Advertisement

ವ್ಯಾಪಿಸುತ್ತಿದೆ ವಂಚಕರ ಜಾಲ! ನಕಲಿ ಫೇಸ್‌ಬುಕ್‌, ಟ್ವಿಟರ್‌ ಖಾತೆ ಬಗ್ಗೆ ಇರಲಿ ಎಚ್ಚರ

12:53 AM Feb 16, 2021 | Team Udayavani |

ಬೆಂಗಳೂರು : ತಂತ್ರಜ್ಞಾನ ಮತ್ತು ತಾಂತ್ರಿಕತೆ ಬೆಳೆದಂತೆ ಅವುಗಳ ಹೆಸರಿನಲ್ಲಿ ನಡೆಯುವ ವಂಚನೆಗಳೂ ಹೆಚ್ಚುತ್ತಿವೆ. ಸಾಮಾಜಿಕ ಜಾಲತಾಣಗಳ ದೈತ್ಯ ಎಂದೇ ಕರೆಸಿಕೊಳ್ಳುವ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲೂ ನಕಲಿ ಖಾತೆಗಳ ಹಾವಳಿ ಅಧಿಕವಾಗುತ್ತಿದೆ.

Advertisement

ಪೊಲೀಸರು ಸೈಬರ್‌ ಅಪರಾಧದ ಬಗ್ಗೆ ಜಾಗೃತಿ ಮೂಡಿಸಿದ್ದರೂ ಯಾವುದೇ ಫ‌ಲ ನೀಡುತ್ತಿಲ್ಲ.
ಇತ್ತೀಚೆಗೆ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌, ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.  ಸಂತೋಷ್‌, ಅಂಕಣಕಾರ ಮತ್ತು ರಮಣಶ್ರೀ ಗ್ರೂಪ್‌ನ ಷಡಕ್ಷರಿ ಮತ್ತಿತರ ಗಣ್ಯರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆಗಳನ್ನು  ತೆರೆದು ಸಾರ್ವಜನಿಕರಿಗೆ ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಕಳೆದ ಎರಡೂವರೆ ವರ್ಷಗಳಿಂದ ಇಂಥ ಅನೇಕ ಪ್ರಕರಣಗಳು ವರದಿಯಾಗಿದ್ದು, ಇತ್ತೀಚೆಗೆ ಮತ್ತೆ ವೇಗ ಪಡೆದುಕೊಂಡಿದೆ. ಇಂತಹ ಪ್ರಕರಣಗಳಲ್ಲಿ ಇತ್ತೀಚೆಗೆ ರಾಜಸ್ಥಾನ ಮೂಲದ ನಾಲ್ವರು ಸಿಐಡಿ ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಯಾರ ಹೆಸರಿನಲ್ಲಿ ವಂಚನೆ?
ಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಸಂಸದೆ ಸುಮಲತಾ ಅಂಬರೀಶ್‌, ಲೈಂಗಿಕ ತಜ್ಞೆ ಡಾ| ಪದ್ಮಿನಿ ಪ್ರಸಾದ್‌, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್‌, ನಟ ವಿನೋದ್‌ ರಾಜ್‌, ಸಹಾಯಕ ಆಯುಕ್ತ ಸಂತೋಷ್‌ ಕಾಮಗೌಡ ಮತ್ತು ಐಪಿಎಸ್‌ ಅಧಿಕಾರಿಗಳಾದ ಪಿ. ಹರಿಶೇಖರನ್‌, ರಮೇಶ್‌ ಬಾನೊತ್‌, ಜಿನೇಂದ್ರ ಖಣಗಾವಿ, ಡಾ| ಚಂದ್ರಗುಪ್ತಾ, ಡಾ| ಎಸ್‌.ಡಿ. ಶರಣಪ್ಪ, ರವಿ ಡಿ. ಚೆನ್ನಣ್ಣನವರ್‌, ಉತ್ತರ ಕರ್ನಾಟಕ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳ ಡಿವೈಎಸ್ಪಿಗಳು, ಇನ್‌ಸ್ಪೆಕ್ಟರ್ಗಳು, ಎಸ್‌ಐಗಳು, ಬೆಂಗಳೂರು ನಗರ ಪೊಲೀಸರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆಯಲಾಗಿತ್ತು. ಟ್ವಿಟರ್‌ನಲ್ಲಿ ಮೈಸೂರು ರಾಜಮನೆತನದ ಯದುವೀರ್‌ ಒಡೆಯರ್‌, ಮಾಜಿ ಸಿಎಂ ಸಿದ್ದರಾಮಯ್ಯ, ನಟ ಅಭಿಷೇಕ್‌ ಅಂಬರೀಶ್‌, ಐಪಿಎಸ್‌ ಅಧಿಕಾರಿ ರೂಪಾ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದರು.

ವಾಟ್ಸ್‌ಆ್ಯಪ್‌ನಲ್ಲೂ ವಂಚನೆ
ಈಗ ವಾಟ್ಸ್‌ಆ್ಯಪ್‌ ಕೂಡ ಈಗ ವಂಚಕರಿಗೆ “ಅಸ್ತ್ರ’ವಾಗಿ ಮಾರ್ಪಟ್ಟಿದೆ. ಇಲ್ಲೂ “ಒಟಿಪಿ ಸ್ಕ್ಯಾಮ್‌’, “ನಕಲಿ ಗಿಫ್ಟ್ ಕಾರ್ಡ್‌’ ಸಹಿತ ಹಲವು ರೀತಿ ವಂಚನೆ ನಡೆಯುತ್ತಿವೆ. ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಬಳಸಿಕೊಂಡು ವಂಚಕರು ತಮ್ಮ ಮೊಬೈಲಲ್ಲಿ ವಾಟ್ಸ್‌ ಆ್ಯಪ್‌ ಖಾತೆ ತೆರೆದು, “ಅಕಸ್ಮಾತಾಗಿ ನಿಮ್ಮ ನಂಬರ್‌ಗೆ ಒಟಿಪಿ ರವಾನೆ ಯಾಗಿದೆ. ದಯವಿಟ್ಟು ನನಗೆ ಕಳುಹಿಸಿಕೊಡಿ’ ಎಂದು ನಿಮಗೇ ಸಂದೇಶ ಕಳುಹಿಸುತ್ತಾರೆ. ಅದನ್ನು ನಂಬಿ ಒಟಿಪಿ ರವಾನಿಸಿದರೆ, ನಿಮ್ಮ ಇಡೀ “ವಾಟ್ಸ್‌ಆ್ಯಪ್‌ ಲೋಕ’ ಅವರ ಪಾಲಾಗುತ್ತದೆ. ಅದನ್ನು ಬಳಸಿಕೊಂಡು ನಿಮ್ಮ ಸ್ನೇಹಿತರಿಂದ ಹಣ ದೋಚುತ್ತಾರೆ. ವ್ಯಾಲಂಟೈನ್‌ ಡೇ ಗಿಫ್ಟ್ ಕಾರ್ಡ್‌, ಪ್ರತಿಷ್ಠಿತ ಹೊಟೇಲ್‌ನ ಗಿಫ್ಟ್ ಕಾರ್ಡ್‌ ಹೆಸರಲ್ಲೂ ವಂಚಿಸುತ್ತಾರೆ.

Advertisement

ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಖಾತೆ ಹೊಂದಿರುವವರು ಖಾತೆಯನ್ನು ಖಾಸಗಿ (ಪ್ರೈವೇಟ್‌) ಮಾಡಿಕೊಳ್ಳಬೇಕು. ಆಗಾಗ ತಮ್ಮ ಖಾತೆಗಳನ್ನು ಪರಿಶೀಲಿಸಿಕೊಳ್ಳಬೇಕು. ಜತೆಗೆ ತಮ್ಮ ಸ್ನೇಹಿತರಿಗೆ ಈ ಬಗ್ಗೆ ಎಚ್ಚರಿಕೆ ನೀಡಬೇಕು.
– ಎಂ.ಡಿ. ಶರತ್‌, ಎಸ್ಪಿ ಸಿಐಡಿ ಸೈಬರ್‌ ವಿಭಾಗ

ಉದಯವಾಣಿ ಎಚ್ಚರಿಸಿತ್ತು
ಫೇಸ್‌ಬುಕ್‌ನಲ್ಲಿ ಖಾತೆ ಹ್ಯಾಕ್‌ ಮಾಡಿ ಸ್ನೇಹಿತರ ಹಣ ಲೂಟಿ ಮಾಡುವ ವಂಚನೆಯ ಜಾಲ ಸಕ್ರಿಯವಾಗುತ್ತಿರುವುದರ ಬಗ್ಗೆ ಜ. 27ರಂದು ಉದಯವಾಣಿ ಮುಖಪುಟದಲ್ಲಿ ಪ್ರಕಟಿಸುವ ಮೂಲಕ ಎಚ್ಚರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next