ್ ಜಂಪ್ ಮಾಡಿದೆ, ನೂರು ರೂಪಾಯಿ ದಂಡ ಕಟ್ಟಿ ‘ ಎಂಬ ನೋಟಿಸೊಂದು ಮೂಡಬಿದಿರೆಯ ದ್ವಿಚಕ್ರವಾಹನ ಚಾಲಕಿಯೋರ್ವರಿಗೆ ಬಂದಿದೆ. ಇದೇನು ವಿಶೇಷ? ಕಟ್ಟಿ ದಂಡ ಎಂದು ನೀವೆನ್ನಬಹುದು! ಆದರೆ ಅಸಲಿಯತ್ತು ಇರುವುದೇ ಇಲ್ಲಿ. ಈ ಮೂಡಬಿದಿರೆಯ ದ್ವಿಚಕ್ರ ವಾಹನ ಚಾಲಕಿ ಮೂಡಬಿದಿರೆಯಲ್ಲೇ ಉದ್ಯೋಗಸ್ಥೆ. ಓಡಾಟ ಏನಿದ್ದರೂ ಮೂಡಬಿದಿರೆಯಲ್ಲೇ. ಈಕೆ ಸ್ವೀಕರಿಸಿದ ನೋಟಿಸಿನಲ್ಲಿ ಕಾಣಿಸಿದ ವಾಹನ ನಂಬ್ರ, ವಾರೀಸುದಾರರ ಹೆಸರು ಎಲ್ಲವೂ ತನ್ನ ವಾಹನದಲ್ಲಿರುವುದೇ ಆಗಿದೆ. ಆದರೆ, ಆಕೆ ಮಂಗಳೂರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗಿಯೇ ಇಲ್ಲ ಎಂದಾದರೆ, ಆಕೆ ಸಿಗ್ನಲ್ ಜಂಪ್ ಮಾಡಿರುವುದಾದರೂ ಹೇಗೆ?
Advertisement
ಕುತೂಹಲದಿಂದ ಮಂಗಳೂರಿಗೆ ಹೋಗಿ ಸಂಬಂಧಪಟ್ಟ ಪೊಲೀಸರನ್ನು ಕಂಡಾಗ ಅದೆಲ್ಲ ರೆಕಾರ್ಡ್ ಆಗಿದೆ ಎಂಬ ಉತ್ತರ ಸಿಕ್ಕಿತು. ಆದರೂ ಬಿಡದೆ ಕೆಮರಾ ರೆಕಾರ್ಡಿಂಗ್ ಪರಿಶೀಲಿಸಿದಾಗ ಕಂಡದ್ದು ಬೇರೆಯೇ. ಈಕೆಯ ದ್ವಿಚಕ್ರ ವಾಹನ ಕಪ್ಪು ಬಣ್ಣದ್ದಾದರೆ ಮಂಗಳೂರಿನಲ್ಲಿ ಸಿಗ್ನಲ್ ಜಂಪ್ ಮಾಡಿದ ವಾಹನ ಕೆಂಪು ಬಣ್ಣದ್ದು. ನಂಬ್ರ ಎರಡೂ ಕಡೆ ಒಂದೇ. ಹಾಗಿದ್ದರೆ ನಂಬರ್ ನಕಲಿ ನಂಬರ್ ಪ್ಲೇಟ್ ವಾಹನಗಳು ರಸ್ತೆಗಳಲ್ಲಿವೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಆಕೆ ತನ್ನ ವಾಹನದ ಎಲ್ಲ ದಾಖಲೆಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಮನಸ್ಸು ಮಾಡಿದರೆ ಇಂಥ ಅದೆಷ್ಟೋ ನಕಲಿ ನಂಬ್ರ ಹೊತ್ತ ವಾಹನಗಳ ಅಸ್ತಿತ್ವವನ್ನು ಬಯಲಿಗೆಳೆಯಬಹುದು.