ಕೆಜಿಎಫ್: ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ನೀಡಿದ್ದ 5 ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಪಡಿತರ ಚೀಟಿಯನ್ನು ಜೋಡಣೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟ ಕೆಲವು ಸೈಬರ್ ಸೆಂಟರ್‌ಗಳಿಗೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಕೆಲವು ಸೈಬರ್ ಸೆಂಟರ್ ಮಾಲೀಕರು ಸಾಮಾಜಿಕ ಜಾಲತಾಣಗಳಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿ 2 ಸಾವಿರ ಪಡೆದುಕೊಳ್ಳಲು, ಮೇ 31ರೊಳಗೆ ಆಧಾರ್‌ನೊಂದಿಗೆ ಪಡಿತರ ಚೀಟಿ ಜೋಡಣೆ ಮಾಡಿಕೊಳ್ಳಬೇಕೆಂದು ಗಾಳಿ ಸುದ್ದಿ ಸಾಮಾಜಿಕ ಜಾಲತಾಣ ಮತ್ತು ವಾಟ್ಸಾಪ್‌ಗ್ಳಲ್ಲಿ ಹರಡಿದೆ. ಇದರಿಂದಾಗಿ ನೂರಾರು ಮಹಿಳೆಯರು ಬೆಳಗಿನಿಂದಲೇ ಸೈಬರ್ ಸೆಂಟರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು.
250-300 ರೂ.ಸೇವಾ ಶುಲ್ಕ ವಸೂಲಿ: ಚುನಾವಣೆಗೂ ಮೊದಲು ಆನ್‌ಲೆ„ನ್ ಮೂಲಕ ಆಧಾರ್ ಕಾರ್ಡ್‌ನೊಂದಿಗೆ ಪಡಿತರ ಚೀಟಿ ಜೋಡಣೆಗೆ ಸೆ„ಬರ್ ಸೆಂಟರ್‌ಗಳ ಮಾಲೀಕರು ಸೇವಾ ಶುಲ್ಕವೆಂದು 40-50 ರೂ. ಪಡೆದುಕೊಳ್ಳುತ್ತಿದ್ದು, ಈಗ ಗೃಹಲಕ್ಷ್ಮೀ ಯೋಜನೆ ಲಾಭ ಪಡೆದುಕೊಳ್ಳಲು ನಾಗರೀಕರು ಆಧಾರ್ ನೊಂದಿಗೆ ಪಡಿತರ ಚೀಟಿ ಜೋಡಣೆ ಮಾಡಿಸಲು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ, 40-50 ರೂಗಳಿದ್ದ ಸೇವಾ ಶುಲ್ಕವನ್ನು 250 ರಿಂದ 300 ರೂಗಳಿಗೆ ಏರಿಸಿದ್ದಾರೆ. ನಾಗರೀಕರು ದುಪ್ಪಟ್ಟು ಬೆಲೆ ನೀಡಲು ಕಂಗಾಲಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ತಹಶೀಲ್ದಾರ್ ಶ್ರೀನಿವಾಸ್ ಮತ್ತು ಸಿಬ್ಬಂದಿ ಸೈಬರ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿದ್ದ ನಗರದ ನ್ಯಾಯಾಲಯ ಸಂಕೀರ್ಣದ ಎದುರಿನ ಮೊಹಿನ್ ಅಸೋಸಿಯೇಟ್ಸ್, ಗೀತಾ ರಸ್ತೆ 3ನೇ ಕ್ರಾಸ್‌ನ ಜೆಪಿ ನೆಟ್‌ವರ್ಕ್ ಕಮ್ಯುನಿಕೇಷನ್, ಮತ್ತು ಮಿನಿ ಇಬ್ರಾಹಿಂ ರಸ್ತೆಯ ರಾಜಾ ನೆಟ್ ಕಮ್ಯುನಿಕೇಷನ್ ಸೆ„ಬರ್ ಸೆಂಟರ್‌ಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸರ್ಕಾರದಿಂದ ಆಧಾರ್ ಮತ್ತು ಪಡಿತರ ಚೀಟಿ ಜೋಡಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾರ್ಗಸೂಚಿಗಳು ಬಂದಿಲ್ಲ. ಮಾರ್ಗಸೂಚಿಗಳು ಬಂದ ಬಳಿಕ ಸಂಬಂಧಪಟ್ಟ ಇಲಾಖೆ ವತಿಯಿಂದ ತಾಲೂಕು ಕಚೇರಿಯ ನಾಮಫಲಕದಲ್ಲಿ ಪ್ರಕಟಿಸಲಾಗುವುದು. ನಾಗರಿಕರು ಯಾವುದೇ ಕಾರಣಕ್ಕೂ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಒಂದು ವೇಳೆ ಯಾರಾದರೂ ಆಧಾರ್ ಮತ್ತು ಪಡಿತರ ಚೀಟಿ ಜೋಡಣೆ ಮಾಡಿಕೊಡುತ್ತೇವೆ ಎಂದು ಹೇಳಿ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡುವುದರ ಬಗ್ಗೆ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು.
-ಎಚ್.ಶ್ರೀನಿವಾಸ್, ತಹಶೀಲ್ದಾರ್, ಕೆಜಿಎಫ್