ರಬಕವಿ ಬನಹಟ್ಟಿ: ನನಗೆ ಎಲ್ಲರೂ ಮರ್ಯಾದೆ ಕೊಡಬೇಕು ಮತ್ತು ಮನೆಯಲ್ಲಿ ನಾನು ಸರ್ಕಾರಿ ಉನ್ನತ ಅಧಿಕಾರಿಯೆಂಬ ಸಂದೇಶ ನೀಡಲು ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಯಾಗಿದ್ದೇನೆಂದು ನಕಲಿ ಐಡಿ ಕಾರ್ಡ್ ಮಾಡಿಕೊಂಡು ಊರು ಸುತ್ತುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಸಂಗಮೇಶ ಲಕ್ಕಪ್ಪಗೋಳ(22) ಮೂಲತಃ ಹಿಪ್ಪರಗಿ ಗ್ರಾಮದವನಾಗಿದ್ದು, ಐಬಿ ನಕಲಿ ಕಾರ್ಡ್, ಕ್ಯಾಪ್ ಹೊಂದಿದ್ದ ಆರೋಪಿಯು ಬೈಕ್ ಮೇಲೂ ಐಬಿ ಲೇಗೋ ಹಾಕಿಕೊಂಡು ಸುತ್ತುತ್ತಿದ್ದ. ನಕಲಿ ಗನ್(ಲೈಟರ್ ಹತ್ತುವ ವಸ್ತು), ಕೆಟ್ಟ ವಾಕಿಟಾಕಿದೊಂದಿಗೂ ಫೋಸ್ ನೀಡಿದ್ದ. ಈ ವಿಚಾರ ಮೇಲಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಈತನಿಗಾಗಿ ಜಾಲ ಬೀಸುವಾಗಲೇ ಬನಹಟ್ಟಿಯ ಬಿದರಿ ಸಮುದಾಯ ಭವನ ಹತ್ತಿರದ ಚೆಕ್‌ಪೋಸ್ಟ್ ನಲ್ಲಿ ಪೊಲೀಸರಿಗೆ ಈ ಐಡಿ ಕಾರ್ಡ್ ತೋರಿಸಿದ್ದಾನೆ. ತಕ್ಷಣವೇ ಸಂಶಯಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸಿಕ್ಕಿ ಬಿದ್ದಿದ್ದಾನೆ.
ಊರಲ್ಲಿ ಗೌರವ ಸಿಗಲಿ ಹಾಗು ಮನೆಯಲ್ಲಿ ಪದೇ ಪದೇ ಯಾವುದಾದರೂ ನೌಕರಿಗೆ ಸೇರೆಂದು ಒತ್ತಾಯಕ್ಕೆ ಈ ವೇಷ ಹಾಕಿದ್ದೇನೆಂದು ಆರೋಪಿ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಪ್ರಾಥಮಿಕ ವರದಿ ಪ್ರಕಾರ ಈತನ ಹಿನ್ನಲೆ ಯಾವುದೇ ಪ್ರಕರಣವಿಲ್ಲ. ಯಾರಿಗಾದರೂ ವಂಚನೆ ಅಥವಾ ಮೋಸಗೊಳಿಸಿದ ಮಾಹಿತಿಯಿಲ್ಲವೆಂಬುದು ತಿಳಿದು ಬಂದಿದೆ.
ನಕಲಿ ಅಧಿಕಾರಿ ಆಗಿದ್ದೇಗೆ? : ಹಿಪ್ಪರಗಿ ಗ್ರಾಮದಲ್ಲೊಂದು ಕಂಪ್ಯೂಟರ್ ಕೇಂದ್ರ ನಿರ್ವಹಿಸುತ್ತಿದ್ದ ಆರೋಪಿ ಸಂಗಮೇಶ ಲಕ್ಕಪ್ಪಗೋಳನಿಗೆ ಮನೆಯಲ್ಲಿ ಯಾವುದಾದರೂ ನೌಕರಿ ಸೇರೆಂದು ಒತ್ತಾಯವಿತ್ತು. ಇದರಂತೆ ಕಳೆದ ಜನವರಿಯಲ್ಲಿ ಇಂಟಲಿಜೆನ್ಸಿ ಬ್ಯೂರೋ ಇಲಾಖೆಯ ಪರೀಕ್ಷೆಯೂ ಕೂಡ ನಡೆದಿತ್ತು. ಇದ್ಯಾವುದಕ್ಕೂ ಹಾಜರಾತಿ ಅಥವಾ ಪ್ರವೇಶಾತಿ ಪಡೆಯದೆ ಮನೆಯವರಿಗೆ ಸುಳ್ಳು ಹೇಳಿ ನನಗೆ ನೌಕರಿ ದೊರೆತಿದೆ ಎಂದು ನಕಲಿ ಐಡಿ ಕಾರ್ಡ್ ತೋರಿಸಿ ಅಧಿಕಾರಿ ಶಸ್ತ್ರವಿಲ್ಲದೆ ಗುಪ್ತಚರ ಬ್ಯೂರೋದಲ್ಲಿದ್ದೇನೆ. ಇದರ ಕಾರ್ಯ ಹೀಗೆ ಎಂದು ನಂಬಿಸಿದ್ದಾನೆ. ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ಒದಗಿದ ಕಾರಣ ಬನಹಟ್ಟಿ ಠಾಣೆಗೆ ಮಾಹಿತಿ ಒದಗಿಸಿದ್ದರು.
ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಶಾಂತಾ ಹಳ್ಳಿ ತನಿಖೆ ಮುಂದುವರೆಸಿದ್ದಾರೆ.