Advertisement
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಲಾದ ಪಟ್ಟಿ ಎಂಬ ಪ್ರಸ್ತಾವನೆಯೊಂದಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಹಿ ಹೊಂದಿದ್ದ ಬಿಜೆಪಿಯ ನಕಲಿ ಪಟ್ಟಿ ಮಂಗಳವಾರ ಬೆಳಗ್ಗೆ ತೀವ್ರ ಸದ್ದು ಮಾಡಿತು. ಸುಮಾರು 100 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಈ ಪತ್ರದಲ್ಲಿ ಹೇಳಲಾಗಿತ್ತು. ಕುತೂಹಲಕಾರಿ ಸಂಗತಿ ಎಂದರೆ ಈ ಪಟ್ಟಿ ಬಿಡುಗಡೆಯಾಗುವ ಕಾಲಕ್ಕೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆಗಾಗಿ ನಾಯಕರು ಹರಸಾಹಸ ಪಡುತ್ತಿದ್ದರು.
Related Articles
Advertisement
ನಕಲಿ ಪಟ್ಟಿಯಲ್ಲಿ ಸಿಎಂ ಕ್ಷೇತ್ರ ಬದಲು, ಕಟೀಲ್‌ಗೂ ಸ್ಥಾನ, ಜೋಷಿ ರಾಜ್ಯ ರಾಜಕಾರಣಕ್ಕೆ ಈ ನಕಲಿ ಪಟ್ಟಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವನ್ನು ಶಿಗ್ಗಾವಿಯಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬದಲಾಯಿಸಿದ್ದು ಮಾತ್ರವಲ್ಲ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯ ರಾಜಕಾರಣಕ್ಕೆ ಎಳೆತರಲಾಗಿದ್ದು, ಅವರಿಗೆ ಮಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ ಎಂದು ಉಲ್ಲೇಖೀಸಲಾಗಿತ್ತು.
ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಚಿಕ್ಕೋಡಿ -ಸದಲಗಾ, ಅವರ ಪತಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರಿಗೆ ನಿಪ್ಪಾಣಿ ಕ್ಷೇತ್ರದ ಟಿಕೆಟ್ ನೀಡಲಾಗಿತ್ತು. ಬೆಂಗಳೂರು ನಗರದಲ್ಲಿ ಸಚಿವ ಆರ್.ಅಶೋಕ ಅವರನ್ನು ಸುರಕ್ಷಿತ ಕ್ಷೇತ್ರ ಪದ್ಮನಾಭನಗರದಿಂದ ಬ್ಯಾಟರಾಯನಪುರಕ್ಕೆ ಎತ್ತಂಗಡಿ ಮಾಡಲಾಗಿತ್ತು. ಕೇಂದ್ರ ಸಚಿವ ಭಗವಂತ ಕೂಬಾ ಅವರಿಗೆ ಬಸವಕಲ್ಯಾಣದ ಟಿಕೆಟ್ ದಯಪಾಲಿಸಲಾಗಿತ್ತು. ಅದರ ಜತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರನ್ನು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಎಂದು ನಮೂದಿಸಿ ವಿವಾದದ ಬೆಂಕಿ ಹಚ್ಚಲಾಗಿತ್ತು.
ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ, ಶಿವಮೊಗ್ಗದಿಂದ ಇ.ಕಾಂತೇಶ್ ಕಣಕ್ಕೆ ಇಳಿಸಲಾಗಿತ್ತು. ಇನ್ನು ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಈ ಪಟ್ಟಿಯಲ್ಲಿ ಪ್ರಮೋದ್ ಮುತಾಲಿಕ್ ಅವರನ್ನೇ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿ, ಹಾಲಿ ಶಾಸಕ, ಸಚಿವ ವಿ.ಸುನಿಲ್ ಕುಮಾರ್ ಅವರನ್ನು ಉಡುಪಿಗೆ ಸ್ಥಳಾಂತರಿಸಲಾಗಿತ್ತು. ಈ ಎಲ್ಲ ಕಾರಣಗಳಿಂದ ನಕಲಿ ಪಟ್ಟಿ ಬಿಜೆಪಿಯಲ್ಲಿ ತಲ್ಲಣಕ್ಕೆ ಕಾರಣವಾಗಿತ್ತು.