Advertisement

ನಕಲಿ ವೈದ್ಯರದ್ದೇ ಹಾವಳಿ!

10:04 AM Jun 29, 2019 | Team Udayavani |

ಹಾವೇರಿ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಸಾಧಾರಣ ಜ್ವರ, ಡೆಂಘೀ, ಚಿಕೂನ್‌ ಗುನ್ಯಾದಂಥ ಗುಣಪಡಿಸುವ ಸಾಮಾನ್ಯ ಕಾಯಿಲೆಗಳಿಗೂ ಬಡ ಜನರು ಸರಿಯಾದ ಔಷಧೋಪಚಾರ ಸಿಗದೆ ಪ್ರತಿವರ್ಷ ಹತ್ತಾರು ಜನರು ಸಾಯುತ್ತಿದ್ದಾರೆ!

Advertisement

ಹೌದು, ಇಂಥ ಆತಂಕಕಾರಿ ಸಂಗತಿಯನ್ನು ಆರೋಗ್ಯ ಕ್ಷೇತ್ರದಲ್ಲಿದೆ. ಒಂದು ಮೂಲದ ಪ್ರಕಾರ ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು ಶೇ. 50ರಷ್ಟು ಜನರು ನಕಲಿ ವೈದ್ಯರ ಅಸಮರ್ಪಕ ವೈದ್ಯಕೀಯ ಸೇವೆಯಿಂದಾಗಿಯೇ ಸಾವಿಗೀಡಾಗುತ್ತಿದ್ದಾರೆ ಎಂಬ ಸಂಗತಿಯೂ ಬಹಿರಂಗಗೊಂಡಿದೆ.

ಜಿಲ್ಲಾಡಳಿತ ಹಾಗೂ ಸ್ಥಳೀಯ ಆರೋಗ್ಯ ಇಲಾಖೆ ನಕಲಿ ವೈದ್ಯರ ನಿಯಂತ್ರಣಕ್ಕಾಗಿ ಕಾಲ ಕಾಲಕ್ಕೆ ಕಾರ್ಯಾಚರಣೆ ನಡೆಸಿದರೆ ಇಂಥ ನಕಲಿ ವೈದ್ಯರ ಆಟಾಟೋಪಕ್ಕೆ ಕಡಿವಾಣ ಹಾಕಬಹುದು. ಆದರೆ, ಅಧಿಕಾರಿಗಳು ಒಮ್ಮೆ ಕಾರ್ಯಾಚರಣೆ ನಡೆಸಿ ಬಳಿಕ ಸುದೀರ್ಘ‌ ವರ್ಷ ಕೈಕಟ್ಟಿ ಕುಳಿತುಕೊಳ್ಳುವುದರಿಂದ ನಕಲಿ ವೈದ್ಯರು ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದಾರೆ.

ಜಿಲ್ಲಾಡಳಿತ ಹಾಗೂ ಸ್ಥಳೀಯ ಆರೋಗ್ಯ ಇಲಾಖೆ 2011 ಸೆಪ್ಟೆಂಬರ್‌ ತಿಂಗಳಲ್ಲಿ ಜಿಲ್ಲೆಯಾದ್ಯಂತ ಬೃಹತ್‌ ದಾಳಿ ನಡೆಸಿ, ಜಿಲ್ಲೆಯ ನಕಲಿ ವೈದ್ಯರ ಪಾಲಿಗೆ ಸಿಂಹಸ್ವಪ್ನ ಎನಿಸಿತ್ತು. ಈ ಸಂದರ್ಭದಲ್ಲಿ ಬರೋಬರಿ 125 ನಕಲಿ ವೈದ್ಯರನ್ನು ಗುರುತಿಸಿತ್ತು. ಈ ಕಾರ್ಯಾಚರಣೆ ಬಳಿಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾಳಿಯೇ ನಡೆದಿಲ್ಲ. ಹೀಗಾಗಿ ನಕಲಿ ವೈದ್ಯರು ಬಡರೋಗಿಗಳ ಜೊತೆ ತಮ್ಮ ಕರಾಮತ್ತು ಮುಂದುವರಿಸಿದ್ದಾರೆ.

ಅರ್ಹತೆ ಇಲ್ಲದವರು: ಹೋಮಿಯೋಪಥಿ, ಆಯುರ್ವೇದ, ಅಲೋಪಥಿ, ಯುನಾನಿ ಹೀಗೆ ವಿವಿಧ ವಿಭಾಗಗಳಲ್ಲಿ ಅರ್ಹತೆ, ಪದವಿ, ನೋಂದಣಿ ಹಾಗೂ ಅನುಮತಿ ಇಲ್ಲದೆ ಕೇವಲ ಅನುಭವದ ಆಧಾರದಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದ 125 ಜನರನ್ನು ಕೆಪಿಎಂಇ ಕಾಯ್ದೆಯಡಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ನಕಲಿ ಎಂದು 2011ರಲ್ಲಿ ಕಾರ್ಯಾಚರಣೆ ವೇಳೆ ಗುರುತಿಸಲಾಗಿತ್ತು. ಈಗ ಅವರ ಸಂಖ್ಯೆ 150 ದಾಟಿದೆ.

Advertisement

ಇಲಾಖೆ ಗುರುತಿಸಿದ ಎಲ್ಲ 125 ನಕಲಿ ವೈದ್ಯರಿಗೂ ಈ ಹಿಂದೆ ನೋಟಿಸ್‌ ನೀಡಲಾಗಿತ್ತು. ಈ ನೋಟಿಸ್‌ ಮೀರಿ, ನಿರ್ಲಕ್ಷಿಸಿ ಮತ್ತೆ ಕ್ಲಿನಿಕ್‌ ಆರಂಭಿಸಿದರೆ ಅಂಥವರ ಮೇಲೆ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ಪ್ರಕಾರ ಪ್ರಕರಣ ದಾಖಲಿಸಿದರೆ ಅವರಿಗೆ ಮೂರು ವರ್ಷ ಜಾಮೀನುರಹಿತ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ.ವರೆಗೂ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಕೆಯೂ ಈ ಸಂದರ್ಭದಲ್ಲಿ ನೀಡಲಾಗಿತ್ತು. ಆದರೆ, ಈ ಎಚ್ಚರಿಕೆ ಆ ಹೊತ್ತಿಗಷ್ಟೇ ಸೀಮಿತವಾಗಿದ್ದರಿಂದ ನಕಲಿ ವೈದ್ಯರ ಹಾವಳಿ ಮತ್ತೆ ಗರಿಗೆದರಿದೆ.

ಎಚ್ಚರಿಕೆ ಗಂಟೆಗೆ ಕಿವಿಗೊಟ್ಟಿಲ್ಲ: ನಕಲಿ ವೈದ್ಯರು ಕೂಡಲೇ ಆಸ್ಪತ್ರೆ ಬಂದ್‌ ಮಾಡಿ, ತಮ್ಮ ವೈದ್ಯಕೀಯ ಸೇವೆ ನಿಲ್ಲಿಸುವುದಾಗಿ ಮುಚ್ಚಳಿಕೆ ಬರೆದುಕೊಡಬೇಕು. ಈ ಮುಚ್ಚಳಿಕೆ ಪತ್ರ ಮೀರಿ, ಇಲಾಖೆಯ ನೋಟಿಸ್‌ ಧಿಕ್ಕರಿಸಿ ಮತ್ತೆ ವೈದ್ಯಕೀಯ ಸೇವೆ ಮುಂದುವರೆಸಿದವರ ಆಸ್ಪತ್ರೆಗೆ ಬೀಗಮುದ್ರೆ ಹಾಕಲಾಗುವುದು ಜತೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸಹ ಇಲಾಖೆ ತಾಕೀತು ಮಾಡಿತ್ತು. ಆದರೆ, ಈ ಎಚ್ಚರಿಕೆ ಗಂಟೆ ನಕಲಿ ವೈದ್ಯರ ಪಾಲಿಗೆ ಒಂದು ದಿನದ ದುಸ್ವಪ್ನವಾಯಿತೇ ವಿನಃ ಶಾಶ್ವತವಾಗಿ ಸೇವೆ ನಿಲ್ಲಿಸುವ ಕ್ರಮ ಆಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ನಕಲಿ ವೈದ್ಯರು ಹುಟ್ಟಿಕೊಳ್ಳುತ್ತಲೇ ಇದ್ದಾರೆ.

ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮತ್ತೆ ಜಿಲ್ಲೆಯಲ್ಲಿ ಬೃಹತ್‌ ದಿಢೀರ್‌ ಕಾರ್ಯಾಚರಣೆ ನಡೆಸಿ ನಕಲಿ ವೈದ್ಯರ ಹಾವಳಿ ತಪ್ಪಿಸುವ ಮೂಲಕ ಬಡವರ ಪ್ರಾಣ ಉಳಿಸುವ ಕಾರ್ಯ ಆಗಬೇಕಿದೆ.

 

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next