ಚೆನ್ನೈ : ಭಾರತ ತಂಡದ ಭರವಸೆಯ ಟಿ 20 ಆಟಗಾರ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಅವರು ಏಕದಿನ ಪಂದ್ಯಗಳಲ್ಲಿ ನಿರಂತರವಾಗಿ ಶೂನ್ಯಕ್ಕೆ ಔಟಾಗುತ್ತಿದ್ದಾರೆ. ಆಸೀಸ್ ವಿರುದ್ಧ ಬುಧವಾರ ನಡೆದ ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲೂ ಅವರು ಆಷ್ಟನ್ ಅಗರ್ ಎಸೆದ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದಾರೆ.5 ನೇ ವಿಕೆಟ್ ಗೆ ಆಡಲಿಳಿದ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿತ್ತು ಆದರೆ ಎಲ್ಲವೂ ಹುಸಿಯಾಯಿತು.
ಆಸೀಸ್ ವಿರುದ್ದದ ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲೂ ಸ್ಟಾರ್ಕ್ ಅವರ ಮೊದಲ ಎಸೆತದಲ್ಲೇ ಸೂರ್ಯ ಔಟಾಗಿದ್ದರು.ಎರಡನೇ ಪಂದ್ಯದಲ್ಲೂ ವೇಗಿ ಮಿಚೆಲ್ ಸ್ಟಾರ್ಕ್ ಅವರ 4.4 ನೇ ಓವರ್ ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಲೆಗ್ ಬಿಫೋರ್ ಬಲೆಗೆ ಬಿದ್ದ ಬಳಿಕ ಕ್ರೀಸ್ ಗೆ ಬಂದ ಸೂರ್ಯಕುಮಾರ್ ಯಾದವ್ ಅವರು ಮೊದಲ ಎಸೆತದಲ್ಲೇ ಘಾತಕ ದಾಳಿಎದುರಿಸಲಾಗದೆ ಎಲ್ ಬಿ ಬಲೆಗೆ ಬಿದ್ದಿದ್ದರು.
32 ರ ಹರೆಯದ ಸೂರ್ಯ ಕುಮಾರ್ ಯಾದವ್ ಅವರು ಅದ್ಭುತ ಟಿ20 ದಾಖಲೆ ಹೊಂದಿದ್ದು ಬ್ಯಾಟಿಂಗ್ ನಲ್ಲಿ ಆಗ್ರ ಸ್ಥಾನಿಯಾಗಿದ್ದಾರೆ. ಏಕದಿನ ಮಾದರಿಲ್ಲಿ 21 ಇನ್ನಿಂಗ್ಸ್ಗಳಲ್ಲಿ 433 ರನ್ ಮಾತ್ರ ಸೂರ್ಯಕುಮಾರ್ ಗಳಿಸಿದ್ದಾರೆ. ಈ ಪಂದ್ಯದಿಂದ ಅವರನ್ನು ಕೈಬಿಡಲಾಗುತ್ತದೆ ಎಂದು ಲೆಕ್ಕಾಚಾರಗಳನ್ನು ಹಾಕಲಾಗಿದ್ದರು. ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡು ಮತ್ತೆ ವೈಫಲ್ಯ ಅನುಭವಿಸಿದ್ದಾರೆ.