Advertisement

ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಗಳ ಮಹಾಪೂರ

07:16 PM Apr 12, 2020 | sudhir |

ಮಣಿಪಾಲ: ಗೂಗಲ್‌ಗೆ ಹೋಗಿ ಕೋವಿಡ್‌ – 19  ಎಂದು ಸರ್ಚ್‌ ಮಾಡಿ ನೋಡಿ. ಮಾಹಿತಿಗಳ ಮಹಾಪೂರವೇ ನಿಮ್ಮೆದುರು ತೆರೆದುಕೊಳ್ಳುತ್ತದೆ. ಇದರಲ್ಲಿ ಯಾವುದು ಸರಿಯಾದ ಮಾಹಿತಿ, ಯಾವುದು ತಪ್ಪು ಮಾಹಿತಿ ಎಂದೇ ತಿಳಿಯದು.

Advertisement

ಅಂತೆಯೇ ಫೇಸ್‌ಬುಕ್‌, ವಾಟ್ಸಪ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌, ಟ್ವಿಟ್ಟರ್‌, ಪಿಂಟ್ರೆಸ್ಟ್‌ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲೂ ಕೋವಿಡ್‌-19 ಕುರಿತಾದ ಮಾಹಿತಿ, ಅಭಿಪ್ರಾಯ, ಸಲಹೆ ಸೂಚನೆಗಳು, ಮೀಮ್‌ಗಳು, ಚಿತ್ರಗಳು ಸಾಕಷ್ಟು ಹರಿದಾಡುತ್ತಿವೆ. ಟೆಕ್‌ ಕಂಪೆನಿಗಳು ಸುಳ್ಳು ಮತ್ತು ತಪ್ಪು ಮಾಹಿತಿ ಗಳನ್ನು ನಿಯಂತ್ರಿಸಲು ಸಾಕಷ್ಟು ಕ್ರಮ ಕೈಗೊಂಡಿದ್ದರೂ ಹೆಚ್ಚಿನ ಲಾಭವಾಗಿಲ್ಲ.

ಉದಾಹರಣೆಗೆ ಹೇಳುವುದಾದರೆ ಇನ್‌ಸ್ಟಾಗ್ರಾಂ ಅಮೆರಿಕದ ಬಳಕೆದಾರರಿಗಾಗಿ ಕೋವಿಡ್‌ ಕುರಿತಾದ ಸರಿಯಾದ ಮಾಹಿತಿಗಾಗಿ ರೋಗ ನಿಯಂತ್ರಣ ಮತ್ತು ತಡೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಎಂದಿದೆ. ಬ್ರಿಟನ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಇಲಾಖೆಯ ವೆಬ್‌ಸೈಟ್‌ಗೆ ಹೋಗಲು ಸೂಚಿಸಿದೆ. ಆದರೆ ಬಳಕೆದಾರರು ಇಂಥ ಅಧಿಕೃತ ವೆಬ್‌ಸೈಟ್‌ಗಳಿಂತಲೂ ಅನಧಿಕೃತವಾಗಿ ಮತ್ತು ದೃಢಪಡದ ಮೂಲಗಳ ಮಾಹಿತಿಯನ್ನೇ ಹೆಚ್ಚು ಶೋಧಿಸುತ್ತಾರೆ.

ಫೇಸ್‌ಬುಕ್‌ನಲ್ಲಿ ಕೋವಿಡ್‌-19ಗಾಗಿಯೇ ಮೀಸಲಾದ “ಮಾಹಿತಿ ಕೇಂದ್ರ’ವಿದೆ. ಆದರೆ ಈ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದಷ್ಟು ಸುಳ್ಳು ಮತ್ತು ದ್ವೇಷದ ಮಾಹಿತಿಗಳು ಬೇರೆ ಯಾವ ಮಾಧ್ಯಮದಲ್ಲೂ ಹರಿದಾಡಿಲ್ಲ ಎನ್ನುತ್ತಾರೆ ತಜ್ಞರು.

ಶೇ. 88 ತಪ್ಪು ಮಾಹಿತಿ
ಸಾಮಾಜಿಕ ಮಾಧ್ಯಮಗಳಲ್ಲಿ ಕೋವಿಡ್‌-19 ಕುರಿತಾದ ಮಾಹಿತಿಗಳ ಅಸಲಿತನವನ್ನು ಪರಿಶೀಲಿಸಲು ಪ್ರಯತ್ನವೊಂದನ್ನು ಇತ್ತೀಚೆಗೆ ನಡೆಸಲಾಯಿತು. ಈ ಪ್ರಕಾರ ಕೆಲವು ಸಾವಿರ ಮಾಹಿತಿಗಳನ್ನು ಆಯ್ದು ವಿಶ್ಲೇಷಿಸಿದಾಗ ಈ ಪೈಕಿ ಶೇ. 88 ಮಾಹಿತಿಗಳು ಸುಳ್ಳು ಅಥವಾ ಅನಪೇಕ್ಷಿತ ಎಂದು ಸಾಬೀತಾಗಿದೆ.

Advertisement

ಸುಳ್ಳು ಮತ್ತು ತಪ್ಪು ಮಾಹಿತಿ ಹರಡುವುದರಲ್ಲಿ ಟಿವಿ ವಾಹಿನಿಗಳು ಮತ್ತು ಪತ್ರಿಕೆಗಳೂ ಹಿಂದೆ ಬಿದ್ದಿಲ್ಲ. ಟಿವಿಗಳಲ್ಲಿ ಪ್ರಸಾರವಾದ ಶೇ.9 ಮತ್ತು ಪತ್ರಿಕೆಗಳಲ್ಲಿ ಪ್ರಕಟವಾದ ಶೇ.8 ಮಾಹಿತಿ ಸುಳ್ಳು ಅಥವಾ ದೃಢಪಡದ ಮೂಲಗಳಿಂದ ಬಂದವುಗಳು ಎಂದಿದೆ ಈ ವರದಿ.

ಅಮೆರಿಕದಲ್ಲಿ ಶೇ.30ರಷ್ಟು ಮಂದಿ ಈಗಲೂ ಕೋವಿಡ್‌-19 ವೈರಾಣುವನ್ನು ಪ್ರಯೋಗಾಲಯದಲ್ಲಿ ತಯಾರಿಸಲಾಗಿದೆ ಎಂದೇ ನಂಬಿದ್ದಾರೆ ಹಾಗೂ ಇದನ್ನೇ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸುತ್ತಿದ್ದಾರೆ ಎನ್ನುವುದು ಪ್ಯೂ ರೀಸರ್ಚ್‌ ಸೆಂಟರ್‌ ನಡೆಸಿದ ಸಮೀಕ್ಷೆಯ ಅಂಶ.

ಸುಳ್ಳು ಮಾಹಿತಿಗಳನ್ನು ತಡೆಯಲು ಸಾಮಾಜಿಕ ಮಾಧ್ಯಮಗಳು ಕೈಗೊಂಡಿರುವ ಕ್ರಮಗಳು ಏನೇನೂ ಸಾಲದು ಎನ್ನುತ್ತಾರೆ ವಾಶಿಂಗ್ಟನ್‌ ವಿಶ್ವವಿದ್ಯಾಲಯದ ಜೀವಶಾಸ್ತ್ರ ಉಪನ್ಯಾಸಕ ಪ್ರೊ| ಕಾರ್ಲ್ ಬರ್ಜ್‌ಸ್ಟ್ರಮ್‌. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಹರಡುವ ಒಂದು ವ್ಯವಸ್ಥೆಯನ್ನು ಆಯಾಯ ಸಂಸ್ಥೆಗಳೇ ಸೃಷ್ಟಿಸಿ, ಬಳಿಕ ಅದನ್ನು ನಿಯಂತ್ರಿಸುವ ನಾಟಕವಾಡುತ್ತಿವೆ. ಜಗತ್ತು ಹಿಂದೆಂದೂ ಕಾಣದಂಥ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಈ ಸಂಸ್ಥೆಗಳು ದೊಡ್ಡ ಗಾಯಕ್ಕೆ ಬ್ಯಾಂಡ್‌ಏಯ್ಡ ಅಂಟಿಸುವ ಕೆಲಸ ಮಾಡುತ್ತಿವೆ ಎಂದು ಕಟುವಾಗಿ ವಿಶ್ಲೇಷಿಸಿದ್ದಾರೆ ಕಾರ್ಲ್.

ಸೋಶಿಯಲ್‌ ಮೀಡಿಯಾ ಕಂಪೆನಿಗಳು ಕೋವಿಡ್‌-19 ವೈರಸ್‌ಗೆ ಸಂಬಂಧಿಸಿದಂತೆ ಕೈಗೊಂಡಿರುವ ಮುನ್ನೆಚ್ಚರಿಕೆಗಳು ಅಸಮರ್ಪಕ ಹಾಗೂ ಬಹಳಷ್ಟು ವಿಳಂಬವಾಗಿತ್ತು ಎನ್ನುತ್ತಾರೆ ಫ‌ಸ್ಟ್‌ ಡ್ರಾಫ್ಟ್ ಎಂಬ ಎನ್‌ಜಿಒದ ಮುಖ್ಯಸ್ಥರಾದ ಕ್ಲೈರ್‌ ವಡ್ಲ್ì. ವಿಶ್ವ ಆರೋಗ್ಯ ಸಂಸ್ಥೆ, ಆಯಾಯ ದೇಶಗಳ ಆರೋಗ್ಯ ಇಲಾಖೆಗಳು ಹಾಗೂ ಇನ್ನಿತರ ಅಧಿಕೃತ ಮತ್ತು ವಿಶ್ವಾಸಾರ್ಹ ಮೂಲಗಳ ಮಾಹಿತಿಗಳನ್ನಷ್ಟೇ ಹಂಚಲು ಅವಕಾಶ ಕೊಟ್ಟಿದ್ದರೆ ಪರಿಸ್ಥಿತಿ ನಿಯಂತ್ರಿಸಬಹುದಿತ್ತು ಎನ್ನುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next