Advertisement

ನಕಲಿ ಚಿನ್ನ ಅಡವಿಟ್ಟು ವಂಚನೆ: ಮನೆ ಹರಾಜಿಗೆ

11:28 AM Jul 13, 2018 | Team Udayavani |

ಶಿರ್ವ: ಪಡುಬೆಳ್ಳೆ-ಪಾಂಬೂರು ಬಳಿ ಕಳೆದ ವರ್ಷ ಒಂದೇ ಕುಟುಂಬದ ನಾಲ್ವರು ಸೈನೈಡ್‌ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಪಡುಬೆಳ್ಳೆಯ ಶ್ರೀಯಾ ಜುವೆಲರಿಯ ಮಾಲಕ ಶಂಕರ ಆಚಾರ್ಯ (51), ಅವರ ಪತ್ನಿ ನಿರ್ಮಲಾ ಆಚಾರ್ಯ (45) ಪುತ್ರಿಯರಾದ ಶ್ರುತಿ (25) ಮತ್ತು ಶ್ರೀಯಾ (22) ಮೃತಪಟ್ಟಿದ್ದರು.

Advertisement

ಪತ್ನಿ, ಮಕ್ಕಳಿಗೆ ವಿಷವಿಕ್ಕಿ ಆತ್ಮಹತ್ಯೆ
ಸಾಲಬಾಧೆಯಿಂದ ತತ್ತರಿಸಿದ್ದ ಶಂಕರ ಆಚಾರ್ಯ ಆತ್ಮಹತ್ಯೆ ನಿರ್ಧಾರ ಮಾಡಿ ಪತ್ನಿ – ಮಕ್ಕಳ ಊಟಕ್ಕೆ ಸೈನೈಡ್‌ ಬೆರೆಸಿ ಅವರು ಮೃತಪಟ್ಟ ಬಳಿಕ ತಾನೂ ಸೈನೈಡ್‌ ಸೇವಿಸಿ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿತ್ತು. ಒಂದು ವಾರದಿಂದ ದಿನಾ ಬೆಳಗ್ಗೆ ಮನೆಯವರಿಗೆ ತೀರ್ಥಪ್ರಸಾದ ನೀಡಿ ಸಾಮೂಹಿಕ ಆತ್ಮಹತ್ಯೆಗೈಯುವ ದಿನ ಸೈನೈಡ್‌ ಬೆರೆಸಿದ ತೀರ್ಥ ನೀಡಿದ್ದರು ಎಂದು ತಿಳಿದು ಬಂದಿದೆ. ಪೊಲೀಸ್‌ ತನಿಖೆ ನಡೆದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಸೈನೈಡ್‌ ಸೇವಿಸಿ ಆತ್ಮಹತ್ಯೆಗೈದಿರುವುದು ದೃಢಪಟ್ಟಿತ್ತು.

ಬ್ಯಾಂಕಿಗೆ ವಂಚನೆ
ಮೃತ ಶಂಕರ ಆಚಾರ್ಯ ಇನ್ನಂಜೆ ಸಿ.ಎ. ಬ್ಯಾಂಕಿನ ಕುಂಜಾರುಗಿರಿ ಶಾಖೆಯಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದು ಸುಮಾರು 65 ಲ.ರೂ. ವಂಚಿಸಿದ್ದರು. ಬ್ಯಾಂಕಿನಲ್ಲಿ 93 ಬೇರೆ ಬೇರೆ ಖಾತೆಗಳಲ್ಲಿ ಸುಮಾರು 3 ಕೆ.ಜಿ.ಯಷ್ಟು ಚಿನ್ನವನ್ನು ಅಡವಿರಿಸಿದ್ದು, ಅದರಲ್ಲಿ ಸುಮಾರು 100 ಗ್ರಾಂ.ನಷ್ಟು ಮಾತ್ರ ಅಸಲಿ ಚಿನ್ನವಾಗಿತ್ತು. ಶಾಖಾ ವ್ಯವಸ್ಥಾಪಕರು ನೀಡಿದ ಮಾಹಿತಿಯ ಮೇರೆಗೆ ಅವರ ಸಾಲ ಖಾತೆಯ ಬಗ್ಗೆ ತನಿಖೆ ನಡೆಸಿ ಬೇರೆ ಸರಾಫರನ್ನು ಕರೆಸಿ ಪರಿಶೀಲಿಸಿದಾಗ ನಕಲಿ ಚಿನ್ನ ಅಡವಿರಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಸುಮಾರು 65 ಲಕ್ಷ ರೂ. ಮೌಲ್ಯದ ಚಿನ್ನದಲ್ಲಿ ಸುಮಾರು 2.5 ಲಕ್ಷ ರೂ. ಮೌಲ್ಯದ ಚಿನ್ನ ಮಾತ್ರ ಅಸಲಿ ಎಂದು ತಿಳಿದು ಬಂದಿತ್ತು. ಪ್ರಕರಣದ ಬಗ್ಗೆ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಮನೋಹರ ರಾವ್‌ ಅವರು ಮೃತ ಶಂಕರ ಆಚಾರ್ಯ, ಬ್ಯಾಂಕಿನ ಸರಾಫ ಉಮೇಶ್‌ ಆಚಾರ್ಯ ಮತ್ತು ಶಾಖಾ ವ್ಯವಸ್ಥಾಪಕ ಉಮೇಶ್‌ ಅಮೀನ್‌ ಮೇಲೆ ಶಿರ್ವ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಆರೋಪಿಗಳು ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.

ಶಾಖಾ ವ್ಯವಸ್ಥಾಪಕ ಉಮೇಶ್‌ ಅಮೀನ್‌ ಅಮಾನತುಗೊಂಡಿದ್ದಾರೆ. ತನಿಖೆ ನಡೆದು ಅಡವಿರಿಸಿದ್ದ ಚಿನ್ನದ ಪೈಕಿ ಅಸಲಿ ಚಿನ್ನ ಹರಾಜಾಗಿ ಸುಮಾರು 2 ಲಕ್ಷ ರೂ. ಗಳಷ್ಟು ಸಾಲ ವಸೂಲಾಗಿದೆ. ನಕಲಿ ಚಿನ್ನವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಬ್ಯಾಂಕಿನ ಕಾರ್ಯ ನಿರ್ವಹ ಣಾಧಿಕಾರಿ ತಿಳಿಸಿದ್ದಾರೆ.

ಮನೆ ಹರಾಜಿಗೆ
ಮೃತ ಶಂಕರ ಆಚಾರ್ಯ ಬ್ಯಾಂಕಿಗೆ ವಂಚಿಸಿದ ಪ್ರಕರಣ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಹಕಾರಿ ಸಂಘಗಳ ಸಾಲ ವಸೂಲಾತಿ ಕೋರ್ಟಿನಲ್ಲಿ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆದು ಕೋರ್ಟ್‌ ಆದೇಶದ ಮೇರೆಗೆ ಶಂಕರ ಆಚಾರ್ಯ ವಾಸವಿದ್ದ ಮನೆ ಸಾಲ ವಸೂಲಾತಿಗಾಗಿ ಹರಾಜಿಗೆ ಬಂದಿದೆ. ಸಾಲದ ಮೊತ್ತ 68,84,855 ರೂ. ಬಡ್ಡಿ, ಮತ್ತಿತರ ಖರ್ಚುಗಳಿಗಾಗಿ ಜು. 24ರಂದು ಶಂಕರಾಚಾರ್ಯ ಅವರ ಹೆಸರಿನಲ್ಲಿದ್ದ ಮನೆ ಮತ್ತು 17 ಸೆಂಟ್ಸ್‌ ಜಾಗದ ಹರಾಜು ನಡೆಯಲಿದೆ. ಶಂಕರ ಆಚಾರ್ಯರ ತಾಯಿ ಅನಾರೋಗ್ಯದಿಂದಿದ್ದು, ಓರ್ವ ಸಹೋದರ ಕ್ಯಾನ್ಸರ್‌ ಪೀಡಿತರಾಗಿದ್ದಾರೆ, ಸಾಲ ಭರಿಸಿ ಮನೆ ಉಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next