ಹಳಿಯಾಳ: ಹಳಿಯಾಳ, ಜೋಯಿಡಾ ಮತ್ತು ದಾಂಡೇಲಿ ತಾಲೂಕುಗಳಲ್ಲಿ ಅಕ್ರಮ ಮರಳುಗಾರಿಕೆ ಅಧಿಕವಾಗಿದ್ದು ಅದನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ| ಕೆ. ಹರೀಶಕುಮಾರ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿದ್ಯಮಾನ ನಡೆಯಿತು.
ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ನಡೆದ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮರಳು ದೊರೆಯುವ ಜೋಯಿಡಾ ತಾಲೂಕಿನ ತಹಶೀಲ್ದಾರ್ ಸಂಜಯ ಕಾಂಬ್ಳೆ ಅವರನ್ನು ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡರು. ಅಕ್ರಮ ಮರಳುಗಾರಿಕೆಯಿಂದ ನೈಸರ್ಗಿಕ ಶಕ್ತಿ ಕುಂದುತ್ತಿದೆ. ತಕ್ಷಣ ಕಾರ್ಯಾಚರಣೆ ನಡೆಸಿ ಅಕ್ರಮ ಮರಳುಗಾರಿಕೆಯನ್ನು ನಿಯಂತ್ರಿಸಬೇಕಾಗುತ್ತದೆ. ಅದರ ಕುರಿತು ವರದಿ ನೀಡುವ ಬದಲು ಸ್ಥಳದಲ್ಲಿಯೇ ಕಾನೂನು ಕ್ರಮ ಕೈಗೊಳ್ಳಿ ಎಂದು ಆದೇಶಿಸಿದ ಜಿಲ್ಲಾಧಿಕಾರಿ ಸಕ್ರಮ ಮರಳುಗಾರಿಕೆ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಮತ್ತೆ ಅಕ್ರಮ ಕಲ್ಲುಕ್ವಾರಿ-ಗಣಿಗಾರಿಕೆ-ಕ್ರಶರ್, ಮರಳು ದಂಧೆ ಕಂಡು ಬಂದಲ್ಲಿ ದೂರುಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು, ತಹಶೀಲ್ದಾರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಲ್ಲದೇ ಕಡ್ಡಾಯ ನಿವೃತ್ತಿಗೆ ಸರ್ಕಾರಕ್ಕೆ ವರದಿ ನೀಡುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಅಕ್ರಮ ಮರುಳುಗಾರಿಕೆ ತಡೆಯಲು ಪೊಲೀಸ್, ವಿಎ, ಪಿಡಿಓಗಳ ತಂಡವಿದ್ದು ಇವರೆಲ್ಲ ಏನ ಮಾಡ್ತಾ ಇದ್ದಾರೆ ?, ಯಾರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಹಾಗೂ ಯಾರಿಗೆ ನೋಟಿಸ್ ನೀಡಲಾಗಿದೆ ? ಎಂದು ಕೋಪದಿಂದಲೇ ಮರಳುಗಾರಿಕೆ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಜೋಯಿಡಾ ತಹಶೀಲ್ದಾರ್ ಸಂಜಯ ಕಾಂಬ್ಳೆ ಅವರನ್ನು ತರಾಟೆಗೆ ತೆಗೆದುಕೊಂಡ ಡಿಸಿ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಜಾಣ ಮೌನ ವಹಿಸಿದ್ದು ಯಾಕೆ? ಕೆಳ ಮಟ್ಟದಲ್ಲಿ ಮಾಹಿತಿಗಳನ್ನು ಸಂಗ್ರಹಿಸಿ ದಾಳಿ ನಡೆಸಿ ಅದನ್ನು ತಡೆಯುವಲ್ಲಿ ಮತ್ತೆ ವಿಫಲರಾದಲ್ಲಿ ನಿಮ್ಮನ್ನು ಮನೆಗೆ ಕಳುಹಿಸಲಾಗುವುದೆಂದು ಮತ್ತೂಮ್ಮೆ ಸ್ಪಷ್ಟ ಸಂದೇಶ ನೀಡಿದರು.
ಬೇಸಿಗೆಯ ಬಿಸಿಲು ಮುಂದಿನ ಎರಡು ವಾರಗಳಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆಗಳು ಅಧಿಕವಾಗಿದ್ದು ಅದಕ್ಕಾಗಿ ಗ್ರಾಮೀಣ ಸೇರಿದಂತೆ ನಗರ ಪ್ರದೇಶಗಳಲ್ಲಿಯೂ ಸಹ ಕುಡಿಯುವ ನೀರು ಮತ್ತು ಮೇವಿನ ದಾಸ್ತಾನು ಸೇರಿದಂತೆ ಇನ್ನಿತರ ಮುನ್ನಚ್ಚರಿಕೆ ಕ್ರಮಗಳನ್ನು ಜರುಗಿಸಲು ಮುಂದಾಗಿ, ಸರ್ಕಾರವು ಜಿಲ್ಲಾಡಳಿತಕ್ಕೆ ಹಣಕಾಸಿನ ನೆರವು ಈಗಾಗಲೇ ಕಲ್ಪಿಸಿದ್ದು ಅವಶ್ಯತೆಯಿದ್ದಲ್ಲಿ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸೇರಿದಂತೆ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಹಾಗೂ ಮುಂದಿನ ದಿನಗಳಲ್ಲಿ ಮಳೆಯು ಉಂಟಾಗಿ ಪ್ರಕೃತಿ ವಿಕೋಪ ಉಂಟಾದಲ್ಲಿ ಸೂಕ್ತ ಕ್ರಮ ನಿರ್ವಹಿಸಲು ಅಧಿಕಾರಿಗಳು ತಯಾರಿ ನಡೆಸಬೇಕಾಗಿದ್ದು ಎಲ್ಲಾ ರೀತಿಯ ಸಹಕಾರ ನೀಡಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಭರವಸೆ ನಿಡಿದರು.
ತಹಶೀಲ್ದಾರ್ ಹಳಿಯಾಳದ ಶಿವಾನಂದ ಉಳ್ಳೇಗಡ್ಡಿ, ದಾಂಡೇಲಿಯ ಚಾಮರಾಜ ಪಾಟೀಲ್, ತಾಪಂ ಅಧಿಕಾರಿ ಡಾ| ಮಹೇಶ ಕುರಿಯವರ ಸೇರಿದಂತೆ ಮೂರು ತಾಲೂಕುಗಳ ಎಲ್ಲ ಅಧಿಕಾರಿಗಳು ಇದ್ದರು.