ನವದೆಹಲಿ: ಸುಮಾರು 24 ವರ್ಷಗಳ ಹಿಂದಿನ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಮೇಜರ್ ಜನರಲ್ ಹಾಗೂ ಆರು ಮಂದಿ ಸೈನಿಕರು ದೋಷಿ ಎಂದು ಮಿಲಿಟರಿ ಕೋರ್ಟ್ ಆದೇಶಿಸಿ, ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಭಾರತೀಯ ಸೇನೆಯ ದಿಬ್ರೂಗಢ್ ಘಟಕದ ಮೂಲಗಳ ಪ್ರಕಾರ, ಮೇಜರ್ ಜನರಲ್ ಎ.ಕೆ.ಲಾಲ್, ಕರ್ನಲ್ ಥಾಮಸ್ ಮ್ಯಾಥ್ಯೂ, ಕರ್ನಲ್ ಆರ್ ಎಸ್ ಸಿಬಿರೇನ್, ಕ್ಯಾಪ್ಟನ್ ದಿಲೀಪ್ ಸಿಂಗ್, ಕ್ಯಾಪ್ಟನ್ ಜಗ್ ದೇವೋ ಸಿಂಗ್, ನಾಯಕ್ ಅಲ್ಬಿಂದರ್ ಸಿಂಗ್ ಮತ್ತು ನಾಯಕ್ ಶಿವೇಂದರ್ ಸಿಂಗ್ ಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಾಗಿ ತಿಳಿಸಿದೆ.
1994ರಲ್ಲಿ ಅಸ್ಸಾಂನ ಟಿನ್ ಸುಕಿಯಾ ಜಿಲ್ಲೆಯಲ್ಲಿ ನಡೆದ ನಕಲಿ ಎನ್ ಕೌಂಟರ್ ಪ್ರಕರಣದ ಕೋರ್ಟ್ ಮಾರ್ಷಲ್ ನಲ್ಲಿ ಮೇಜರ್ ಜನರಲ್ ಹಾಗೂ ಆರು ಮಂದಿ ಯೋಧರ ವಿರುದ್ಧದ ಆರೋಪ ಸಾಬೀತಾಗಿರುವುದಾಗಿ ಐಎಎನ್ ಎಸ್ ವರದಿ ಮಾಡಿದೆ.
ಅಸ್ಸಾಂ ಮಾಜಿ ಸಚಿವ, ಬಿಜೆಪಿ ಮುಖಂಡ ಜಗದೀಶ್ ಭುಯಾನ್ ಹೇಳಿಕೆ ಪ್ರಕಾರ, 1994ರ ಫೆಬ್ರುವರಿ 18ರಂದು ಚಹಾ(ಟೀ) ತೋಟದ ಪ್ರಮುಖ ಎಕ್ಸಿಕ್ಯೂಟಿವ್ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಶಂಕೆಯ ಮೇಲೆ ಟಿನ್ ಸುಕಿಯಾ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 9 ಮಂದಿಯನ್ನು ಯೋಧರು ಕರೆದೊಯ್ದಿದ್ದರು. ಬಳಿಕ ಅವರಲ್ಲಿ ಐವರನ್ನು ನಕಲಿ ಎನ್ ಕೌಂಟರ್ ನಲ್ಲಿ ಹತ್ಯೆಗೈದು, ಅವರೆಲ್ಲಾ ಉಲ್ಫಾ ಉಗ್ರಗಾಮಿ ಸಂಘಟನೆಗೆ ಸೇರಿದ್ದರವರು ಎಂದು ಕಥೆ ಕಟ್ಟಲಾಗಿತ್ತು. ಉಳಿದ ನಾಲ್ವರನ್ನು ಬಿಡುಗಡೆಗೊಳಿಸಿರುವುದಾಗಿ ಭುಯಾನ್ ವಿವರಿಸಿದ್ದಾರೆ.
1994ರ ಫೆಬ್ರುವರಿ 22ರಂದು ಜಗದೀಶ್ ಭುನಿಯಾ ಅವರು ಐವರು ಯುವಕರು ಕಾಣೆಯಾಗಿದ್ದು, ಅವರ ಭವಿಷ್ಯ ಏನಾಗಿದೆ ಎಂದು ಗುವಾಹಟಿ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಭಾರತೀಯ ಸೇನೆ 9 ಮಂದಿ ಆಲ್ ಅಸ್ಸಾಂ ಸ್ಟೂಡೆಂಟ್ ಯೂನಿಯನ್ ಮುಖಂಡರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಾಜರುಪಡಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಆರ್ಮಿ ಐವರ ಮೃತದೇಹವನ್ನು ಧೋಲ್ಲಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿತ್ತು. ತದನಂತರ 2018ರ ಜುಲೈ 16ರಿಂದ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಆರಂಭಗೊಂಡು, ಜುಲೈ 27ಕ್ಕೆ ಮುಕ್ತಾಯಗೊಂಡಿತ್ತು. ಶಿಕ್ಷೆಯ ಪ್ರಮಾಣ ಅಕ್ಟೋಬರ್ 13ರಂದು ಘೋಷಿಸಿರುವುದಾಗಿ ಇಂಡಿಯನ್ ಆರ್ಮಿ ಮೂಲಗಳು ತಿಳಿಸಿದೆ.