Advertisement

ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಬೇಕಿದೆ; ಪ್ರೊ.ಪಿ.ಜಿ.ಕೊಣ್ಣೂರ

05:49 PM Jun 19, 2023 | Team Udayavani |

ಹುಕ್ಕೇರಿ: ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಜೊಳ್ಳು ಮತ್ತು ಕಾರ್ಯಮರೆತ ಪತ್ರಕರ್ತರಿಗೆ ಕಡಿವಾಣ ಹಾಕದಿದ್ದರೆ ನೈಜ ಪತ್ರಕರ್ತರಿಗಂತೂ ಮುಂದೆ ಉಳಿಗಾಲವಿಲ್ಲ ಎಂದು ಹಿರಿಯ ಪತ್ರಕರ್ತ, ನಿವೃತ್ತ ಪ್ರಾಧ್ಯಾಪಕ ಪ್ರೊ.ಪಿ.ಜಿ.ಕೊಣ್ಣೂರ ಎಚ್ಚರಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಸಭೆಯಲ್ಲಿ ಮಾತನಾಡಿದ ಅವರು, ಯುಟ್ಯೂಬ್‌, ವೆಬ್‌ ಚಾನೆಲ್‌, ಆ್ಯಪ್‌ಗ್ಳ ಹೆಸರಿನಲ್ಲಿ ಇಂದು ರಾಶಿ ರಾಶಿ ಜೊಳ್ಳು ಪತ್ರಕರ್ತರು ಹುಟ್ಟಿಕೊಳ್ಳುತ್ತಿರುವುದು ಪತ್ರಿಕೋದ್ಯಮದ ದುರಂತ ಎಂದು ಕಳವಳ ವ್ಯಕ್ತಪಡಿಸಿದರು.

ರಾತ್ರೋರಾತ್ರಿ ಯುಟ್ಯೂಬ್‌ ಚಾನೆಲ್‌ ಆರಂಭಿಸಿ, ಬೆಳಿಗ್ಗೆ ಲೋಗೋ ಹಿಡಿದು ಪ್ರಶ್ನೆ ಕೇಳಲು ಶುರು ಮಾಡುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಅಸಲಿಗೆ ಇಂತವರಿಗೆ ಮಾಧ್ಯಮ ರಂಗದ ಕನಿಷ್ಠ ಗಂಧ ಗಾಳಿಯೂ ಗೊತ್ತಿರುವುದಿಲ್ಲ. ಕೆಲವರು ತಮ್ಮ ಸ್ವಹಿತಾಸಕ್ತಿಗಾಗಿ ಯುಟ್ಯೂಬ್‌ ಚಾನೆಲ್‌ ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ಬ್ಲ್ಯಾಕ್‌ಮೇಲ್‌ ಮಾಡಿ, ಹಣ ಮಾಡಲು ಪತ್ರಿಕೋದ್ಯಮಕ್ಕೆ ಬರುತ್ತಿದ್ದಾರೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಖಜಾಂಚಿ ಚೇತನ ಹೊಳೆಪ್ಪಗೋಳ ಮಾತನಾಡಿ, ಬ್ಲ್ಯಾಕ್‌ಮೇಲ್‌ ಮಾಡುವುದು
ಪತ್ರಿಕೋದ್ಯಮದ ಧರ್ಮವಲ್ಲ. ಪತ್ರಕರ್ತರಿಗೆ ಎಲ್ಲರ ಜೊತೆಗೆ ಸಂಬಂಧ ಇರಬೇಕೆ ಹೊರತು, ವ್ಯವಹಾರಿಕವಾಗಿ ಆಗಬಾರದು. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವವರು ಮಾತ್ರ ನೈಜ ಪತ್ರಕರ್ತರಾಗಿರುತ್ತಾರೆ. ಪತ್ರಕರ್ತ ಆದವನು ಸಮಾಜ
ಪರಿವರ್ತನೆ ಮಾಡಬೇಕೆ ಹೊರತು, ಸಮಾಜ ಒಡೆಯಬಾರದು ಎಂದು ಸೂಚ್ಯವಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ರವಿ ಕಾಂಬಳೆ ಮಾತನಾಡಿ, ಪತ್ರಕರ್ತರ ಮೇಲೆ ಸಾಕಷ್ಟು ಜವಾಬ್ದಾರಿ, ಹೊಣೆಗಾರಿಕೆ ಇದ್ದು ಸುದ್ದಿಯ ಒತ್ತಡಗಳ ಮಧ್ಯೆಯೂ ನೈಜ ಸುದ್ಧಿ ನೀಡುವ ಕೆಲಸವಾಗಬೇಕು. ಒತ್ತಡದಲ್ಲೇ ಸದಾ ಕಾರ್ಯನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಸಮಾಜ ಪತ್ರಕರ್ತರ ಬಗ್ಗೆ ಹೊಂದಿರುವ ಕನಿಷ್ಠ ಗೌರವ ಕಾಪಾಡುವ ಕೆಲಸ ಮಾಡಬೇಕಿದೆ.

Advertisement

ನಿಜವಾದ ಸುದ್ದಿ ಹೆಕ್ಕಿ ತೆಗೆದು, ಸುದ್ಧಿ ಮಾಡುವುದು ಸವಾಲಿನ ಕೆಲಸವಾಗಿದೆ. ಯಾರೂ ದಿಢೀರನೆ ಪತ್ರಕರ್ತ ಆಗುವುದಿಲ್ಲ. ಸುದ್ದಿ ಮನೆಯಲ್ಲಿ ಹಿರಿಯ ಪತ್ರಕರ್ತರು ತಿದ್ದಿ, ತೀಡಿದ ನಂತರವಷ್ಟೇ ಒಬ್ಬ ಪತ್ರಕರ್ತ ರೂಪಗೊಳ್ಳಲು ಸಾಧ್ಯ ಎಂದರು.

ಪತ್ರಕರ್ತರಾದ ಮಹಾದೇವ ನಾಯಿಕ, ಬಿ.ಬಿ.ಕೋತೆಕರ, ರಾಮಣ್ಣಾ ನಾಯಿಕ, ರಾಜು ಕುರಂದವಾಡೆ, ವಿಶ್ವನಾಥ ನಾಯಿಕ, ಸಚಿನ್‌ ಖೋತ, ಆನಂದ ಭಮ್ಮನ್ನವರ, ಶಶಾಂಕ ಮಾಳಿ, ಸಚಿನ್‌ ಕಾಂಬಳೆ, ಅಪ್ಪು ಹುಕ್ಕೇರಿ, ಸುರೇಶ ಕಿಲ್ಲೇದಾರ, ಬಸವರಾಜ ಕೊಂಡಿ, ಬಾಬು ಸುಂಕದ, ಸಂಜು ಮುತಾಲಿಕ, ರಾಜು ಬಾಗಲಕೋಟಿ, ನಂದು ಹುಕ್ಕೇರಿ, ಎ.ಎಂ.ಕರ್ನಾಚಿ, ಎಂ.ಎ.ಗುಂಡಕಲ್ಲೆ ಮತ್ತಿತರರು ಉಪಸ್ಥಿತರಿದ್ದರು.

ಜುಲೈನಲ್ಲಿ ವಿವಿಧ ಕಾರ್ಯಕ್ರಮ ಹುಕ್ಕೇರಿಯಲ್ಲಿ ಹೈಟೆಕ್‌ ಪತ್ರಕರ್ತರ ಭವನ ನಿರ್ಮಾಣ, ಬರುವ ಜುಲೆ„ ತಿಂಗಳಲ್ಲಿ ನಡೆಯಲಿರುವ ಪತ್ರಕರ್ತರ ದಿನಾಚರಣೆಯಲ್ಲಿ ಅಧಿಕಾರಿ-ಸಿಬ್ಬಂದಿಗಳಿಗೆ ಕಾರ್ಯಾಗಾರ, ಜನಪ್ರತಿನಿಧಿಗಳೊಂದಿಗೆ ಸಂವಾದ, ಪತ್ರಕರ್ತರಿಗೆ ಆರೋಗ್ಯ ವಿಮೆ, ಸಚಿವ ಸತೀಶ ಜಾರಕಿಹೊಳಿ, ಶಾಸಕ ನಿಖಿಲ್‌ ಕತ್ತಿ ಅವರ ಸನ್ಮಾನ ಸಮಾರಂಭ ಆಯೋಜಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next