Advertisement

ಪ್ರಚಾರ ಪಡೆಯುವ ಉದ್ದೇಶದಿಂದ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಕರೆ ಮಾಡಿದ್ದ ಆರೋಪಿ!

04:32 PM Aug 21, 2020 | keerthan |

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಪ್ರಚಾರ ಪಡೆಯುವ ಉದ್ದೇಶದಿಂದ ಈತ ಹುಸಿಬಾಂಬ್ ಕರೆ ಮಾಡಿದ್ದ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಹೇಳಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ದಿನ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮುದ್ರಾಡಿಯ ಪೊಯ್ಯದಲ್ ಬಲ್ಲಾಡಿ ನಿವಾಸಿ ವಸಂತ ಕೃಷ್ಣ ಶೇರಿಗಾರ ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ಇದೇ ವರ್ಷದ ಜನವರಿಯಲ್ಲಿ ನಡೆದ ಬಾಂಬ್ ಇರಿಸಿದ್ದ ಪ್ರಕರಣದಲ್ಲಿ ಆರೋಪಿಗೆ ಸಿಕ್ಕ ಪ್ರಚಾರದಿಂದ ಪ್ರೇರೆಪಿತನಾಗಿ, ತಾನು ಕೂಡಾ ಪ್ರಸಿದ್ಧನಾಗಬೇಕೆಂದು ಬಜಪೆ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಎಂದು ಆರೋಪಿ ವಸಂತ ಕೃಷ್ಣ ಶೇರಿಗಾರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಆಯುಕ್ತರು ಹೇಳಿದ್ದಾರೆ.

ಹೋಟೆಲ್ ನಲ್ಲಿ ಕೆಲಸ: ಕಾರ್ಕಳದ ಮುದ್ರಾಡಿಯವನಾದ ಈತ ಬೆಂಗಳೂರಿನಲ್ಲಿ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಊರಿಗೆ ಬಂದಿದ್ದ ಈತ ಸದ್ಯ ಉಡುಪಿಯ ಹೊಟೇಲೊಂದರಲ್ಲಿ ಕೆಲಸಕ್ಕಿದ್ದ.

Advertisement

ಗೂಗಲ್ ನಿಂದ ದೂರವಾಣಿ ಸಂಖ್ಯೆ: ವಿಮಾನ ನಿಲ್ದಾಣಕ್ಕೆ ಕರೆ ಮಾಡುವ ಉದ್ದೇಶದಿಂದ ಗೂಗಲ್ ಮೂಲಕ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ. ಆರ್ ವಾಸುದೇವ ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದ. ನಂತರ ಆ ಸಂಖ್ಯೆಗೆ “ಏರ್ ಪೋರ್ಟ್ ನಲ್ಲಿ ಬಾಂಬ್ ಇದೆ” ಎಂದು ಎಸ್ಎಂಎಸ್ ಮಾಡಿದ್ದ. ಇದಾದ ಕೆಲವೇ ಸಮಯದಲ್ಲಿ ಕರೆ ಮಾಡಿ ಕನ್ನಡದಲ್ಲೇ ಮಾತನಾಡಿದ್ದ. ಕೂಡಲೇ ಏರ್ ಪೋರ್ಟ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂದಿತ್ತು.

ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ: ರಕ್ಷಿತ್, ವರುಣ್ ಗೌಡ, ಸಾಯಿ ವಿವೇಕ್ ಗೆ ಮೊದಲ ರ‍್ಯಾಂಕ್

ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊಬೈಲ್ ನಂಬರ್ ಆಧಾರದಲ್ಲಿ ತನಿಖೆಗೆ ಇಳಿದ ಮಂಗಳೂರು ನಗರ, ಉಡುಪಿ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಅದೇ ದಿನ ಆರೋಪಿಯನ್ನು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next