Advertisement

ಪಡುಬೆಳ್ಳೆ ಪ್ರಕರಣ : ನಕಲಿ ಚಿನ್ನ ಅಡವಿಟ್ಟು ವಂಚನೆ ; ಆರೋಪಿಗಳ ಬಂಧನ

03:45 AM Jul 18, 2017 | Team Udayavani |

ಶಿರ್ವ/ ಉಡುಪಿ  : ಪಡುಬೆಳ್ಳೆ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ಮೃತ ಶಂಕರ ಆಚಾರ್ಯ ನಕಲಿ ಚಿನ್ನ ಅಡವಿಟ್ಟು ಇನ್ನಂಜೆ ಸಿ.ಎ. ಬ್ಯಾಂಕಿಗೆ 65 ಲ.ರೂ.ವಂಚಿಸಿದ ಪ್ರಕರಣದಲ್ಲಿ ಶಾಮೀಲಾದ‌ ಇಬ್ಬರು ಆರೋಪಿಗಳನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

Advertisement

ಇನ್ನಂಜೆ ಸಿ.ಎ.ಬ್ಯಾಂಕಿನ ಕುಂಜಾರುಗಿರಿ ಶಾಖೆಯಲ್ಲಿ ಮಹಜರು ನಡೆಸಿದ ಪೋಲೀಸರು ಬ್ಯಾಂಕಿನ ಶಾಖೆಯಲ್ಲಿ ರುವ ನಕಲಿ ಚಿನ್ನ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ವಂಚನೆ ಪ್ರಕರಣದಲ್ಲಿ ಶಾಮೀಲಾದ ಆರೋಪಿಗಳಾದ ಶಾಖಾ ವ್ಯವಸ್ಥಾಪಕ ಇನ್ನಂಜೆ ನಿವಾಸಿ ಉಮೇಶ್‌ ಅಮೀನ್‌(43)ಮತ್ತು ಚಿನ್ನ ಪರೀಕ್ಷಕ ಕುರ್ಕಾಲು ಪಾಜೈ ನಿವಾಸಿ ಉಮೇಶ್‌ ಆಚಾರ್ಯ(49) ಅವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ರವಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಜು.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಕರಣದ ಬಗ್ಗೆ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಮನೋಹರ ರಾವ್‌ ಮೃತ ಶಂಕರ ಅಚಾರ್ಯ,ಬ್ಯಾಂಕಿನ ಚಿನ್ನ ಪರೀಕ್ಷಕ ಉಮೇಶ್‌ಆಚಾರ್ಯ ಮತ್ತು ಶಾಖಾ ವ್ಯವಸ್ಥಾಪಕ ಉಮೇಶ್‌ ಅಮೀನ್‌ರವರ ವಿರುದ್ಧ ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಘಟನೆಗೆ ಸಂಬಂಧಪಟ್ಟಂತೆ ಪೋಲೀಸರು ಮಹಜರು ನಡೆಸಿ ಸುಮಾರು 62.5ಲ.ರೂ ಮೌಲ್ಯದ 3.370 ಕೆ.ಜಿ ನಕಲಿ ಚಿನ್ನ ಮತ್ತು 55 ಸಾವಿರ ರೂ. ಮೌಲ್ಯದ 28ಗ್ರಾಂ ಅಸಲಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕಾಪು ವೃತ್ತ ನಿರೀಕ್ಷಕ ಹಾಲ ಮೂರ್ತಿ ರಾವ್‌ ನಿರ್ದೇಶನದಲ್ಲಿ ಶಿರ್ವ ಠಾಣಾಧಿಕಾರಿ ನರಸಿಂಹ ಶೆಟ್ಟಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.ಹೆಡ್‌ಕಾನ್‌ಸ್ಟೆಬಲ್‌ಗ‌ಳಾದ ದಯಾನಂದ್‌,ದಾಮೋದರ ಆಚಾರ್ಯ ಮತ್ತು ನಾರಾಯಣ ಸಹಕರಿಸಿದ್ದಾರೆ.

Advertisement

ಉಡುಪಿಯ ಸೊಸೈಟಿಯಲ್ಲೂ ಶಂಕರ ಆಚಾರ್ಯ ವ್ಯವಹಾರ?
ಉಡುಪಿ:
ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ ಶಿರ್ವದ ಪಡುಬೆಳ್ಳೆಯಲ್ಲಿ ಸಾಮೂಹಿತವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬದ ವ್ಯಕ್ತಿ ಶಂಕರ ಆಚಾರ್ಯ ಅವರು ಇನ್ನಂಜೆ ಸಿ.ಎ. ಬ್ಯಾಂಕಿನ ಶಾಖೆಯಲ್ಲಿ ಮಾತ್ರವಲ್ಲದೆ ಉಡುಪಿಯ ಸೊಸೈಟಿಯಲ್ಲೂ ಸಾಲದ ವ್ಯವಹಾರ ನಡೆಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಈ ಬಗ್ಗೆ ಉಡುಪಿಯ ಸಿ.ಎ. ಬ್ಯಾಂಕೊಂದರ ಮುಖ್ಯಸ್ಥರಲ್ಲಿ ವಿಚಾರಿಸಿದಾಗ, ಕೆಲ ವರ್ಷಗಳ ಹಿಂದೆ ಶಂಕರ ಆಚಾರ್ಯ ಅವರು ಚಿನ್ನ ಅಡವಿಟ್ಟು ಸಾಲದ ವ್ಯವಹಾರ ನಡೆಸಿದ್ದಾರೆ. ಆದರೆ ಯಾವುದೇ ವಂಚನೆ ಮಾಡಿಲ್ಲ. ಸಾಲವನ್ನು ಕಟ್ಟಿ ಚಿನ್ನವನ್ನು ಹಿಂಪಡೆದುಕೊಂಡು ಹೋಗಿದ್ದಾರೆ ಎಂದಿದ್ದಾರೆ.ಇನ್ನು ಬೇರೆ ಯಾವ ಸೊಸೈಟಿ, ಬ್ಯಾಂಕು, ಹಣಕಾಸು ಸಂಸ್ಥೆ, ವ್ಯಕ್ತಿಗಳಲ್ಲಿ ಹಣಕಾಸಿನ ವಹಿವಾಟು ನಡೆಸಿದ್ದಾರೆ ಎನ್ನುವ ಬಗ್ಗೆ ಖಚಿತಗೊಂಡಿಲ್ಲ. ತನಿಖೆ ನಡೆಯುತ್ತಲಿದೆ.

ಚಿನ್ನ ಖರೀದಿಸಿದವರಿಗೆ ಆತಂಕ?
ಪಡುಬೆಳ್ಳೆಯಲ್ಲಿ ಕಳೆದ ಹಲವು ವರ್ಷಗಳಿಂದ ಜುವೆಲ್ಲರಿ ಅಂಗಡಿ ಇಟ್ಟು ವ್ಯವಹರಿಸುತ್ತಿದ್ದ ಶಂಕರ ಆಚಾರ್ಯ ಅವರು ಎಷ್ಟೋ ಮಂದಿಗೆ ಚಿನ್ನಾಭರಣ ಮಾಡಿಕೊಟ್ಟಿದ್ದಾರೆ. 

ಅವರು ನಡೆಸಿದ ಅಸಲಿ-ನಕಲಿ ಚಿನ್ನಾಭರಣ ವಂಚನೆ ಪ್ರಕರಣವು ಅವರ ಆತ್ಮಹತ್ಯೆಯ ಅನಂತರದಲ್ಲಿ ಬೆಳಕಿಗೆ ಬಂದ ಕಾರಣ ಅವರ ಅಂಗಡಿಯಲ್ಲಿ ಚಿನ್ನಾಭರಣ ಮಾಡಿಸಿಕೊಂಡ ಕೆಲವರಿಗೆ ಆತಂಕ ಮೂಡಿದೆ.

ತಾವು ಮಾಡಿಸಿಕೊಂಡ ಚಿನ್ನ ಅಸಲಿಯೇ? ಎನ್ನುವ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಜುವೆಲ್ಲರಿ ವ್ಯವಹಾರದಲ್ಲಿ ಶಂಕರ ಆಚಾರ್ಯ ಅವರು ಗ್ರಾಹಕರಿಗೆ ಯಾವುದೇ ರೀತಿಯ ಮೋಸ ನಡೆಸಿರುವ ದೂರುಗಳಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next