Advertisement
ಸಂತೆ ಮೈದಾನದ ಪ್ರವೇಶ ದ್ವಾರದ ಬಳಿ ಸುಮಾರು 200 ಮೀಟರ್ ಉದ್ದದ ಚರಂಡಿ ಬಳಿ ಮಳೆಗಾಲದಲ್ಲಿ ವಿಪರೀತ ತ್ಯಾಜ್ಯ ಶೇಖರಣೆಗೊಂಡು ಬ್ಲಾಕ್ ಆಗಿ ರಸ್ತೆ ಮೇಲೆ ಚರಂಡಿ ನೀರು ಹರಿದಿತ್ತು. ಜೆಸಿಬಿ ಬಳಸಿ ಚರಂಡಿಯನ್ನು ಒಡೆದು ನೀರು ಹರಿಯಲು ಕ್ರಮ ಕೈಗೊಳ್ಳಲಾಗಿತ್ತು. “ಜಿಲ್ಲೆಯಲ್ಲೇ ಅತಿ ದೊಡ್ಡ ಸಂತೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭರಮಸಾಗರದ ಸಂತೆ ಪ್ರತಿ ಮಂಗಳವಾರ ನಡೆಯುತ್ತದೆ. ಸುತ್ತಮುತ್ತಲ ಹಳ್ಳಿಗಳು ಸೇರಿದಂತೆ ದಾವಣಗೆರೆ, ಬಳ್ಳಾರಿ ಜಿಲ್ಲೆಗಳಿಂದ ನಾನಾ ವ್ಯಾಪಾರ ನಡೆಸುವವರು ಪ್ರತಿ ವಾರ ಇಲ್ಲಿಗೆ ಆಗಮಿಸುತ್ತಾರೆ. ಅಲ್ಲದೆ ಭರಮಸಾಗರ ಸುತ್ತಮುತ್ತಲಿನ 150ಕ್ಕೂ ಹೆಚ್ಚು ಹಳ್ಳಿಗಳು ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು, ದಾವಣಗೆರೆ ತಾಲೂಕಿನ 100ಕ್ಕೂ ಹೆಚ್ಚು ಹಳ್ಳಿಗಳ ಜನರು ಇಲ್ಲಿನ ಸಂತೆಯನ್ನು ನೆಚ್ಚಿಕೊಂಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಓಡಾಟ ಇರುವ ಸಂತೆ ಮೈದಾನದ ಮುಖ್ಯ ದ್ವಾರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಪ್ರವೇಶದ್ದೇ ದೊಡ್ಡ ಸಮಸ್ಯೆಯಾಗಿದೆ.
Related Articles
Advertisement
ಸಂತೆ ಮೈದಾನಕ್ಕೆ ಕಾಂಪೌಂಡ್, ಸಂತೆ ಕಟ್ಟೆಗಳು, ಸಿಸಿ ರಸ್ತೆ, ಸಿಮೆಂಟ್ ಮೇಲ್ಛಾವಣಿಗಳನ್ನು ಅಳವಡಿಸಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಸಂತೆ ಸುತ್ತಲಿನ ಚರಂಡಿಗಳು ಸೇರಿದಂತೆ ಇತರೆ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬಿಸಾಡುವ ಕಸ ತ್ಯಾಜ್ಯವನ್ನು ಉತ್ತಮವಾಗಿ ವಿಲೇವಾರಿ ಮಾಡುವ ಕಡೆ ಗ್ರಾಮ ಪಂಚಾಯತ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯ ಆಗ್ರಹ.
14ನೇ ಹಣಕಾಸು ಯೋಜನೆಯಡಿ ಒಂದು ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಸಂತೆ ಮೈದಾನದ ಪ್ರವೇಶ ದ್ವಾರದಲ್ಲಿ ಸಿಮೆಂಟ್ ಪೈಪ್ ಅಳವಡಿಸಿ ಚರಂಡಿ ನಿರ್ಮಿಸಲು ಯೋಜನೆ ರೂಪಿಸಿ ಅನುಮೋದನೆಗೆ ಕಳುಹಿಸಿದ್ದೇವೆ. ಶೀಘ್ರದಲ್ಲೇ ಅನುದಾನ ಬಿಡುಗಡೆ ಆಗಲಿದೆ. ಕಾಮಗಾರಿ ಕೈಗೊಂಡು ಸಮಸ್ಯೆ ಪರಿಹರಿಸಲಾಗುವುದು. –ಶ್ರೀದೇವಿ, ಭರಮಸಾಗರ ಗ್ರಾಪಂ ಪಿಡಿಒ
-ಎಚ್.ಬಿ. ನಿರಂಜನ ಮೂರ್ತಿ