Advertisement

ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ವಿಫಲರಾದಲ್ಲಿ ಅಧಿಕಾರಗಳೇ ಹೊಣೆ

04:01 PM Apr 01, 2017 | Team Udayavani |

ಕಾಪು: ಪುರಸಭಾ ವ್ಯಾಪ್ತಿಯ ಜನರು ಕುಡಿಯುವ ನೀರಿಗಾಗಿ ಬೇಡಿಕೆ ಇಟ್ಟಲ್ಲಿ ಅಧಿಕಾರಿಗಳು ಅದಕ್ಕೆ ತತ್‌ಕ್ಷಣವೇ ಸ್ಪಂದಿಸಬೇಕು. ಮತ್ತು ಅದನ್ನು ಸಮರ್ಪಕವಾಗಿ ನಿಭಾಯಿಸಬೇಕು. ಇಲ್ಲದಿದ್ದಲ್ಲಿ ಅದಕ್ಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಮಾ. 30ರಂದು ನಡೆದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಅವರು ಮಾತನಾಡಿದರು.

Advertisement

ಟ್ಯಾಂಕರ್‌ ಮೂಲಕ ನೀರು ಪೂರೈಸಿ
ಮೂಳೂರು ಹಾಗೂ ಮಲ್ಲಾರಿನಲ್ಲಿ ನೀರಿನ ಸಮಸ್ಯೆಯಿದೆ. ಮೂಳೂರಿನಲ್ಲಿ ಜಿ. ಪಂ. ಅನುದಾನದಲ್ಲಿ ನಿರ್ಮಿಸಿದ ಓವರ್‌ಹೆಡ್‌ ಟ್ಯಾಂಕ್‌ ಸೋರುತ್ತಿದೆ. ಅಧಿಕಾರಿಗಳಿಗೆ ತಿಳಿಸಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್‌ ಮೂಳೂರು ದೂರಿದರು. ಮಲ್ಲಾರಿನಲ್ಲಿ ನಳ್ಳಿ ನೀರಿನ ಸಂಪರ್ಕ ಇಲ್ಲದ ಕಡೆ ಟ್ಯಾಂಕರ್‌ ಮೂಲಕ ನೀರು ಪೂರೈಸುವಂತೆ ಸದಸ್ಯ ಇಮ್ರಾನ್‌ ಮನವಿ ಮಾಡಿದರು.

ಮುಖ್ಯಾಧಿಕಾರಿ ಅವರು ಜವಾಬ್ದಾರಿ
ಈ ಸಂದರ್ಭ ಮಾತನಾಡಿದ ಸೊರಕೆ ಅವರು ಪುರಸಭಾ ಸದಸ್ಯರು ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎನ್ನುತ್ತಾರೆ. ಅಧಿಕಾರಿಗಳು ನೀರಿನ ಸಮಸ್ಯೆಯಿಲ್ಲ ಎನ್ನುತ್ತಿದ್ದಾರೆ. ಕುಡಿಯುವ ನೀರಿನ ಬಗ್ಗೆ ಬಾಕಿಯಿರುವ ಕಾಮಗಾರಿಗಳನ್ನು ಆದ್ಯತೆಯಡಿಯಲ್ಲಿ ಕೂಡಲೇ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಈ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿ ಅವರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.

ಮುಖ್ಯಮಂತ್ರಿಗಳನ್ನೇ ಸ್ವಾಗತಿಸೋಣ 
ಕಾಪು ತಾಲೂಕು ರಚನೆಯ ಕುರಿತಾಗಿ ಆಡಳಿತ ಮತ್ತು ವಿಪಕ್ಷ ಸದಸ್ಯರಲ್ಲಿ ಚರ್ಚೆ ಏರ್ಪಟ್ಟಾಗ ಮಧ್ಯ ಪ್ರವೇಶಿಸಿದ ಶಾಸಕ ಸೊರಕೆ, ಎ. 22ರಂದು ಮುಖ್ಯಮಂತ್ರಿಯವರನ್ನೇ ಕಾಪುವಿಗೆ ಕರೆಯಿಸಿ ತಾಲೂಕು ಘೋಷಣೆ ಮಾಡುವಂತೆ ಮನವಿ ಮಾಡಲಾಗಿದೆ. ಅವರ ಕಾರ್ಯಕ್ರಮ ಇನ್ನೂ ನಿಗದಿಯಾಗಿಲ್ಲ. ಆಡಳಿತ ಮತ್ತು ವಿಪಕ್ಷ ಸದಸ್ಯರೆಲ್ಲರೂ ಒಂದಾಗಿ ಮುಖ್ಯಮಂತ್ರಿಯವರನ್ನು ಸ್ವಾಗತಿಸೋಣ. ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಮೂರು ಸಾವಿರ ಜನರಿಗೆ ಹಕ್ಕುಪತ್ರ ನೀಡಲಾಗುವುದು ಎಂದರು.

ತಾರತಮ್ಯವಿಲ್ಲದೇ ಕಾರ್ಯನಿರ್ವಹಿಸಿ
ಗತ ಸಭೆಯ ಪ್ರಸ್ತಾವನೆಗಳನ್ನು ಕಾರ್ಯಸೂಚಿಯಲ್ಲಿ ಸರಿಯಾಗಿ ದೃಢೀಕರಿಸಬೇಕು. ಎಸ್‌.ಎಫ್‌.ಸಿ ಅನುದಾನ ಬಳಕೆಯ ಬಗ್ಗೆ ವಿಪಕ್ಷದವರನ್ನು ಕಡೆಗಣಿಸಲಾಗಿದೆ. ಯೋಜನೆಯ ರೂಪುರೇಷೆಗಳ ಬಗ್ಗೆ ಸೂಕ್ತ ಚರ್ಚೆ ನಡೆದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ವಿರೋಧ ಪಕ್ಷದವರನ್ನು ಕಡೆಗಣಿಸುವ ಬದಲು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಗಳನ್ನು ನಡೆಸಬೇಕು. ವಿರೋಧ ಪಕ್ಷದವರ ಮೌನವನ್ನು ಯಾರೂ ಕೂಡಾ ದೌರ್ಭಾಗ್ಯವೆಂದು ಭಾವಿಸದಿರಿ ಎಂದು ವಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು ಹೇಳಿದರು.

Advertisement

ಇದಕ್ಕೆ ಉತ್ತರಿಸಿದ ಪುರಸಭಾಧ್ಯಕ್ಷೆ ಸೌಮ್ಯ, ಅನುದಾನದಲ್ಲಿ ಯಾವುದೇ ರೀತಿಯಲ್ಲೂ ತಾರತಮ್ಯ ಮಾಡಿಲ್ಲ. ಎಂಜಿನಿಯರ್‌ಗಳು ಎಲ್ಲಾ ವಾರ್ಡ್‌ಗಳಲ್ಲೂ ಸದಸ್ಯರ ಗಮನಕ್ಕೆ ತಂದು ಕಾಮಗಾರಿಗಳನ್ನು ಗುರುತಿಸಿದ್ದಾರೆ ಎಂದರು.

ಮಳೆಗಾಲಕ್ಕೆ ಮುನ್ನ ಹೂಳೆತ್ತುವಿಕೆ
ಪುರಸಭೆ ವ್ಯಾಪ್ತಿಯಲ್ಲಿ ದಾರಿದೀಪ, ಬೋರ್‌ವೆಲ್‌ ಹಾಗೂ ಬಾವಿಗಳ ನೀರು ಸರಬರಾಜಿಗೆ ಸುಮಾರು 7 ಲಕ್ಷ ರೂ. ವಿದ್ಯುತ್‌ ಬಿಲ್‌ ಬರುತ್ತಿದೆ. ವಿದ್ಯುತ್‌ ಬಿಲ್‌ ಪಾವತಿಗೆ ಯಾವುದೇ ತೊಂದರೆ ಇಲ್ಲ. ಕಾಪು ಪೇಟೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಳೆಗಾಲಕ್ಕೆ ಮುಂಚಿತವಾಗಿ ಚರಂಡಿ ಹಾಗೂ ತೋಡುಗಳ ಹೂಳೆತ್ತಲಾಗುವುದು ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದರು.

ಸಮಾನ ಕಾನೂನು ಇರಲಿ: ಒತ್ತಾಯ
ಕಾಪು ತಾಲೂಕು ಘೋಷಣೆಗೆ ಸಂಬಂಧಿಸಿದಂತೆ ಶಾಸಕರ ಅಭಿನಂದನಾ ಸಮಾರಂಭದ ಬಳಿಕ ಕಾಪು ಪೇಟೆಯಲ್ಲಿ ಕಸ ಉಳಿದಿತ್ತು. ನಿಯಮವನ್ನು ಮುರಿದು ಎಲ್ಲೆಂದರಲ್ಲಿ ಬ್ಯಾನರ್‌ ಅಳವಡಿಸಲಾಗಿದ್ದು, ಇದು ಆಡಳಿತ ಪಕ್ಷದ ಬೇಜವಾಬ್ದಾರಿಯಾಗಿದೆ. ಬ್ಯಾನರ್‌ ಅಳವಡಿಕೆಗೆ ಎಲ್ಲರಿಗೂ ಸಮಾನ ಕಾನೂನು ಇರಲಿ ಎಂದು ಒತ್ತಾಯಿಸಿದ ವಿಪಕ್ಷ ಸದಸ್ಯ ಅನಿಲ್‌ ಕುಮಾರ್‌ ಆಡಳಿತಾಧಿಕಾರಿಯವರಿಗೂ ಈ ಬಗ್ಗೆ ಕ್ರಮ ಕೈಗೊಳ್ಳದಂತೆ ಒತ್ತಡ ಇತ್ತೋ ಏನೋ ಎಂದು ಆತಂಕ ವ್ಯಕ್ತ ಪಡಿಸಿದರು.

ಸಮ್ಮಾನ
ಪುರಸಭೆಯ ಅಧ್ಯಕ್ಷೆ  ಸೌಮ್ಯಾ ಅಧ್ಯಕ್ಷತೆ ವಹಿಸಿದ್ದರು. ಕಾಪು ತಾಲೂಕು ಘೋಷಣೆಯಲ್ಲಿ ಮುತುವರ್ಜಿ ವಹಿಸಿದ ಮಾಜಿ ಸಚಿವ/ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಅವರನ್ನು ಸಮ್ಮಾನಿಸಿ ಅಭಿನಂದಿಸಲಾಯಿತು.

ಪುರಸಭೆ ಉಪಾಧ್ಯಕ್ಷ ಕೆ. ಎಚ್‌. ಉಸ್ಮಾನ್‌, ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್‌ ಹಮೀದ್‌, ಇಲಾಖಾಧಿಕಾರಿಗಳು, ಪುರಸಭಾ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಸಿಬಂದಿ ವರ್ಗ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next