ವಿಜಯಪುರ: ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಅನುಕೂಲಕ್ಕಾಗಿ ಇಡಿ ರಾಜ್ಯದಲ್ಲೇ ಮೊದಲ ಬಾರಿಗೆ 700 ಬೆಡ್‌ಗಳ ಆಸ್ಪತ್ರೆ ಆರಂಭಿಸಿದ ಬಿಎಲ್‌ಡಿಇ ಸಂಸ್ಥೆಯ ಆಸ್ಪತ್ರೆಗೆ ಸರ್ಕಾರ ಅಗತ್ಯ ಆಕ್ಸಿಜನ್ ಕೂಡಾ ಪೂರೈಸುತ್ತಿಲ್ಲ ಎಂದು ಮಾಜಿ ಸಚಿವ, ಬಬಲೇಶ್ವರದ ಶಾಸಕ ಡಾ|ಎಂ.ಬಿ. ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ರೆಮ್‌ಡೆಸಿವಿಯರ್ ಔಷಧ ಹಂಚಿಕೆಯಾಗಿಲ್ಲ. ಆಕ್ಸಿಜನ್ ವಿಷಯದಲ್ಲೂ ಇದೇ ಸಮಸ್ಯೆ ಆಗಿದೆ. ಸುಪ್ರೀಂಕೋರ್ಟ್ ಉಪಕಾರದಿಂದ ನಮಗೆ ಆಕ್ಸಿಜನ್ ಸಿಗುತ್ತಿದೆ ಎಂದರು. ಈವರೆಗೆ ಕೇಂದ್ರ ಟಾಸ್ಕ್ ಫೋರ್ಸ್ ಸಭೆ ನಡೆಸಿ ಕೊರೊನಾ ನಿಯಂತ್ರಣ ಬಗ್ಗೆ ಗಂಭೀರ ಪ್ರಯತ್ನ ಮಾಡಿಲ್ಲ. ಕೊರೊನಾ ಎದುರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈಗ ಲಕ್ಷಾಂತರ ಜನ ಸಾಯುತ್ತಿದ್ದಾರೆ. ಇದಕ್ಕೆ ಹೊಣೆ ಯಾರು? ರಾಜ್ಯ ಸರಕಾರ ಮೂರನೇ ಅಲೆ ಕುರಿತು ಮಾತನಾಡುತ್ತಿದೆ. ಆದರೆ ಎರಡನೇ ಅಲೆ ತಡೆಯಲು ಆಗುತ್ತಿಲ್ಲ.ಕೇವಲ ಸುಳ್ಳು ಭರವಸೆ ನೀಡುತ್ತಿದೆ ಎಂದು ಟೀಕಿಸಿದರು.
ಉಸ್ತುವಾರಿ ಸಚಿವೆ ಹೆಣ್ಣು ಮಗಳಿದ್ದಾಳೆ. ಯಕ್ಸಂಬಾದಿಂದ ಬಂದು ಹೋದರೆ ಸಮಸ್ಯೆ ಬಗೆಹರಿಯಲ್ಲ. ಜಿಲ್ಲೆಯಲ್ಲಿ ಡೆತ್ ರೇಟ್ ಕಡಿಮೆ ಹೇಳುತ್ತಿದ್ದಾರೆ. ಸಾವಿಗಿಂತ ಕಡಿಮೆ ತೋರಿಸುತ್ತಿದ್ದಾರೆ. ಸಾವಿನ ಸತ್ಯ ಸಂಖ್ಯೆ ಹೇಳಿದರೆ ಸರಕಾರಕ್ಕೆ ಸಾವಿನ ಕೆಟ್ಟ ಹೆಸರು ಬರದಿರುವಂತೆ ಮಾಡುತ್ತಿದ್ದಾರೆ ಎಂದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಹಾಗೂ ಹಲವು ಬಡ ಜನರಿಗೆ ಅನುಕೂಲವಾಗಿರುವ ಇಂದಿರಾ ಕ್ಯಾಂಟೀನ್ ಪಾರ್ಸಲ್‌ನಿಂದ ಬದುಕುತ್ತಿದ್ದರು. ಅದನ್ನು ಬಂದ್ ಮಾಡಿ ವ್ಯವಸ್ಥೆ ಹದಗೆಡಿಸಿದ್ದಾರೆ. ಅನ್ನಭಾಗ್ಯ ತಡೆಯುವ ಹುನ್ನಾರ ನಡೆಸಿದ್ದಾರೆ.
ಬಿಪಿಎಲ್ ಕಾರ್ಡುದಾರರಿಗೆ ಕನಿಷ್ಠ ಆಂಧ್ರಪ್ರದೇಶ, ತಮಿಳುನಾಡು ಮಾದರಿಯಲ್ಲಿ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ನೋಟ್ ಪ್ರಿಂಟ್ ಮಾಡೋ ವಿಚಾರದಲ್ಲಿ ಹೇಳಿಕೆ ಸಚಿವ ನೀಡಿದ್ದ ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪಾಟೀಲ, ನೋಟ್ ಪ್ರಿಂಟ್ ಮಷೀನ್ ಇರಲಿಕ್ಕಿಲ್ಲ. ಆದರೆ, ನೋಟ್ ಎಣಿಸೊ ಮಷಿನ್ ಇರಬಹುದು . ಈಶ್ವರಪ್ಪ ನಿಮ್ಮ ಮಾತಿಗೆ ಲಗಾಮು ಇಲ್ಲ.ಉಡಾಫೆ ಮಾತನಾಡಿ ಜೀವ ತೆಗೆಯಬೇಡಿ ಎಂದರು.
200 ಆಕ್ಸಿಜನ್ ಬೆಡ್ ನಿರ್ಮಾಣ: ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಈಗಿರುವ 500 ಬೆಡ್‌ಗಳ ಜೊತೆ ಇನ್ನೂ 200 ಆಕ್ಸಿಜನ್ ಬೆಡ್ ನಿರ್ಮಾಣ ಮಾಡಲು ಕ್ರಮ ಕೈಗೊಂಡಿದ್ದು, ಸರ್ಕಾರ ಅಗತ್ಯ ಆಕ್ಸಿಜನ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು. ಈಗಾಗಲೇ 300 ಆಕ್ಸಿಜನ್ ಬೆಡ್‌ಗಳಿವೆ. ಮತ್ತೆ 200 ಹೊಸ ಆಕ್ಸಿಜನ್ ಬೆಡ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಆಸ್ಪತ್ರೆಗೆ ಬೇಕಾಗುವಷ್ಟು ಆಕ್ಸಿಜನ್ ಸರ್ಕಾರ ಕೊಡುತ್ತಿಲ್ಲ. ಆಕ್ಸಿಜನ್ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ಹೇಗೆ ಎಂದು ಪ್ರಶ್ನಿಸಿದರು.
ಜಿಲ್ಲೆಯ ಜನತೆಯ ಉಪಕಾರ ನಮ್ಮ ಕುಟುಂಬದ ಮೇಲಿದೆ. ಅದನ್ನು ತೀರಿಸುವ ಕೆಲಸ ಮಾಡುತ್ತಿದ್ದೇವೆ. 200 ಹೆಚ್ಚುವರಿ ಬೆಡ್ ನಿರ್ಮಾಣಕ್ಕೆ ಮುಂದಾಗಿದ್ದು, ಕೊವಿಡ್‌ಗಾಗಿ 700 ಬೆಡ್ ನಿರ್ಮಾಣ ಮಾಡಿದ ಆಸ್ಪತ್ರೆ, ಅದು ಇಡಿ ರಾಜ್ಯದಲ್ಲೇ ಬಿಡಿಎಲ್‌ಇ ಆಸ್ಪತ್ರೆ ಮಾತ್ರ. ಅಗತ್ಯ ಆಕ್ಸಿಜನ್ ನೀಡಿದರೆ ಇನ್ನೂ ಹೆಚ್ಚಿನ ಸೇವೆ ನೀಡಲು ಸಾಧ್ಯವಿದೆ ಎಂದರು.