Advertisement

ನಕಲಿ ಪತ್ರಕರ್ತರಿಂದ ಉದ್ಯಮದ ಘನತೆಗೆ ಧಕ್ಕೆ: ಜಗದೀಶ ಖೊಬ್ರಿ

06:29 PM Feb 24, 2023 | Team Udayavani |

ತೆಲಸಂಗ: ಪತ್ರಿಕೋದ್ಯಮದ ಗಂಧ ಗಾಳಿ, ಸಭ್ಯತೆ, ನೀತಿ, ನಿಯಮ ಯಾವುದೂ ಗೊತ್ತಿಲ್ಲದ, ಕನಿಷ್ಠ ವಿದ್ಯಾರ್ಹತೆಯೂ ಇಲ್ಲದ ಕೆಲವು ನಕಲಿ ಪತ್ರಕರ್ತರಿಂದ ನಿಜವಾದ ಪತ್ರಕರ್ತರಿಗೆ ಮತ್ತು ಉದ್ಯಮದ ಘನತೆ-ಗೌರವಕ್ಕೆ ಧಕ್ಕೆ ಬರುತ್ತಿದೆ ಎಂದು ಗ್ರಾಮೀಣ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಖೊಬ್ರಿ ಹೇಳಿದರು.

Advertisement

ಗುರುವಾರ ಗ್ರಾಮದ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ ಸಭೆಯಲ್ಲಿ ಅವರು ಮಾತನಾಡಿ, ಯು ಟ್ಯೂಬ್‌ ಮತ್ತು ಮುದ್ರಣವಾಗದ ವಾರಪತ್ರಿಕೆಗಳ ಹೆಸರಿನಲ್ಲಿ ಅಧಿಕಾರಿ ಹಾಗೂ ಸಾರ್ವಜನಿಕರನ್ನು ಹೆದರಿಸಿ, ಅನೀತಿಗೆ ಕೈ ಹಾಕಿ ಬದುಕುತ್ತಿರುವರಿಂದ ಪತ್ರಕರ್ತರ ಗೌರವ ಹಾಳಾಗುತ್ತಿದೆ. ಸುದ್ದಿ ಪ್ರಸಾರಕ್ಕೆ ಬೇಕಿರುವ ಕನಿಷ್ಠ ಕಾನೂನಿನ ಅರಿವೂ ಇಲ್ಲ. ಕನ್ನಡ ಬರವಣಿಗೆ, ವ್ಯಾಕರಣವಂತೂ ಮೊದಲೇ ಗೊತ್ತಿಲ್ಲ. ಇಂತಹವರಿಗೆ ಕಡಿವಾಣ ಹಾಕಬೇಕಿರುವ ಅಧಿಕಾರಿ ವರ್ಗ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆಂದು ಹೇಳಿ ಮೌನವಾಗುತ್ತಿದ್ದಾರೆ.

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರ್ಯಾರು ಎಂಬ ಪ್ರಶ್ನೆ ಎದುರಾಗುತ್ತಿದೆ. 30-40 ವರ್ಷಗಳಿಂದ ಈ ಉದ್ಯಮದಲ್ಲಿ ಕೆಲಸ ಮಾಡಿದ ಹಿರಿಯ ಪತ್ರಕರ್ತರು ಈ ವ್ಯವಸ್ಥೆ ನೋಡಿ ಮರುಗುವಂತಾಗಿದೆ. ದಿನದಿಂದ ದಿನಕ್ಕೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗುತ್ತಿದೆ. ಪತ್ರಕರ್ತರ ಸೋಗಿನಲ್ಲಿರುವವರಿಗೆ ಕಾನೂನಿನ ಭಯ ಹುಟ್ಟಿದರೆ ಮಾತ್ರ ಇದಕ್ಕೆ ಕಡಿವಾಣ ಸಾಧ್ಯವಾಗಿದ್ದು, ಜಿಲ್ಲಾ ಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳು ಇಂತಹ ನಕಲಿ ಪತ್ರಕರ್ತರ ವಿರುದ್ದ
ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪತ್ರಿಕೆಗಳ ಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದರು.

ಕಾರ್ಯದರ್ಶಿ ಪ್ರಕಾಶ ಪೂಜಾರಿ ಮಾತನಾಡಿ, ಪತ್ರಕರ್ತರು ಸಮಾಜದ ಧ್ವನಿ ಎನ್ನುವುದು ಜನಸಾಮಾನ್ಯರ ತಿಳಿವಳಿಕೆಯಾಗಿತ್ತು. ಆದರೆ, ಪತ್ರಕರ್ತರ ಶ್ರೇಷ್ಠತೆಯನ್ನು ಇನ್ನು ಮುಂದೆ ಕಥೆಗಳಲ್ಲಿ ಮಾತ್ರ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕರು ಮೊಬೈಲ್‌ ಪತ್ರಕರ್ತರು ಆಗಿದ್ದಾರೆ.

ಬರವಣಿಗೆಯೇ ಗೊತ್ತಿಲ್ಲದ ರೋಲ್‌ಕಾಲ್‌ ಪತ್ರಕರ್ತರ ಹಾವಳಿ ಸಮಾಜದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ನೂರಾರು ಯು ಟ್ಯೂಬ್‌ ಚಾನೆಲ್‌ಗ‌ಳು, ಕಂಡು ಕೇಳರಿಯದ ಪತ್ರಿಕೆಗಳ ಐಡಿ ಕಾರ್ಡ್‌, ವಿಸಿಟಿಂಗ್‌ ಕಾರ್ಡ್‌ಗಳನ್ನು ಇಟ್ಟುಕೊಂಡು, ದಪ್ಪ ದಪ್ಪ ಅಕ್ಷರಗಳಲ್ಲಿ ತಮ್ಮ ಕಾರು, ಬೆ„ಕ್‌ಗಳ ಮುಂಭಾಗ ಪ್ರಸ್‌ ಎಂದು ಬರೆಸಿಕೊಂಡು ತಿರುಗುವವರ ವಿರುದ್ಧ ಕ್ರಮ ಅವಶ್ಯಕ ಎಂದರು. ಉಪಾಧ್ಯಕ್ಷ ಮೋಹನ ಪಾಟಣಕರ, ಹಿರಿಯ ಪತ್ರಕರ್ತರಾದ ಬಸವರಾಜ ಚಮಕೇರಿ, ಮಲಗೌಡ ಪಾಟೀಲ, ಕಲ್ಮೇಶ ಸತ್ತಿ, ಶ್ರೀಶೈಲ ಮಾಳಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next