Advertisement

Fake Marriage: ನಕಲಿ ವಧು ಜತೆ ಅಸಲಿ ಮದುವೆ ಮಾಡಿಸುತ್ತಿದ್ದ ತಂಡ ಪೊಲೀಸ್‌ ಬಲೆಗೆ

09:30 PM Aug 13, 2024 | Team Udayavani |

ಗುಬ್ಬಿ: ಮದುವೆಯ ನಾಟಕವಾಡಿ ಒಡವೆ, ಹಣ ದೋಚುತ್ತಿದ್ದ ನಾಲ್ವರು ಖದೀಮರ ತಂಡವನ್ನು ಬಂಧಿಸುವಲ್ಲಿ ಗುಬ್ಬಿ ಪೊಲೀಸರು (Police)  ಯಶಸ್ವಿಯಾಗಿದ್ದಾರೆ.

Advertisement

ಮದುವೆ ಹೆಸರಲ್ಲಿ ಅವಿವಾಹಿತರನ್ನೇ ಗುರಿಯಾಗಿಸಿ ಬ್ರೋಕರ್ ಗಳ ತಂಡ ಗ್ರಾಮೀಣ ಭಾಗದಲ್ಲಿ ಮದುವೆ ಮಾಡಲು ಹಾತೊರೆಯುವ ಕುಟುಂಬಗಳ ನಂಬಿಸಿ ಸಂಪ್ರದಾಯದಂತೆ ಮದುವೆ ಮಾಡಿಕೊಂಡು ಹಣ-ಚಿನ್ನದೊಂದಿಗೆ ವ್ಯವಸ್ಥಿತವಾಗಿ ಪರಾರಿಯಾಗುತ್ತಿದ್ದ ತಂಡವನ್ನು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಬಂಧಿಸಿ ಜೈಲಿಗಟ್ಟಿದ್ದಾರೆ.

ಲಕ್ಷ್ಮೀ ಬಾಳ ಸಾಬ್ ಜನಕರ್ ಅಲಿಯಾಸ್ ಕೋಮಲಾ , ಸಿದ್ದಪ್ಪ , ಲಕ್ಷ್ಮೀಬಾಯಿ, ಲಕ್ಷ್ಮಿ ಬಂಧಿತರು. ಲಕ್ಷ್ಮೀ ಬಾಳ ಸಾಬ್ ಜನಕರ್ ಅಲಿಯಾಸ್ ಕೋಮಲಾ ಮಧುಮಗಳು. ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ, ಚಿಕ್ಕಮ್ಮ ಪಾತ್ರ ಧಾರಿ ಲಕ್ಷ್ಮೀಬಾಯಿ ಹಾಗೂ
ಬ್ರೋಕರ್‌ ಲಕ್ಷ್ಮಿ ಬಂಧಿತರು. ನಕಲಿ ವಧುವಿಗೆ ಇಬ್ಬರು ಬೆಳೆದು ನಿಂತ ಮಕ್ಕಳಿದ್ದಾರೆ ಎಂಬುದು ಅಚ್ಚರಿ ತಂದಿದೆ.

ಗುಬ್ಬಿ ಸೇರಿದಂತೆ ರಾಜ್ಯದ ಹಲವೆಡೆ ಮುಗ್ಧ ಕುಟುಂಬವನ್ನು ಯಾಮಾರಿಸಿದ್ದ ತಂಡ ಮೂರು ವರ್ಷದಲ್ಲಿ ನಾಲ್ಕು ನಕಲಿ ಮದುವೆ ನಡೆಸಿ ಹಣ, ಚಿನ್ನಾಭರಣ ದೋಚಿ ನಾಪತ್ತೆಯಾಗಿದ್ದ ಘಟನೆ ನಡೆದಿತ್ತು.ಈ ಪೈಕಿ ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಪಾಲಾಕ್ಷ್ಯ ಎಂಬವರ ಮಗನಿಗೆ ನಕಲಿ ವಧು ಸೃಷ್ಟಿಸಿ ಸಂಪ್ರದಾಯದಂತೆ ಮದುವೆ ನಡೆಸಿದ್ದಾರೆ. ದಯಾನಂದ ಮೂರ್ತಿ(38) ಅಸಲಿ ಗಂಡಿಗೆ ಹೆಣ್ಣು ಹುಡುಕುವ ತವಕದಲ್ಲಿ ಈ ಮೋಸದ ಜಾಲಕ್ಕೆ ಪಾಲಕ್ಷ್ಯ ಕುಟುಂಬ ಸಿಲುಕಿದೆ.

ಘಟನೆ ಹಿನ್ನೆಲೆ:
ಕುಷ್ಟಗಿ ಮೂಲದ ಬಸವರಾಜು ಮೂಲಕ ಬ್ರೋಕರ್ ಲಕ್ಷ್ಮಿ ಎಂಬಾಕೆಯ ಪರಿಚಯ ಮಾಡಿಕೊಂಡ ಪಾಲಾಕ್ಷ್ಯ ಅವರ ಮದುವೆ ಕನಸಿಗೆ ಮತ್ತಷ್ಟು ಆಸೆ ಹುಟ್ಟಿಸಿ ಹುಬ್ಬಳ್ಳಿಯಲ್ಲಿ ಉತ್ತಮ ಹುಡುಗಿ ಇದ್ದಾಳೆ. ಆಕೆಗೆ ತಂದೆ, ತಾಯಿ ಇಲ್ಲ ನೀವೆ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿ ಕೋಮಲಾ ಎಂಬ ಹೆಸರಿನಲ್ಲಿ ಯುವತಿಯ ಪೋಟೋ ತೋರಿಸಿದ್ದರು.

Advertisement

ವರನ ಮನೆ ನೋಡಲು ತಾಲೂಕಿನ ಅತ್ತಿಕಟ್ಟೆ ಗ್ರಾಮಕ್ಕೆ ಬಂದಿದ್ದ ನಕಲಿ ವಧು ಜೊತೆಗೆ ನಕಲಿ ಚಿಕ್ಕಮ್ಮ, ಚಿಕ್ಕಪ್ಪ,  ಕಳೆದ ವರ್ಷದ ನವೆಂಬರ್‌ನಲ್ಲಿ ವರನ ಮನೆಗೆ ಬಂದು ಅಂದೇ ಮದುವೆ ಮಾತುಕತೆ ನಡೆಸಿ ಮರುದಿನವೇ ಅತ್ತಿಕಟ್ಟೆ ಗ್ರಾಮದಲ್ಲೇ ದೇವಸ್ಥಾನದ ಬಳಿ ಮದುವೆ ಮಾಡಿ ಮುಗಿಸಿ ತಮ್ಮ ಮೋಸದ ಜಾಲ ಯಶಸ್ವಿಗೊಳಿಸಿದರು.

ಸಂಪ್ರದಾಯದ ಹೆಸರಲ್ಲಿ ಹೊರಟ ನಕಲಿ ವಧು:
ಮಧು ಮಗಳಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ಒಟ್ಟು 25 ಗ್ರಾಂ ಚಿನ್ನಾಭರಣ ನೀಡಿದ್ದ ಪಾಲಾಕ್ಷ್ಯ ಇಡೀ ನಕಲಿ ಮದುವೆಯ ಸೂತ್ರಧಾರಿ ಬ್ರೋಕರ್‌ ಲಕ್ಷ್ಮಿಗೆ 1.5 ಲಕ್ಷ ಹಣ ನೀಡಿದ್ದರು. ಹೆಣ್ಣಿನ ಕಡೆಯವರು ಅಂತ 8 ಜನರ ಕರೆ ತಂದಿದ್ದ ಬ್ರೋಕರ್‌ ಲಕ್ಷ್ಮಿ ಮದುವೆ ಮುಗಿದ ಎರಡು ದಿನದ ನಂತರ ಸಂಪ್ರದಾಯದ ಹೆಸರಿನಲ್ಲಿ ಚಿನ್ನಾಭರಣ ಸಹಿತ ಯುವತಿಯೊಬ್ಬಳನ್ನೇ ವಾಪಸ್‌ ಕರೆದುಕೊಂಡು ಹೊರಟರು. ಒಂದು ವಾರ ಕಳೆದರೂ ವಾಪಸ್‌ ಬಾರದ ಮಧುಮಗಳ ಬಗ್ಗೆ ಆತಂಕಗೊಂಡ ಪಾಲಾಕ್ಷ್ಯ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಾಗಿದೆ.

ವಾಪಸ್‌ ಗುಬ್ಬಿಗೆ ಬಂದ ಪಾಲಕ್ಷ್ಯ ಮದುವೆ ಮಾಡಿಸಿದ ತಂಡದ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ನಿರಂತರ ತನಿಖೆ ನಡೆಸಿ ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದ ನಾಲ್ವರು ಆರೋಪಿಗಳ ಮಹಾರಾಷ್ಟ್ರ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಬಂಧಿಸಿದರು.

ಮದುವೆ ಮಾಡಿ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ತಂಡ ನಕಲಿ ವಿಳಾಸದಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿಕೊಳ್ಳುತ್ತಿದ್ದರು. ಆಧಾರ್ ಕಾರ್ಡ್ ತೋರಿಸಿ ಗಂಡಿನ‌ ಮನೆಯವರ ನಂಬಿಸುತ್ತಿದ್ದರು. ನಾಲ್ವರಿಗೂ ಹೆಚ್ಚು ಜನರಿಗೆ ಮದುವೆ ಹೆಸರಿನಲ್ಲಿ ದೋಖಾ ಮಾಡಿದ್ದ ಗ್ಯಾಂಗ್‌ ಈಗ ಜೈಲಿನ ಕಂಬಿ ಎಣಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next