ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮ ರಥೋತ್ಸವ, ಪುತ್ತೂರು ಬೆಡಿ ಎ. 17ರಂದು ರಾತ್ರಿ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ದೇವರ ನಡೆ ದೇಗುಲವಾಗಿರುವ ಪತಾಕೆ, ಅಷ್ಟ ದಿಕ್ಪಾಲಕರು, ಶಿಖರ ಕಲಶ, ಶ್ವೇತ ಚಕ್ರ ಮತ್ತು ಸತ್ತಿಗೆ ಅಳವಡಿಸಿದ 70 ಅಡಿ ಎತ್ತರದ ಬ್ರಹ್ಮರಥದಲ್ಲಿ ಶ್ರೀ ದೇವರು ವಿರಾಜಮಾನ ರಾಗಲಿದ್ದಾರೆ. ರಾತ್ರಿ 8ರ ಅನಂತರ ದೇವಾ ಲಯದ ಮುಂಭಾಗದ ರಥ ಬೀದಿಯಲ್ಲಿ 400 ಮೀ. ಉದ್ದಕ್ಕೆ ಬ್ರಹ್ಮರಥ ತೆರಳಿ ದೇವಾಲಯಕ್ಕೆ ಹಿಂದಿರುಗಿ ಬರುತ್ತದೆ.
ಜಯಘೋಷ
ಬ್ರಹ್ಮವಾಹಕರು ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ಮೂರ್ತಿ ಯನ್ನು ತಲೆಯ ಮೇಲೆ ಹೊತ್ತು ಬ್ರಹ್ಮರಥವನ್ನು ಏರುವ ಸಮಯ ಪುತ್ತೂರು ಸೀಮೆಯ ಜನರಿಗೆ ಅಪೂರ್ವ ಧಾರ್ಮಿಕ ಕ್ಷಣ. ಚೆಂಡೆ ಮೇಳ, ಮಂಗಳವಾದ್ಯ, ಬ್ಯಾಂಡ್ ವಾಲಗ, ಶಂಖ ಜಾಗಟೆ, ಮಂಗಳಕರ ನಿನಾದದ ಹಿನ್ನೆಲೆಯಲ್ಲಿ ಶ್ರೀ ದೇವರು ಬ್ರಹ್ಮ ರಥಾರೂಢರಾಗುವುದು ವಾಡಿಕೆ. ದೇವಾಲಯದ ಮುಂಭಾಗದ ಗದ್ದೆಯಲ್ಲಿ ಸೇರಿದ ಸಹಸ್ರಾರು ಭಕ್ತರು ಏಕ ಕಂಠದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಪಾದರವಿಂದಗಳಿಗೆ ಗೋವಿಂದ ಎನ್ನಿ ಗೋವಿಂದ ಎಂದು ಜಯಘೋಷ ಹಾಕುತ್ತಾರೆ.
ಸಾವಿರಾರು ಮಂದಿ ಭಾಗಿ
ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ರಥೋತ್ಸವ ಮತ್ತು ಸುಡುಮದ್ದು ವೀಕ್ಷಣೆಗಾಗಿ 1 ಲಕ್ಷಕ್ಕೂ ಮಿಕ್ಕಿ ಭಕ್ತರು ಸೇರುವ ನಿರೀಕ್ಷೆಯಿದೆ. ಬೆಳಗ್ಗೆ ದೇವಾಲಯದಲ್ಲಿ ದೇವರ ಉತ್ಸವ ಬಲಿ ಮತ್ತು ದರ್ಶನ ಬಲಿ ನಡೆಯುತ್ತದೆ.
ವಾಹನ ನಿಲುಗಡೆಗೆ ವ್ಯವಸ್ಥೆ
ಪುತ್ತೂರು ನಗರದ ವಿವಿಧ ಭಾಗದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಯಿಂದ ರಾತ್ರಿ ಬ್ರಹ್ಮರಥೋತ್ಸವ ಮುಗಿಯುವ ತನಕ ಮುಖ್ಯ ರಸ್ತೆಯಲ್ಲಿ ಕೊಂಬೆಟ್ಟು ಕ್ರಾಸ್‌ನಿಂದ ಬಸ್‌ನಿಲ್ದಾಣದ ತನಕ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ.