Advertisement
ಗುಜರಾತ್‌ನ ಮೆಹ್ಸಾನ ಜಿಲ್ಲೆಯ ಮೋಲಿಪುರದಲ್ಲಿ ನಡೆದ ಈ ನಕಲಿ ಐಪಿಎಲ್ ಕಥೆ ಕೇಳಿದರೆ, ಯಾರಿಗೂ ನಗು ತಡೆದುಕೊಳ್ಳಲು ಸಾಧ್ಯವಿಲ್ಲ. ಈ ಬಾರಿ ಐಪಿಎಲ್ ಮುಗಿದಿದ್ದು ಮೇ 29ಕ್ಕೆ. ಅದಾದ ಮೂರು ವಾರಗಳ ಅನಂತರ ಗುಜರಾತ್‌ನ ಗುಂಪೊಂದು ಒಂದು ಗದ್ದೆಯಲ್ಲಿ ನಕಲಿ ಐಪಿಎಲ್ ಶುರು ಮಾಡಿದೆ. ಸಣ್ಣ ಹಳ್ಳಿಯೊಂದರಲ್ಲಿ ಪ್ರತಿಯೊಂದನ್ನೂ ಐಪಿಎಲ್‌ನಂತೆಯೇ ಮರುಸೃಷ್ಟಿ ಮಾಡಲಾಗಿದೆ. ಗುರಿ ರಷ್ಯಾ ಬೆಟ್ಟಿಂಗ್ ಹುಚ್ಚರ ಪಡೆ ಹಣ ಹೂಡುವಂತೆ ಮಾಡುವುದು !
ಮೆಹ್ಸಾನ ಜಿಲ್ಲೆಯ ವಡನಗರ ತಾಲೂಕಿನ ಮೋಲಿಪುರ ಎಂಬ ಹಳ್ಳಿಯಲ್ಲಿರುವ ಗದ್ದೆಯನ್ನು ಶೋಯಬ್ ಎಂಬಾತ ಬಾಡಿಗೆಗೆ ಪಡೆದ. ಈತನೇ ಇಡೀ ವಂಚನೆಯ ಸೂತ್ರದಾರ. ಆತ ಮೊದಲು ಗದ್ದೆಯಲ್ಲಿ ಐಪಿಎಲ್ ವಾತಾವರಣ ಸೃಷ್ಟಿ ಮಾಡಿದ. ಊರಲ್ಲಿರುವ 21 ಮಂದಿ ಗದ್ದೆ ಕೆಲಸದವರನ್ನು ಆಟಗಾರರಾಗಿ ತಯಾರು ಮಾಡಿದ. ಹಾಗೆಯೇ ನಿರುದ್ಯೋಗಿ ಯುವಕರೂ ಇದರಲ್ಲಿ ಸೇರಿಕೊಂಡರು. ಅವರಿಗೆಲ್ಲ ಅಸ್ತಿತ್ವ ಇಲ್ಲದ ತಂಡಗಳ ಜೆರ್ಸಿಗಳನ್ನು ನೀಡಲಾಯಿತು. ಒಂದು ಪಂದ್ಯಕ್ಕೆ ಒಬ್ಬೊಬ್ಬರಿಗೆ ತಲಾ 400 ರೂ.! ನಕಲಿ ಮೈದಾನದಲ್ಲಿ ಹ್ಯಾಲೋಜನ್ ಲೈಟ್‌ಗಳನ್ನು ಹಾಕಲಾಗಿತ್ತು. ಕೆಮರಾಮನ್ ಬಳಸಿ, ಐದು ಎಚ್‌ಡಿ ಕೆಮರಾಗಳ ಮೂಲಕ ಒಂದು ಯೂಟ್ಯೂಬ್ ಚಾನೆಲ್‌ನಲ್ಲಿ ಪಂದ್ಯಗಳ ನೇರಪ್ರಸಾರವೂ ನಡೆಯಿತು. ಶಕಿಬ್, ಸೈಫಿ, ಮೊಹಮ್ಮದ್ ಕೊಲು ಎಂಬ ಮೂವರನ್ನು ಅಂಪಾಯರ್‌ಗಳಾಗಿ ನೇಮಿಸಲಾಯಿತು. ಉತ್ತರಪ್ರದೇಶದ ಮೀರತ್‌ನ ಸಾದಿಖ್ ಗೆ ಖ್ಯಾತ ವೀಕ್ಷಕ ವಿವರಣೆಕಾರ ಹರ್ಷಾ ಭೋಗ್ಲೆಯ ಧ್ವನಿಯನ್ನು ಅನುಕರಿಸುವುದಕ್ಕೆ ಬರುತ್ತದೆ. ಈತನಿಂದ ಭೋಗ್ಲೆ ಅವರ ಶೈಲಿಯಲ್ಲೇ ವೀಕ್ಷಕ ವಿವರಣೆ ಮಾಡಿಸಲಾಯಿತು!
Related Articles
ಒಂದು ಟೆಲಿಗ್ರಾಮ್ ಚಾನೆಲ್ ಶುರು ಮಾಡಿ, ರಷ್ಯಾದ ಬುಕ್ಕಿಗಳಿಗೆ ಬೆಟ್ಟಿಂಗ್‌ಗೆ ಆಹ್ವಾನ ನೀಡಲಾಯಿತು. ಇದಕ್ಕೆ ರಷ್ಯಾದವರನ್ನೇ ಆಯ್ದುಕೊಳ್ಳುವುದಕ್ಕೂ ಒಂದು ಕಾರಣವಿದೆ. ಇಡೀ ವಂಚನೆಯ ಸೂತ್ರದಾರ ಶೋಯಬ್ 8 ತಿಂಗಳು ರಷ್ಯಾದಲ್ಲಿ ಬೆಟ್ಟಿಂಗ್‌ಗೆ ಹೆಸರಾಗಿದ್ದ ಪಬ್‌ವೊಂದರಲ್ಲಿ ಕೆಲಸ ಮಾಡಿದ್ದ. ಅಲ್ಲಿ ಆಸಿಫ್ ಮೊಹಮ್ಮದ್ ಎಂಬಾತನ ಪರಿಚಯವಾಗಿತ್ತು. ಈ ಆಸಿಫ್ ಪಬ್‌ನಲ್ಲಿ ಬೆಟ್ಟಿಂಗ್‌ಗೆ ತಮ್ಮ ಜೀವನವನ್ನೇ ಅಡವಿಟ್ಟುಕೊಂಡಿದ್ದ ಕೆಲ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟು, ಮೋಸ ಮಾಡುವ ಐಡಿಯಾವನ್ನು ಕೊಟ್ಟ! ಅದೇ ಐಡಿಯಾವನ್ನು ಇಟ್ಟುಕೊಂಡು ಶೋಯಬ್ ಗುಜರಾತ್‌ಗೆ ಮರಳಿದ.
Advertisement
ಅಂಪಾಯರ್‌ಗಳಿಗೆ ವಾಕಿಟಾಕಿಗಳನ್ನು ನೀಡಲಾಗಿತ್ತು. ಅವುಗಳ ಮೂಲಕ ಶೋಯಬ್ ಈಗ ಬೌಂಡರಿ ಬಾರಿಸಬೇಕು, ಸಿಕ್ಸರ್ ಬಾರಿಸಬೇಕು ಎಂದು ಅಂಪಾಯರ್‌ಗಳಿಗೆ ಸೂಚನೆ ನೀಡುತ್ತಿದ್ದ. ಅದನ್ನು ಅಂಪಾಯರ್‌ಗಳು ಬ್ಯಾಟ್ಸ್‌ಮನ್, ಬೌಲರ್‌ಗಳಿಗೆ ಸನ್ನೆ ಮಾಡಿ ತಿಳಿಸುತ್ತಿದ್ದರು. ಮುಂದೆ ಹಾಗೆಯೇ ನಡೆಯುತ್ತಿತ್ತು!
ಈ ಐಪಿಎಲ್ 15 ದಿನಗಳ ಕಾಲ ನಡೆದಿತ್ತು. ಇನ್ನೇನು ಕ್ವಾರ್ಟರ್ ಫೈನಲ್ ಪಂದ್ಯ ನಡೆಯಬೇಕೆನ್ನುವಷ್ಟರಲ್ಲಿ, ಪೊಲೀಸರಿಗೆ ವಿಷಯ ಗೊತ್ತಾಗಿದೆ. ಇಷ್ಟರಲ್ಲಿ ರಷ್ಯಾದ ಒಬ್ಬರು 3 ಲಕ್ಷ ರೂ.ಗಳನ್ನು ವರ್ಗಾಯಿಸಿಯೂ ಆಗಿತ್ತು! ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ನಕ್ಕು ಸುಸ್ತಾದ ಹರ್ಷಾ ಭೋಗ್ಲೆ!ತಮ್ಮನ್ನೇ ಅನುಸರಿಸಿ ಒಬ್ಟಾತ ವೀಕ್ಷಕ ವಿವರಣೆ ಮಾಡಿದ್ದನ್ನು ಪತ್ರಿಕೆಯಲ್ಲಿ ಓದಿ, ಖ್ಯಾತ ವೀಕ್ಷಕ ವಿವರಣೆಕಾರ ಹರ್ಷಾ ಭೋಗ್ಲೆ ಸುಸ್ತಾಗುವಷ್ಟು ನಕ್ಕಿದ್ದಾರಂತೆ. ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಕೂಡ ತಬ್ಬಿಬ್ಟಾಗಿದ್ದಾರೆ.