Advertisement

ಸಾಲ ಮನ್ನಾ ಗೊಂದಲ ನಿವಾರಿಸುವಂತೆ ಪಟ್ಟು

06:10 AM Sep 25, 2018 | |

ಬೆಂಗಳೂರು: ರಾಜ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್‌) ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು ಇಲ್ಲವೇ ರೈತರಿಂದಲೇ ಸಾಲ ವಸೂಲಿ ಮಾಡಲು ಅವಕಾಶ ನೀಡುವಂತೆ ಬ್ಯಾಂಕ್‌ಗಳ ಅಧ್ಯಕ್ಷರು, ಸಚಿವ ಬಂಡೆಪ್ಪ ಕಾಶೆಂಪುರ ಅವರನ್ನು ಒತ್ತಾಯಿಸಿ ಪಟ್ಟುಹಿಡಿದ ಪ್ರಸಂಗ ಸೋಮವಾರ ನಡೆಯಿತು.

Advertisement

ನಗರದ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರ ರಾಜ್ಯಮಟ್ಟದ ಸಮ್ಮೇಳನದಲ್ಲಿ ಸಾಲ ಮನ್ನಾ ಬಗ್ಗೆ ಸಚಿವರು ಯಾವುದೇ ಘೋಷಣೆ ಮಾಡದಿರುವ ಬಗ್ಗೆ ತೀವ್ರ ಆಕ್ಷೇಪ ಕೂಡ ವ್ಯಕ್ತವಾಯಿತು.

ಬ್ಯಾಂಕ್‌ಗಳ ಅಧ್ಯಕ್ಷರು ಮಾತನಾಡಿ, ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್‌ ಘೋಷಿಸಿತ್ತು. ಈ ಬಗ್ಗೆ ಪ್ರಣಾಳಿಕೆಯಲ್ಲೂ ಭರವಸೆ ನೀಡಿತ್ತು. ಜೆಡಿಎಸ್‌ನಂತೆ ಇತರೆ ಪಕ್ಷಗಳು ಇದೇ ಭರವಸೆ ನೀಡಿದ್ದರಿಂದ ರೈತರು ಸಾಲ ಮರು ಪಾವತಿಸಿಲ್ಲ. ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿರುವ ಸರ್ಕಾರ, “ಪಿಕಾರ್ಡ್‌’ ಬ್ಯಾಂಕ್‌ಗಳ ಸಾಲ ಮನ್ನಾ ಮಾಡದೆ ತಾರತಮ್ಯ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಕೆಂಗಣ್ಣಿಗೆ ಗುರಿ
ರಾಜ್ಯ ಸರ್ಕಾರದ ಸಾಲ ಮನ್ನಾ ನೀತಿ ಗೊಂದಲ ಸೃಷ್ಟಿಸಿದೆ. ರೈತರಿಂದ ಸಾಲ ವಸೂಲಿ ಮಾಡುವಂತೆ ಸರ್ಕಾರ ಹೇಳುತ್ತಿದೆ. ಹಾಗೆಂದು ರೈತರ ಬಳಿಗೆ ಹೋದರೆ ಕೆಂಗಣ್ಣು ಬೀರುತ್ತಿದ್ದು, ಸಾಲ ಮರು ಪಾವತಿಸುತ್ತಿಲ್ಲ ಎಂದು ಅಹವಾಲು ತೋಡಿಕೊಂಡರು.

ರಾಜ್ಯದಲ್ಲಿರುವ 177 ಪಿಕಾರ್ಡ್‌ ಬ್ಯಾಂಕ್‌ಗಳ ಪೈಕಿ ಶೇ.70ರಷ್ಟು ಸಾಲ ಮರು ವಸೂಲಾತಿ ಮಾಡಿದ ಬ್ಯಾಂಕ್‌ಗಳಿಗಷ್ಟೇ ನಬಾರ್ಡ್‌ನಿಂದ ಸಾಲ ಒದಗಿಸುವ ನಿರ್ಬಂಧ ಸಡಿಲಿಸಬೇಕು. ಯಾವುದೇ ಷರತ್ತು ವಿಧಿಸದೆ ಶೇ.70ಕ್ಕಿಂತ ಕಡಿಮೆ ಸಾಲ ವಸೂಲಿ ಮಾಡಿರುವ ಬ್ಯಾಂಕ್‌ಗಳಿಗೂ ಸಮಾನವಾಗಿ ಸಾಲ ಸೌಲಭ್ಯ ಕಲ್ಪಿಸಬೇಕು. 96 ಬ್ಯಾಂಕ್‌ಗಳಷ್ಟೇ ಶೇ.70ರಷ್ಟು ಸಾಲ ಮರು ವಸೂಲಾತಿ ಮಾಡಿದ್ದು, ಉಳಿದ 81 ಬ್ಯಾಂಕ್‌ಗಳಿಗೆ ಶೇ.70ರಷ್ಟು ಸಾಲ ಮರು ವಸೂಲಾತಿ ಮಾಡಲು ಸಾಧ್ಯವಾಗಿಲ್ಲ ಎಂದು ಸಚಿವರ ಗಮನಕ್ಕೆ ತಂದರು.

Advertisement

ಬಳಿಕ ಸಚಿವರು ಭಾಷಣ ಆರಂಭಿಸಿದರೂ “ಪಿಕಾರ್ಡ್‌’ ಬ್ಯಾಂಕ್‌ಗಳ ಅಧ್ಯಕ್ಷರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಇದರಿಂದ ಬೇಸರಗೊಂಡ ಸಚಿವರು, ಸಂಪೂರ್ಣ ಸಾಲ ಮತ್ತು ಬಡ್ಡಿ ಮನ್ನಾ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿ ಮಾತನ್ನು ಮೊಟಕುಗೊಳಿಸಿದರು.

ಬ್ಯಾಂಕ್‌ನ ಅಧ್ಯಕ್ಷ ಕೆ.ಷಡಕ್ಷರಿ, ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಈವರೆಗೆ 2,280 ಕೋಟಿ ರೂ. ವಹಿವಾಟು ನಡೆಸಿದ್ದು, 1,728 ಕೋಟಿ ರೂ. ಸಾಲ ಬಾಕಿ ಇದೆ. ಕಳೆದ ವರ್ಷ ಶೇ.55ರಷ್ಟು ಸಾಲ ವಸೂಲಾಗಿದೆ. ಸುಮಾರು 492 ಕೋಟಿ ರೂ.ನಷ್ಟು ಸುಸ್ತಿ ಸಾಲವಿದ್ದು, ಇದರಲ್ಲಿ 200 ಕೋಟಿ ರೂ. ಅಸಲು ಹಾಗೂ 190 ಕೋಟಿ ರೂ.ನಷ್ಟು ಬಡ್ಡಿ ಇದೆ. ಹಾಗಾಗಿ ಸರ್ಕಾರ ನಮ್ಮ ಬ್ಯಾಂಕ್‌ಗಳ ಸಾಲ ಮನ್ನಾಗೆ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಸುಸ್ತಿ ಸಾಲ ಮನ್ನಾ ಮಾಡಬೇಕು ಇಲ್ಲವೇ ರೈತರು ಪಡೆದ ಸಾಲದ ಅಸಲಿನ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಇಲ್ಲದಿದ್ದರೆ ರೈತರು ಶೇ.12.5ರಷ್ಟು ಬಡ್ಡಿ ಪಾವತಿಸಬೇಕಾಗುವ ಸ್ಥಿತಿ ನಿರ್ಮಾಣವಾಗಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. 

ನಬಾರ್ಡ್‌ನಿಂದ ಮರು ಸಾಲಕ್ಕಾಗಿ ರಾಜ್ಯ ಸರ್ಕಾರಕ್ಕೆ ಬ್ಯಾಂಕ್‌ ಪಾವತಿಸಬೇಕಾದ ಶೇ.1ರಷ್ಟು ಖಾತರಿ ಕಮಿಷನ್‌ ಮನ್ನಾ ಮಾಡಬೇಕು. ಇಲ್ಲದಿದ್ದರೆ ಉತ್ತರ ಪ್ರದೇಶ, ಆಂಧ್ರ ಪ್ರದೇಶ ಇಲ್ಲವೇ ಕೇರಳ ಮಾದರಿಯಲ್ಲಿ ಖಾತರಿ ಕಮಿಷನ್‌ ಪ್ರಮಾಣವನ್ನು ಶೇ.0.25ರಿಂದ ಶೇ.0.5ರಷ್ಟಕ್ಕೆ ಇಳಿಸಬೇಕು ಎಂದು ಮನವಿ ಮಾಡಿದರು.

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎ.ಸಿ.ದಿವಾಕರ್‌, ನಬಾರ್ಡ್‌ನ ಮಹಾ ಮುಖ್ಯ ಪ್ರಬಂಧಕ ಸೂರ್ಯ ಕುಮಾರ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next