ಬೆಳ್ಳಗಿದ್ದರೆ ಮಾತ್ರ ಸೌಂದರ್ಯ, ಜೀವದನಲ್ಲಿ ಯಶಸ್ಸು ಅಂತ ಫೇರ್‌ನೆಸ್ ಕ್ರೀಮ್ ಜಾಹೀರಾತುಗಳು ಹೇಳುತ್ತವೆ. ಯಶಸ್ಸಿಗೂ ಮೈಬಣ್ಣಕ್ಕೂ ಏನು ಸಂಬಂಧ? ಜಾಹೀರಾತುಗಳೇಕೆ ಹೀಗೆ ಮಹಿಳೆಯರ ಆಲೋಚನೆಯ ಹಾದಿಯನ್ನು ತಪ್ಪಿಸುತ್ತಿವೆ?
ಮಹಾಭಾರತದಲ್ಲಿ ದ್ರೌಪದಿಯನ್ನು “ಅತ್ಯಂತ ಸುಂದರಿ’ ಎಂದು ವರ್ಣಿಸಲಾಗುತ್ತದೆ. ಆಕೆಗೆ ಕೃಷ್ಣೆ ಎಂಬ ಹೆಸರೂ ಇತ್ತು. ಕಥೆಯ ಪ್ರಕಾರ, ಆಕೆಯ ಮೈಬಣ್ಣ ನಸುಗಪ್ಪು. ಅದಕ್ಕೆ ಕೃಷ್ಣೆ ಎಂಬ ಹೆಸರಿತ್ತಂತೆ. ಭಾರತೀಯರಲ್ಲಿ ಸುಂದರಿಯರು ಎಂದು ಪರಿಗಣಿಸಲ್ಪಡುವ ಕೇರಳದ ಹೆಣ್ಣುಮಕ್ಕಳ ಬಣ್ಣವೂ ಸಾಧಾರಣವಾಗಿ ಉತ್ತರದವರಿಗೆ ಹೋಲಿಕೆ ಮಾಡಿದರೆ, ನಸುಗಪ್ಪು. ಹಾಗಾದರೆ ಬಿಳಿ, ಕಪ್ಪು ಪದಗಳ ನಿರ್ವಚನ ಏನು!? ಎನ್ನುವ ಪ್ರಶ್ನೆ ಯಾವಾಗಲೂ ನನ್ನನ್ನು ಕಾಡುತ್ತಿರುತ್ತದೆ.
ಈ ಎಲ್ಲಾ ಸತ್ಯಗಳು ಅಸ್ತಿತ್ವದಲ್ಲಿರುವಾಗ, ನಮ್ಮ ಮಾಧ್ಯಮಗಳಲ್ಲಿ ಆಗಾಗ, ಬಿಳಿಚಿಕೊಂಡಂತೆ ಕಾಣಿಸಿಕೊಳ್ಳುವ ಯಾಮಿ ಗೌತಮಿ ಫಳ್ಳನೆ ನಗುತ್ತಾ ಬಂದು ನಸುಗಪ್ಪು ಚರ್ಮದ ಮಂಕಾಗಿ ಕುಳಿತಿರುವ ಹುಡುಗಿಯೊಬ್ಬಳಿಗೆ ಫೇರ್ ಆಂಡ್ ಲವ್ಲಿ ಕೈಗಿತ್ತು ಯಶಸ್ಸಿನ ಬಗ್ಗೆ ಮಾತಾಡುವ ಜಾಹೀರಾತು ಪ್ರಸಾರವಾಗುವಾಗ ಅಂದುಕೊಳ್ಳುತ್ತಿರುತ್ತೇನೆ; ಯಶಸ್ಸಿಗೂ ಮೈಬಣ್ಣಕ್ಕೂ ಏನು ಸಂಬಂಧ?
ಇನ್ನು, ಸೌಂದರ್ಯ ವರ್ಧಕ ಎಂದು ಕರೆಸಿಕೊಳ್ಳಲ್ಪಡುವ ಇಂಥ ಉತ್ಪನ್ನಗಳ ಜಾಹೀರಾತುಗಳು ಮಾಡುತ್ತಿರುವುದೇನು? ಸಾಧಾರಣ ಭಾರತೀಯ ಮನೆಗಳಲ್ಲಿ ನೋಡಲ್ಪಡುವ ಟಿವಿ ಕಾರ್ಯಕ್ರಮಗಳ ಮಧ್ಯೆ, ಧಾರಾವಾಹಿಗಳ ಮಧ್ಯೆ, ಯೂಟ್ಯೂಬ್ ವಿಡಿಯೋಗಳೊಂದಿಗೆ ಬರುವ ಜಾಹೀರಾತುಗಳಲ್ಲಿ ಬೆಳ್ಳಗಿದ್ದರೆ ಮಾತ್ರ ಸೌಂದರ್ಯ, ಅದಿಲ್ಲದಿದ್ದರೆ ಆತ್ಮವಿಶ್ವಾಸ, ಯಶಸ್ಸು ಖಂಡಿತ ನಿಮಗೆ ಸಿಗೋದಿಲ್ಲ ಎಂದು ಬಿಂಬಿಸುವ ಮಾರ್ಕೆಟಿಂಗ್ ಪ್ರಯತ್ನಗಳು ಯಶಸ್ವಿಯಾಗಿ ನಡೆಯುತ್ತಿರುವಂತೆ, ಈ ಜಾಹೀರಾತನ್ನು ವೀಕ್ಷಿಸುವ ನಸುಗಪ್ಪು ಬಣ್ಣದ ಹದಿಹರೆಯದ ಸಾಧಾರಣ ಭಾರತೀಯ ಹೆಣ್ಣುಮಗಳೊಬ್ಬಳ ಮನದಲ್ಲಿ ಅದೆಂಥ ಕೋಲಾಹಲವನ್ನು ಸೃಷ್ಟಿಸಬಹುದು!? ಆತ್ಮವಿಶ್ವಾಸದ ಕೊರತೆಯನ್ನು ಬಿತ್ತುವ ಕಾರ್ಯಕ್ರಮ ಇದಲ್ಲವೇ? ಒಬ್ಬಿಬ್ಬರಲ್ಲ, ಕೋಟ್ಯಂತರ ಹೆಣ್ಣುಮಕ್ಕಳ ಮನಸ್ಸಿಗೆ ಹುಳಬಿಡುವ ಕಾರ್ಯವನ್ನೂ ಈ ಕಂಪನಿಗಳು ಮಾಡುತ್ತಾ ಲಾಭ ಗಳಿಸುತ್ತಿವೆ.
ಇನ್ನು ಕೆಲವು ಯಶಸ್ವಿ ಭಾರತೀಯ ಮಹಿಳೆಯರ ವಿಚಾರಕ್ಕೆ ಬರೋಣ. ಸೌಂದರ್ಯಕ್ಕೂ ಮಹತ್ವವೀಯುವ ಮಾಡೆಲಿಂಗ್ ಹಾಗೂ ನಟನೆಯ ಕ್ಷೇತ್ರವನ್ನೇ ತೆಗೆದುಕೊಂಡರೆ, ಹೊಳೆವ ಕಪ್ಪು ಚರ್ಮದ ಸುಂದರಿಯರು ಅದೆಷ್ಟು ಮಂದಿ ಇಲ್ಲ? 2008ರ ವಿಶ್ವ ಸುಂದರಿ ಸ್ಪರ್ಧೆಯ ಮೊದಲ ರನ್ನರ್ ಅಪ್ ಆಗುವಾಗ, ಪಾರ್ವತಿ ಓಮನಕುಟ್ಟನ್ ಎದುರು ಸಾಕಷ್ಟು ಬೆಳ್ಳಗಿನ ಎದುರಾಳಿಗಳು ಇದ್ದರು. ಆದರೆ, ಆಕೆಯ ಬುದ್ಧಿಮತ್ತೆ ಹಾಗೂ ಸ್ಪರ್ಧೆಯ ಮುಂದೆ ಅವರಾರೂ ನಿಲ್ಲಲಿಲ್ಲ. ಪ್ರಿಯಾಂಕಾ ಚೋಪ್ರಾ, ಕಾಜೋಲ್, ನಟಾಶಾ ಶರ್ಮಾ, ನಂದಿತಾ ದಾಸ್, ಬಿಪಾಶಾ ಬಸು, ಮುಗಾœ ಗೋಡ್ಸೆ… ಹೀಗೆ ಅದೆಷ್ಟು ಕಪ್ಪು ಮೈಬಣ್ಣದವರೆಂದೆನಿಸಿಕೊಂಡ ನಟಿಮಣಿಯರು, ರೂಪದರ್ಶಿಗಳಿಲ್ಲ ನಮ್ಮಲ್ಲಿ? ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ ನೂರಾರು ಸಾಧಕಿಯರು ಅವರವರ ಮೈಬಣ್ಣಕ್ಕೆ ಮಹತ್ವವಿಕ್ಕಿದ್ದರೆ ಇಂದು ಅವರಿರುವ ಸ್ಥಾನ ತಲುಪುತ್ತಿದ್ದರೋ ಇಲ್ಲವೋ! ನಟನೆಯಲ್ಲಿ ಮಾತ್ರವಲ್ಲ, ಬಹಳಷ್ಟು ಕ್ಷೇತ್ರಗಳಲ್ಲಿ ದೇಶ ವಿದೇಶಗಳಲ್ಲಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಮೇರು ಸಾಧಕಿಯರಿದ್ದಾರೆ ನಮ್ಮಲ್ಲಿ. ಹಾಗಾದರೆ, ಇಲ್ಲಿ ಚರ್ಮದ ಬಣ್ಣಕ್ಕೂ ಯಶಸ್ಸಿಗೂ ಸಂಬಂಧವಿದೆ ಎಂದು ಕಿವಿಗೆ ಹೂವಿಡುವ ಜಾಹೀರಾತುಗಳನ್ನು ನಂಬಬೇಕೇ?!
ಸೌಂದರ್ಯ ಎನ್ನುವುದರ ಅರ್ಥ ಒಬ್ಬೊಬ್ಬರಿಗೆ ಒಂದೊಂದಿರಬಹುದು. ಅದು ನೋಡುಗನ ಕಣ್ಣಲ್ಲಿರುತ್ತದೆ. ಭಾರತೀಯ ಮೈಬಣ್ಣ ಪಾಶ್ಚಿಮಾತ್ಯರಿಗೆ ಹೋಲಿಸಿದರೆ, ಅದು ಯಾವತ್ತಿಗೂ ನಸುಗಪ್ಪೇ. ಸುತ್ತಲಿನ ಪರಿಸರ, ಹವೆ ಇತ್ಯಾದಿಗಳ ಮೇಲೆ ಹೊಂದಿಕೊಂದು ಚರ್ಮದ ಬಣ್ಣ ವ್ಯತ್ಯಾಸವಾಗುತ್ತದೆ. ಬಿಳಿಯರೆನಿಸಿಕೊಂಡವರಲ್ಲಿ ಒಂದು ದೊಡ್ಡ ವರ್ಗ ಭಾರತದ ಸಮುದ್ರತೀರಗಳಲ್ಲಿ ಬಿಸಿಲಿಗೆ ಮೈಯೊಡ್ಡಿ ಬಣ್ಣ ಕಂದಿಸಿಕೊಂಡು ಖುಷಿಪಡುವುದನ್ನೂ ನೋಡಿರುತ್ತೇವೆ. ಬಣ್ಣ ಯಾವುದೇ ಇರಲಿ, ಆರೋಗ್ಯವಂತ ಚರ್ಮದ ಹೊಳಪಿಗೆ ಇನ್ನೇನೂ ಸಾಟಿಯಿಲ್ಲ. ಚರ್ಮದ ಆರೋಗ್ಯವನ್ನು ಕಾಪಿಟ್ಟುಕೊಂಡಲ್ಲಿ, ಅರೋಗ್ಯಕರ ಹವ್ಯಾಸ, ಆಹಾರ, ವ್ಯಾಯಾಮಗಳೊಂದಿಗೆ ಸುಂದರ ಮನಸ್ಸನ್ನೂ ಕಾಯ್ದುಕೊಂಡಲ್ಲಿ ಸೌಂದರ್ಯವು ವ್ಯಕ್ತಿತ್ವದಲ್ಲಿ ಪ್ರತಿಫಲಿತವಾಗುತ್ತದೆ. ಸುಂದರ ವ್ಯಕ್ತಿತ್ವವು ಸಾಧನೆ, ಶ್ರಮಕ್ಕೆ ಬೆನ್ನೆಲುಬಾದರೆ ಯಶಸ್ಸು ಖಂಡಿತಾ ಜತೆಯಾಗುತ್ತದೆ.
ಶ್ರುತಿ ಶರ್ಮಾ, ಬೆಂಗಳೂರು