Advertisement

ನಕಲಿ ವೈದ್ಯರ ಹಾವಳಿಗೆ ನಿರ್ಬಂಧ ಅತ್ಯಗತ್ಯ  

05:30 PM Jun 13, 2021 | Team Udayavani |

ಹೊನ್ನಾವರ: ಕೊರೊನಾ ಹೆಚ್ಚಲು ತಿಳಿದೋ, ತಿಳಿಯದೇಯೋ ಜನ ಮಾಡುವ ತಪ್ಪುಗಳು ಒಂದು ಕಾರಣವಾಗಿದ್ದರೆ, ಇನ್ನೊಂದು ಕಾರಣ ನಕಲಿ ವೈದ್ಯರು. ಕೊರೊನಾ ಮೂರನೇ ಅಲೆ ಬರುವ ಮೊದಲು ಇವರನ್ನೂ ನಿರ್ಬಂಧಿಸಬೇಕಾಗಿದೆ ಎಂದು ಹಿರಿಯ ವೈದ್ಯರು ಅಭಿಪ್ರಾಯಪಡುತ್ತಾರೆ. ಅಸಲಿಗಿಂತ ಹೆಚ್ಚು ನಕಲಿ ವೈದ್ಯರಿದ್ದಾರೆ. ಕೆಲವು ವೈದ್ಯರ ಪತ್ನಿಯರೂ ಮನೆಯಲ್ಲಿ ಔಷಧ ಕೊಡುತ್ತಾರೆ.

Advertisement

ತಾಲೂಕಾಸ್ಪತ್ರೆಗೆ ಅಥವಾ ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ಹೋಗಲು ಜನಕ್ಕೆ ಮನಸ್ಸಿದ್ದರೂ ಖಾಸಗಿಯವರ ಅಪಪ್ರಚಾರ ತಡೆಹಾಕುತ್ತದೆ. ಕೋವಿಡ್‌ ಕಾಲದಲ್ಲಿ ವಾಹನ ಸಂಚಾರ ಇಲ್ಲದ್ದರಿಂದ ಆಸ್ಪತ್ರೆಗೆ ಹೋಗುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಊರಿನಲ್ಲಿದ್ದ ವೈದ್ಯರನ್ನೇ ನೆಚ್ಚಿ ನೋವು, ಜ್ವರದ ಮಾತ್ರೆ ನುಂಗುತ್ತಾರೆ. ಕಡಿಮೆಯಾಗದಿದ್ದರೆ ಔಷಧ ಅಂಗಡಿಯಿಂದ ಗುಳಿಗೆ ತಂದು ನುಂಗುತ್ತಾರೆ. ಅಷ್ಟರಲ್ಲಿ ನಾಲ್ಕು ದಿನ ಕಳೆದಿರುತ್ತದೆ. ಸರ್ಕಾರಿ ಆಸ್ಪತ್ರೆಗೆ ಹೋದರೆ ಕೋವಿಡ್‌ ಎಂದು ದಾಖಲು ಮಾಡಿಕೊಳ್ಳುತ್ತಾರೆಂಬ ಅಪಪ್ರಚಾರವೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಆಕ್ಸಿಜನ್‌ ಕಡಿಮೆಯಾಗಿ ಕೊರೊನಾ ಪುಪ್ಪುಸವನ್ನು ಆಕ್ರಮಿಸಿದಾಗ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಾರೆ.

ಸ್ವಲ್ಪ ಅನುಕೂಲವಿದ್ದವನು ಖಾಸಗಿ ಆಸ್ಪತ್ರೆಗೆ ಹೋಗುತ್ತಾನೆ. ಅಲ್ಲಿ ಕನಿಷ್ಠ 25 ಸಾವಿರದಿಂದ ಲಕ್ಷ ರೂ.ವರೆಗೆ ಬಿಲ್‌ ಆಗುತ್ತದೆ. ಸರ್ಕಾರ ಇಷ್ಟೊಂದು ವ್ಯವಸ್ಥೆ ಮಾಡಿದ್ದರೂ ಕೂಡ ಸರ್ಕಾರಿ ಆಸ್ಪತ್ರೆ ಸಂಪೂರ್ಣ ಉಚಿತ ವಾಗಿದ್ದು, ಅಲ್ಲಿಗೆ ಹೋದರೆ ಮರಳಿ ತನ್ನಲ್ಲಿ ಬರುವುದಿಲ್ಲ ಎಂಬ ಭಯ ನಕಲಿ ವೈದ್ಯರನ್ನು ಕಾಡುತ್ತದೆ. ಗಂಭೀರ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ಆಕ್ಸಿಜನ್‌, ವೆಂಟಿಲೇಟರ್‌ ಯಾವುದಕ್ಕೂ ಸ್ಪಂದಿಸದ ದಿನಗಳಲ್ಲಿ ರೋಗಿ ಮೃತಪಡುತ್ತಾನೆ. ಆಗ ದೊಡ್ಡ ಆಸ್ಪತ್ರೆಗೆ ಹೋದರೆ ಸಾಯುತ್ತಾರೆ ಎಂಬ ಅಪಪ್ರಚಾರ ಬೇರೆ. ಆದ್ದರಿಂದ ನಕಲಿ ವೈದ್ಯರಿಗೆ ತಡೆ ಹಾಕಬೇಕಾದ ಅಗತ್ಯವಿದೆ.

ಗ್ರಾಮೀಣ ವೈದ್ಯರಿಗೆ ಕೋವಿಡ್‌ಗೆ ಚಿಕಿತ್ಸೆ ನೀಡುವ ಔಷಧಗಳು ಗೊತ್ತಿಲ್ಲ. ಇಂಜಕ್ಷನ್‌ಗಳು ಸಾರ್ವಜನಿಕವಾಗಿ ಲಭ್ಯವಾಗುವುದಿಲ್ಲ. ಆದ್ದರಿಂದ ನಕಲಿ ವೈದ್ಯರಿಗೆ ತಡೆಹಾಕಬೇಕು ಅನ್ನುತ್ತಾರೆ ಸರ್ಕಾರಿ ಆಸ್ಪತ್ರೆ ಹಿರಿಯ ವೈದ್ಯ ಡಾ| ಪ್ರಕಾಶ ನಾಯ್ಕ. ತಾಲೂಕಾಸ್ಪತ್ರೆ ಹಿರಿಯ ವೈದ್ಯ, ಲೇಖಕ ಡಾ| ಕೃಷ್ಣಾಜಿ, ಅನಾರೋಗ್ಯ ಪರಿಸ್ಥಿತಿಯಲ್ಲಿ ಕೈಗೆ ನಿಲುಕಿದವರನ್ನು ಸಂಪರ್ಕಿಸುವುದು ಮನುಷ್ಯನ ಸ್ವಭಾವ. ಇಂಥ ಪರಿಸ್ಥಿತಿಯಲ್ಲಿ ಉದ್ರಿ ಕೊಡುವ ನಕಲಿ ಡಾಕ್ಟರ್‌ ಗತಿಯಾಗುತ್ತಾರೆ.

ಆಯುರ್ವೇದಿಕ್‌ ವೈದ್ಯರು ಎಂದುಕೊಳ್ಳುವವರು ಆಲೋಪತಿ ಔಷಧ ಕೊಟ್ಟರೆ ಅದೂ ನಕಲಿ ವೈದ್ಯಕೀಯವೇ ಆಗುತ್ತದೆ. ತಮ್ಮ ಅಳತೆಗೆ ಸಿಕ್ಕದ, ತಮ್ಮಿಂದ ಗುಣಪಡಿಸಲು ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿಯಲ್ಲಿ ಸರಿಯಾಗಿ ಮಾರ್ಗದರ್ಶನ ಮಾಡಬೇಕಾದವರಿಗೆ ದುರಾಸೆ ಕಾಡಿದರೆ ಜನ ತೊಂದರೆಗೆ ಒಳಗಾಗುತ್ತಾರೆ. ನಕಲಿ ವೈದ್ಯರನ್ನು ಗುರುತಿಸಬೇಕಾದವರು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಇಂಥವರ ಕುರಿತು ವರದಿ ಮಾಡಬೇಕಾದವರು ತಾಲೂಕು ವೈದ್ಯಾಧಿಕಾರಿಗಳು. ಜಿಲ್ಲಾ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಬೇಕು ಅನ್ನುತ್ತಾರೆ ಟಿಎಚ್‌ಒ ಡಾ| ಉಷಾ ಹಾಸ್ಯಗಾರ.

Advertisement

ಅಲ್ಪಸ್ವಲ್ಪ ಓದುಬಲ್ಲ ನಕಲಿ ವೈದ್ಯರೆಂದು ಕರೆಸಿಕೊಳ್ಳುವ ಕೆಲವರು ಔಷಧ ಅಂಗಡಿಗೆ ಬಂದು ಬಿಫಾರ್ಮಾ ಓದಿದ ಅಂಗಡಿಯವನಲ್ಲಿ ಔಷಧ ಮಾಹಿತಿ ಪಡೆದು ಅದನ್ನೇ ಬ್ರಿàಫ್‌ಕೇಸ್‌ನಲ್ಲಿ ತುಂಬಿಕೊಂಡು ಹಳ್ಳಿಗೆ ಹೋಗಿ ಔಷಧ ಖಾಲಿಯಾಗುವವರೆಗೆ ಕೊಟ್ಟು ಕಿಸೆ ತುಂಬಿಸಿಕೊಂಡು ಬರುತ್ತಾರೆ. ಅನಕ್ಷರಸ್ಥ ಜಾನಪದ ವೈದ್ಯರು ಸಂಜೆ ಔಷಧ ಅಂಗಡಿಗೆ ಬಂದು ಕಿಲೋಗಟ್ಟಲೆ ಸ್ಟೈರೈಡ್‌ ಗುಳಿಗೆ ಮತ್ತು ಲೀಟರ್‌ ಗಟ್ಟಲೆ ಕಫ್‌ ಸಿರಪ್‌ ಪಡೆದು ಮನೆಗೆ ಹೋಗಿ ಒಂದಿಷ್ಟು ಕಟ್ಟಿಗೆ ಪುಡಿಯೊಂದಿಗೆ ಸ್ಟೈರೈಡ್‌ ಸೇರಿಸಿ, ಕಷಾಯ ಮಾಡಿ ಸೊಪ್ಪು ಬೇಯಿಸಿದ ನೀರಿಗೆ ಕಫ್‌ ಸಿರಪ್‌ ಸೇರಿಸಿ ಕೊಡುತ್ತಾರೆ. ಹಳದಿ ಕಾಮಾಲೆ (ಜಾಂಡಿಸ್‌)ಗೆ ಸಾಕಷ್ಟು ಔಷಧಗಳಿದ್ದರೂ ಭಟ್ಕಳ ತಾಲೂಕಿನಲ್ಲಿ ಒಬ್ಬ ವ್ಯಕ್ತಿ ಕೈಗೆ ಕಾದ ಕಬ್ಬಿಣದ ಸರಳಿನಿಂದ ಬರೆ ಹಾಕುತ್ತಾನೆ. ಆ ಗಾಯಕ್ಕೆ ಬಟ್ಟೆ ಸುತ್ತಿಕೊಂಡು ನೀರು ಹಾಕಿಕೊಳ್ಳುತ್ತಿರಬೇಕು. ಹಳದಿ ಕಾಮಾಲೆಯ ಕೀವು ಹೊರಬರುತ್ತದೆ ಎಂದು ನಂಬಿಸುತ್ತಾನೆ. ಸುಟ್ಟ ಗಾಯಕ್ಕೆ ಕೀವಾಗಿ ಹರಿಯುತ್ತದೆ. ಇಂಥದಕ್ಕೆಲ್ಲಾ ಕೊನೆ ಹಾಡದಿದ್ದರೆ ಅಸಲಿ ವೈದ್ಯಕೀಯ ಜನರ ಅಪನಂಬಿಕೆಗೆ ಪಾತ್ರವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next