Advertisement
ಮಂಗಳೂರು ನಗರದಲ್ಲಿ ಪ್ರಮುಖ ಪಕ್ಷಗಳ ಕಾರ್ಯಕರ್ತರು ಸೇರಿದಂತೆ ಇತರ ಪಕ್ಷಗಳು ಕೂಡ ಪ್ರಚಾರಕ್ಕೆ ವೀಡಿಯೋ ಮೊರೆಹೋಗಿದ್ದಾರೆ. ವಿಪಕ್ಷದ ಅಭ್ಯರ್ಥಿಯನ್ನು ಮಣಿಸಲು ಅವರ ವೈಫಲ್ಯಗಳನ್ನೂ ವೀಡಿಯೋ ಮೂಲಕ ಹೇಳಲಾಗುತ್ತಿದೆ. ಇದಕ್ಕಾಗಿ ನಗರದ ವಿವಿಧ ಭಾಗಗಳಿಗೆ ಸಂಚರಿಸಿ ಜನರ ಮೂಲಭೂತ ಆವಶ್ಯಕತೆ ಗಳನ್ನು ನೀಡಲು ಉಂಟಾದ ವೈಫಲ್ಯಗಳನ್ನು ಚಿತ್ರೀಕರಿಸಿ, ಅಲ್ಲೊಂದಷ್ಟು ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಾಮಾಜಿಕ ಜಾಲತಾಣ ಬಳಕೆದಾರರ ಮುಂದಿಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ತಮ್ಮ ಪಕ್ಷದ ಅಭ್ಯರ್ಥಿಯ ಸಾಧನೆ, ಜನಪರ ಕಾರ್ಯ, ಕ್ರಿಯಾಶೀಲತೆಯನ್ನೂ ಜನರ ಮುಂದೆ ಬಿಂಬಿಸುವ ಕೆಲಸಗಳಾಗುತ್ತಿವೆ.
ವಿಶೇಷವೆಂದರೆ ಕನ್ನಡ ಚಲನಚಿತ್ರಗಳ ನಾಯಕರ ಮುಖಕ್ಕೆ ಸ್ಪರ್ಧಾನಿರತ ಅಭ್ಯರ್ಥಿಗಳ ಮುಖವನ್ನು ಮಾತ್ರ ಜೋಡಿಸಿ ಆ ನಾಯಕರು ಹೇಳಿದ ಡೈಲಾಗ್‌ಗಳನ್ನು ಅಭ್ಯರ್ಥಿಗಳೇ ಹೇಳಿದಂತೆ ಬಿಂಬಿಸುವ ಕೆಲಸವೂ ನಡೆಯುತ್ತಿದೆ. ಆ ಡೈಲಾಗ್‌ಗಳ ಮೂಲಕವೇ ಜನಮನವನ್ನು ತಲುಪುವ ಯೋಜನೆ ಕೆಲ ಪಕ್ಷಗಳ ಕಾರ್ಯ ಕರ್ತರದ್ದಾದರೂ ಇದೇ ವೀಡಿಯೋವನ್ನು ಬಳಸಿಕೊಂಡು ನಗೆಪಾಟಲಿಗೆಡೆ ಮಾಡಿ ಕೊಡುವಂತಹ ಬರಹಗಳನ್ನು ಬರೆದು ಪ್ರತಿಸ್ಪರ್ಧಿ ಪಕ್ಷದ ಕಾರ್ಯಕರ್ತರು ಹರಿಯ ಬಿಡುತ್ತಿದ್ದಾರೆ.
ಒಟ್ಟಿನಲ್ಲಿ ಚುನಾವಣಾ ಕಣ ಎಷ್ಟು ರಂಗೇರಿದೆ ಎಂದರೆ ಅಭ್ಯರ್ಥಿಗಳಷ್ಟೇ ಉತ್ಸಾಹದಲ್ಲಿ ಕಾರ್ಯಕರ್ತರೂ ಇದ್ದಾರೆ. – ಧನ್ಯಾ ಬಾಳೆಕಜೆ