Advertisement

Udupi: ನಕಲಿ ಅಂಕಪಟ್ಟಿ ಹಾವಳಿ, ದಾಖಲೆಗಾಗಿ ಅಲೆದಾಟ ತಪ್ಪಿಸಲು ಹೊಸ ವ್ಯವಸ್ಥೆ

11:43 AM Nov 09, 2023 | Team Udayavani |

ಉಡುಪಿ: ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿ ಹಾವಳಿಯಿಂದ ಮುಕ್ತಿ ನೀಡಲು ಮತ್ತು ಸರಕಾರದ ವಿವಿಧ ನೇಮಕಾತಿ ಸಂದರ್ಭ ಅಭ್ಯರ್ಥಿಗಳು ದಾಖಲೆಗಳಿಗಾಗಿ ಅಲೆದಾಟವನ್ನು ತಪ್ಪಿಸಲು ರಾಜ್ಯ ಸರಕಾರ “ಅಕಾಡೆಮಿಕ್‌ ಬ್ಯಾಂಕ್‌ ಆಫ್ ಕ್ರೆಡಿಟ್‌’ ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

Advertisement

ರಾಜ್ಯದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಈ ಹೊಸ ವ್ಯವಸ್ಥೆಯಡಿ ನೋಂದಾಯಿಸಲು ಸರಕಾರ ಸೂಚನೆ ನೀಡಿದೆ. ಜತೆಗೆ ಸರಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ನೇಮಕಾತಿ ಸಂದರ್ಭ ನೇಮಕಾತಿ ಪ್ರಾಧಿಕಾರ/ ಸಂಸ್ಥೆಗಳು ಡಿಜಿ ಲಾಕರ್‌ನಲ್ಲಿರುವ ಅಭ್ಯರ್ಥಿಗಳ ಶೈಕ್ಷಣಿಕ ಮಾಹಿತಿಯನ್ನು ಅಧೀಕೃತವಾಗಿ ಪಡೆಯಲು ಸರಕಾರ ಆದೇಶಿಸಿದೆ.

ಡಿಜಿ ಲಾಕರ್‌ ಸಮರ್ಪಕ ಬಳಕೆ
ಶೈಕ್ಷಣಿಕ ಕ್ಷೇತ್ರದಲ್ಲಿ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ತರಲು ಹಾಗೂ ಮಾಹಿತಿ ತಂತ್ರಜ್ಞಾನದ ಬಳಕೆಯ ಮೂಲಕ ಸಮರ್ಥ ಸೇವೆಗಳನ್ನು ತಲುಪಿಸಲು ಕೇಂದ್ರ ಸರಕಾರವು ಶೈಕ್ಷಣಿಕ ದಾಖಲೆಗಳನ್ನು ಸಮಗ್ರವಾಗಿ ಸುಭದ್ರತೆಯಿಂದ ಇಡಲು ಡಿಜಿಟಲ್‌ ಡಿಪಾಸಿಟರಿಯ ಎನ್‌ಎಡಿ ಈಗಾಗಲೇ ಸ್ಥಾಪಿಸಿದೆ. ಕೇಂದ್ರೀಯ ವಿ.ವಿ.ಗಳು, ರಾಜ್ಯ ವಿ.ವಿ.ಗಳು, ಖಾಸಗಿ ವಿ.ವಿ.ಗಳು, ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳು, ಶಾಲಾ ಮಂಡಳಿಗಳು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಡಿಜಿ ಲಾಕರ್‌ನಲ್ಲಿ ಶೈಕ್ಷಣಿಕ ದಾಖಲೆಗಳನ್ನು ಅಪ್‌ಲೋಡ್‌ ಮಾಡುತ್ತಿವೆ. ಡಿಜಿ ಲಾಕರ್‌ ಪ್ಲಾಟ್‌ಫಾರ್ಮ್ನಲ್ಲಿ ಲಭ್ಯವಿರುವ ಮೂಲ ದಾಖಲೆಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ-2020ರ ನಿಬಂಧನೆಯ ಪ್ರಕಾರ ಮಾನ್ಯವಾದ ದಾಖಲೆಗಳಾಗಿರುತ್ತವೆ.

ಡಿಜಿಲಾಕರ್‌ನಲ್ಲಿ ನೀಡಲಾದ ದಾಖಲೆಗಳಲ್ಲಿ ಲಭ್ಯವಿರುವ ಪದವಿಗಳ ಅಂಕಪಟ್ಟಿಗಳು, ಪ್ರಮಾಣಪತ್ರಗಳು ಮತ್ತು ಇತರ ಶೈಕ್ಷಣಿಕ ದಾಖಲೆಗಳನ್ನು ದೃಢೀಕೃತ ದಾಖಲೆಗಳಾಗಿ ಸ್ವೀಕರಿಸಲು ಯುಜಿಸಿಯು ಉನ್ನತ ಶಿಕ್ಷಣ ಸಂಸ್ಥೆಗಳಿಗೂ ಸೂಚನೆ ನೀಡಿದೆ.

ಡ್ರಾಪ್‌ಔಟ್‌ ತಡೆಗೆ ಕ್ರಮ
ಕೇಂದ್ರ ಸರಕಾರವು ಅಕಾಡೆಮಿಕ್‌ ಬ್ಯಾಂಕ್‌ ಆಫ್ ಕ್ರೆಡಿಟ್‌ ಸ್ಕೀಮ್‌(ಎಬಿಸಿ) ಆರಂಭಿಸಿದೆ. ಎಬಿಸಿಯ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿಯ ಅಧ್ಯಯನದ ಅವಧಿಯಲ್ಲಿ ಗಳಿಸಿದ ಕ್ರೆಡಿಟ್‌ಗಳನ್ನು ಶೇಖರಿಸುವ, ವಿದ್ಯಾರ್ಥಿಗಳು ಸಂಸ್ಥೆಯಿಂದ ವರ್ಗಾವಣೆಗೊಂಡಾಗ ಕ್ರೆಡಿಟ್‌ ವರ್ಗಾಯಿಸುವ ಮತ್ತು ಅವಶ್ಯವಿದ್ದಾಗ ಗಳಿಸಿದ ಕ್ರೆಡಿಟ್‌ಗಳನ್ನು ಮುಂದುವರಿಸಬಹುದಾಗಿದೆ. ವರ್ಗಾವಣೆಯಿಂದ ವಿದ್ಯಾರ್ಥಿಗಳು ಅಧ್ಯಯನವನ್ನು ಮೊಟಕುಗೊಳಿಸದೇ ಮುಂದುವರಿಸಲು ಸಹಕಾರಿ ಯಾಗಲಿದೆ. ಡ್ರಾಪ್‌ಔಟ್‌ ಅನುಪಾತವನ್ನು ನಿಯಂತ್ರಿಸಲು ಈ ವ್ಯವಸ್ಥೆ ಪೂರಕವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಸೂಚಿಸಿದ್ದರೂ ಅನುಷ್ಠಾನವಾಗಿಲ್ಲ
ಉನ್ನತ ಶಿಕ್ಷಣ ಇಲಾಖೆಯಲ್ಲಿ ಪದವಿ, ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು, ಪ್ರಮಾಣ ಪತ್ರಗಳು, ಇತರೆ ಶೈಕ್ಷಣಿಕ ದಾಖಲೆ
ಗಳನ್ನು ಇಲಾಖೆಯ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ (ಯುಯುಸಿಎಂಎಸ್‌) ತಂತ್ರಾಂಶದ ಮೂಲಕ ಡಿಜಿ ಲಾಕರ್‌ನಲ್ಲಿ ಸಂಗ್ರಹಿಸುವ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತಂದಿದ್ದರೂ ಅನುಷ್ಠಾನವಾಗಿಲ್ಲ. ಅಲ್ಲದೆ ನೇಮಕಾತಿ ಪ್ರಾಧಿಕಾರಗಳಲ್ಲಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಡಿಜಿ ಲಾಕರ್‌ ಅಂಕಪಟ್ಟಿಯನ್ನು ಪರಿಗಣಿಸುವ ವ್ಯವಸ್ಥೆಯು ಇರಲಿಲ್ಲ. ಹೀಗಾಗಿಯೇ ವಿದ್ಯಾರ್ಥಿಗಳು ಮತ್ತು ಸ್ಟೇಕ್‌ ಹೋಲ್ಡರ್ ಡಿಜಿ ಲಾಕರ್‌ ಅಂಕಪಟ್ಟಿಗಳ ಬಳಕೆಗೆ ಸಂಪೂರ್ಣವಾಗಿ ಒಗ್ಗಿ ಕೊಂಡಿಲ್ಲ.

2023-24ನೇ ಸಾಲಿಗೆ ಅನ್ವಯವಾಗುವಂತೆ ಉನ್ನತ ಶಿಕ್ಷಣ ಇಲಾಖೆಯ ಅಧೀನದ ಇಲಾಖೆಗಳು, ಸಾರ್ವಜನಿಕ ವಿಶ್ವವಿದ್ಯಾನಿಲಯಗಳು, ಎಲ್ಲ ಶೈಕ್ಷಣಿಕ ಸಂಸ್ಥೆಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ಅಂಕಪಟ್ಟಿ, ಪ್ರಮಾಣ ಪತ್ರ, ಇತರ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ಕಡ್ಡಾಯವಾಗಿ ಸಂಗ್ರಹಿಸಿಡಬೇಕು. ಉನ್ನತ ಶಿಕ್ಷಣದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಕ್ರೆಡಿಟ್‌ಗಳನ್ನು ಅಕಾಡೆಮಿಕ್‌ ಬ್ಯಾಂಕ್‌ ಆಫ್ ಕ್ರೆಡಿಟ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು. ನೇಮಕಾತಿ ಪ್ರಾಧಿಕಾರಿಗಳು/ ಸಂಸ್ಥೆಗಳು ನೇಮಕಾತಿ ಸಮಯದಲ್ಲಿ ಡಿಜಿ ಲಾಕರ್‌ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ದೃಢೀಕೃತವೆಂದು ಪರಿಗಣಿಸುವಂತೆ ಆದೇಶಿಸಲಾಗಿದೆ.
– ನಂದಕುಮಾರ್‌ ಬಿ., ಅಧೀನ ಕಾರ್ಯದರ್ಶಿ ,ಉನ್ನತ ಶಿಕ್ಷಣ ಇಲಾಖೆ

ಇದನ್ನೂ ಓದಿ: Bantwala: ಭಾರೀ ಮಳೆಗೆ ಮರ ಬಿದ್ದು ಗೂಡಂಗಡಿ, ಬಸ್ ತಂಗುದಾಣಕ್ಕೆ ಹಾನಿ

Advertisement

Udayavani is now on Telegram. Click here to join our channel and stay updated with the latest news.

Next