ಬೆಂಗಳೂರು: ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದುಕೊಂಡು ಬಳಿಕ ನಕಲಿ ಇ-ಪೇಮೆಂಟ್ ಮಾಡಿ ವಂಚಿಸುತ್ತಿದ್ದ ಆಂಧ್ರಪ್ರದೇಶ ಮೂಲದ ಆರೋಪಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಬೋರಾಡ ಸುಧೀರ್(24) ಬಂಧಿತ.
ನಗರದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಪಂಚಾತಾರ ಹೋಟೆಲ್‌ನಲ್ಲಿ ತಂಗಿದ್ದ ಆರೋಪಿ, ನಕಲಿ ಇ-ಪೇಮೆಂಟ್ ಮಾಡಿ ವಂಚಿಸಿದ್ದ. ಈ ಸಂಬಂಧ ಹೋಟೆಲ್ ಸಿಬ್ಬಂದಿ ಶಮೀರ್ ದೇಸಾಯಿ ಎಂಬಾತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮಾ.31ರಂದು ಆನ್‌ಲೈನ್ ಮೂಲಕ ನಗರದ ಪಂಚತಾರ ಹೋಟೆಲ್‌ನ ಕೊಠಡಿ ಬುಕ್ ಮಾಡಿದ್ದ ಆರೋಪಿ, ಏರ್‌ಪೋರ್ಟ್‌ಗೆ ಬಿಎಂಡಬ್ಲ್ಯೂ ಕಾರು ಕಳುಹಿಸುವಂತೆ ಕೋರಿದ್ದ. ಬಳಿಕ ಹೋಟೆಲ್‌ಗೆ ಬಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ 17,346 ರೂ. ಪಾವತಿಸಿದ್ದೇನೆ ಎಂದಿದ್ದಾನೆ. ಆಗ ಹೋಟೆಲ್ ಸಿಬ್ಬಂದಿ ಹಣ ಪಾವತಿಯಾಗಿಲ್ಲ ಎಂದಾಗ, ತಾಂತ್ರಿಕ ಸಮಸ್ಯೆಯಿಂದ ಬಂದಿಲ್ಲ. ಕೆಲ ಹೊತ್ತಿನ ಬಳಿಕ ಬರುತ್ತದೆ ಎಂದು ಕೊಠಡಿಗೆ ಹೋಗಿದ್ದ. ಕೆಲ ಹೊತ್ತಿನ ಬಳಿಕ ಹೋಟೆಲ್ ಸಿಬ್ಬಂದಿಗೆ ಕರೆ ಮಾಡಿ, ಸ್ಥಳೀಯವಾಗಿ ಓಡಾಡಲು ಬಿಎಂಡಬ್ಲೂé ಕಾರು ಬೇಕೆಂದು ಕಾಯ್ದಿರಿಸಿಕೊಂಡಿದ್ದಾನೆ. ನಂತರ ಆ ಕಾರಿನಲ್ಲಿ ಮತ್ತೂಂದು ಐಷಾರಾಮಿ ಹೋಟೆಲ್‌ಗೆ ಹೋಗಿದ್ದಾನೆ. ಬಳಿಕ ವಾಪಸ್ ಹೋಗುವಾಗ ಕಾರಿನ ಚಾಲಕನಿಗೆ ನೇರವಾಗಿ ಏರ್‌ಪೋರ್ಟ್‌ಗೆ ಹೋಗು ವಂತೆ ಸೂಚಿಸಿದ್ದ. ಆದರೆ, ಚಾಲಕ, ಹೋಟೆಲ್ ಅಧಿಕಾರಿಗಳ ಅನುಮತಿ ಇಲ್ಲದೇ ಹೋಗುವುದಿಲ್ಲ ಎಂದು ವಾಪಸ್ ಹೋಟೆಲ್‌ಗೆ ಕರೆ ತಂದಿದ್ದಾನೆ. ಬಳಿಕ ಹೋಟೆಲ್ ಸಿಬ್ಬಂದಿ ಒಟ್ಟು 80 ಸಾವಿರ ರೂ. ಪಾವತಿಸುವಂತೆ ಹೇಳಿದ್ದಾರೆ.
ಆಗ ಆರೋಪಿ ತನ್ನ ಕ್ರೆಡಿಟ್ ಕಾರ್ಡ್ ಕೊಟ್ಟಿದ್ದಾನೆ. ಆಗಲೂ ಪೇಮೆಂಟ್ ಆಗಿಲ್ಲ. ಇದೇ ವೇಳೆ ಆರೋಪಿಯ ಮೊಬೈಲ್‌ಗೆ ಮೇ-ಫೇರ್ ರೆಸಾರ್ಟ್ ನಿಂದ ನಿರಂತರ ಕರೆಗಳು ಬರುತ್ತಿತ್ತು. ಅದರಿಂದ ಅನುಮಾನಗೊಂಡು ಆನ್‌ಲೈನ್‌ನಲ್ಲಿ ಈತನ ಬಗ್ಗೆ ಶೋಧಿಸಿದಾಗ ಆರೋಪಿ ವಂಚನೆಗಳು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಆರ್ಮಿ ಆಫೀಸರ್ ಎಂದು ವಂಚನೆ: ಆರೋಪಿ ಈ ಹಿಂದೆ ಕೊಲ್ಕೊತ್ತಾದಲ್ಲಿ ಆರ್ಮಿ ಆಫೀಸರ್ ಇನ್‌ಚಾರ್ಜ್ ಎಂದು ಹೇಳಿಕೊಂಡು ಫೋರ್ಟ್ ವಿಲಿಯಂ ಪ್ರವೇಶಿಸಿದ್ದು, ಆತನ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಅಲ್ಲದೆ, ಮೇ-ಫೇರ್ ರೆಸಾರ್ಟ್ ಮತ್ತು ಸಿಕ್ಕಿಂನಲ್ಲಿ ಬಿಸ್ವಜಿತ್ ಬಿಸ್ವಾಸ್ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಐಡಿ ಹಾಗೂ ಇತರೆ ದಾಖಲೆಗಳನ್ನು ಬಳಸಿ, ನಕಲಿ ಇ-ಪೇಮೆಂಟ್ ರಸೀದಿ ತೋರಿಸಿ ಹೋಟೆಲ್‌ಗಳಿಗೆ ವಂಚಿಸುತ್ತಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.