Advertisement

Politics: ವಿಫ‌ಲ, ಅಸಹಾಯಕ ರಾಜ್ಯ ಸರಕಾರ: ಶ್ರೀನಿವಾಸ ಪೂಜಾರಿ

11:28 PM Dec 29, 2023 | Team Udayavani |

ಮಂಗಳೂರು: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಆಡಳಿತದಲ್ಲಿ ವಿಫ‌ಲವಾಗಿದ್ದು ಅಸಹಾಯಕವಾಗಿದೆ. ವಿಪಕ್ಷಗಳ ಯಾವುದೇ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲು ಸಾಧ್ಯವಾಗಿಲ್ಲ. ಸರಕಾರದ ವೈಫ‌ಲ್ಯಗಳನ್ನು ಬಿಜೆಪಿ ಜನರ ಮುಂದಿಡಲಿದೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ದ.ಕ. ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಬರ ಪರಿಹಾರ, ಕಾನೂನು ಸುವ್ಯವಸ್ಥೆ, ಶಿಕ್ಷಣ, ಕುಡಿಯುವ ನೀರು ಮೊದಲಾದವುಗಳಲ್ಲಿ ಸರಕಾರ ವಿಫ‌ಲವಾಗಿದೆ. ಪ್ರತೀ ವಿಚಾರಕ್ಕೂ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಸಮೃದ್ಧ, ಸ್ವಾಭಿಮಾನಿ ಭಾರತಕ್ಕಾಗಿ ಕೇಂದ್ರ ಸರಕಾರ ಮಾಡುತ್ತಿರುವ ಕೆಲಸಗಳಿಗೆ ಪೂರಕವಾಗಿ ರಾಜ್ಯ ಸರಕಾರ ಹೆಜ್ಜೆ ಹಾಕುತ್ತಿಲ್ಲ ಎಂದರು.

54 ಲಕ್ಷ ರೈತರಿಗೆ ಅನ್ಯಾಯ
ಅರ್ಜಿ ಹಾಕದೆಯೇ ದೇಶದ 11 ಕೋಟಿ ಹಾಗೂ ರಾಜ್ಯದ 54 ಲಕ್ಷ ರೈತರಿಗೆ ಪ್ರತೀ ವರ್ಷ ಕೇಂದ್ರ ಸರಕಾರ “ಕಿಸಾನ್‌ ಸಮ್ಮಾನ್‌’ನಲ್ಲಿ ಪ್ರತೀ ವರ್ಷ 6 ಸಾವಿರ ರೂ. ನೀಡುತ್ತಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಿಂದ 4 ಸಾವಿರ ರೂ. ಸೇರಿಸಿ ಒಟ್ಟು 10 ಸಾವಿರ ರೂ. ದೊರೆಯುವಂತೆ ಮಾಡಿದ್ದರು. ಆದರೆ ಸಿದ್ದರಾಮಯ್ಯ 4 ಸಾವಿರ ರೂ.ಗಳನ್ನು ಕಡಿತಗೊಳಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ಬರಪರಿಹಾರಕ್ಕೆ ಕೇಂದ್ರದ ಶೇ. 75ರಷ್ಟು ಹಣ

ಬರದಿಂದ ರಾಜ್ಯದಲ್ಲಿ 33 ಸಾವಿರ ಕೋ.ರೂ. ನಷ್ಟವಾಗಿದೆ. 48 ಲಕ್ಷ ಹೆಕ್ಟೇರ್‌ ಭೂಮಿ ಒಣಗಿ ಹೋಗಿದೆ. 46 ಲಕ್ಷ ರೈತ ಕುಟುಂಬಗಳು ಕಂಗಾಲಾಗಿವೆ. ಬರ ಪರಿಹಾರಕ್ಕೆ ರಾಜ್ಯ ಸರಕಾರ 10 ಸಾವಿರ ಕೋ.ರೂ. ಬಿಡುಗಡೆ ಮಾಡಲಿ. ಅನಂತರ ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರದಿಂದ ಹಣ ಕೇಳಬಹುದು. ಒಟ್ಟಾಗಿ ಪ್ರತೀ ಹೆಕ್ಟೇರ್‌ಗೆ 25 ಸಾವಿರ ರೂ. ಪರಿಹಾರ ನೀಡಬಹುದು ಎಂಬುದು ಬಿಜೆಪಿ ನಿಲುವು. ಆದರೆ ರಾಜ್ಯ ಸರಕಾರ ಕೇಂದ್ರದ ಕಡೆ ಬೆರಳು ತೋರಿಸುತ್ತಿದೆ. ಬರ ಪರಿಹಾರಕ್ಕೆ ಬಿಡುಗಡೆಯಾಗಿರುವ 324 ಕೋ.ರೂ.ಗಳಲ್ಲಿ ಶೇ. 75 ಕೇಂದ್ರ ಸರಕಾರದ್ದು ಎಂದು ಪೂಜಾರಿ ತಿಳಿಸಿದರು.

Advertisement

ಯುವನಿಧಿ ಕಡಿತ
ಪದವೀಧರ ನಿರುದ್ಯೋಗಿಗಳಿಗೆ ಯುವನಿಧಿ ಗ್ಯಾರಂಟಿ ಯೋಜನೆಯಡಿ ಮಾಸಿಕ 3 ಸಾವಿರ ರೂ. ನೀಡುವುದಾಗಿ ಕಾಂಗ್ರೆಸ್‌ನವರು ಚುನಾವಣೆ ಸಂದರ್ಭ ಹೇಳಿದ್ದರು. ಅದರಂತೆ 40 ಲಕ್ಷ ಪದವೀಧರರಿಗೆ ಯುವನಿಧಿ ಸಿಗಬೇಕಿತ್ತು. ಆದರೆ ಈಗ 2022-23ನೇ ಸಾಲಿನ ಪದವೀಧರರಿಗೆ ಮಾತ್ರ ಯುವನಿಧಿ ನೀಡಲಾಗುವುದು ಎನ್ನುತ್ತಿದ್ದಾರೆ. ಅಗ 4 ಲಕ್ಷ ಪದವೀಧರರಿಗೆ ಮಾತ್ರ ಯುವನಿಧಿ ಸಿಗಲಿದೆ. 10,500 ಕೋ.ರೂ. ಯೋಜನೆಯನ್ನು ಕೇವಲ 600 ಕೋ.ರೂ.ಗಳಿಗೆ ಸೀಮಿತಗೊಳಿಸಲಾಗಿದೆ ಎಂದು ದೂರಿದರು.

ಮೀಸಲು ಹಣ ಗ್ಯಾರಂಟಿಗೆ
ಪರಿಶಿಷ್ಟ ಜಾತಿ/ ಪಂಗಡದವರ ಶಿಕ್ಷಣ, ಆರೋಗ್ಯ, ವಸತಿ ಮೊದಲಾದವುಗಳಿಗೆ ಬಜೆಟ್‌ನಲ್ಲಿ ಮೀಸಲಿಡಲಾಗಿದ್ದ 34 ಸಾವಿರ ಕೋ.ರೂ.ಗಳಲ್ಲಿ 11,500 ಕೋ.ರೂ.ಗಳನ್ನು ಗ್ಯಾರಂಟಿಗೆ ನೀಡಲಾಗಿದೆ. ಈ ಹಣದ ಕೊರತೆಯನ್ನು ತುಂಬಿಸುವುದು ಹೇಗೆಂಬ ಪ್ರಶ್ನೆಗೂ ಸರಕಾರ ಉತ್ತರ ನೀಡುತ್ತಿಲ್ಲ ಎಂದು ಪೂಜಾರಿ ಹೇಳಿದರು.

ಬಡವರ ಮಕ್ಕಳಿಗೆ ಎಸ್‌ಇಪಿ
ಡಿ.ಕೆ. ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ. ಪಾಟೀಲ್‌, ಪರಮೇಶ್ವರ ಅವರು ನಡೆಸುತ್ತಿರುವ ಶಾಲೆಗಳಲ್ಲಿ ಎನ್‌ಇಪಿ (ನೂತನ ಶಿಕ್ಷಣ ನೀತಿ) ಜಾರಿಗೆ ತರಲಾಗಿದೆ. ಆದರೆ ಬಡವರ ಮಕ್ಕಳು ಕಲಿಯುವ ಸರಕಾರಿ ಶಾಲೆಗಳಲ್ಲಿ ಎಸ್‌ಇಪಿ ಮಾತ್ರ ಇದೆ. ರಾಜ್ಯದ 48 ಸಾವಿರ ಸರಕಾರಿ ಶಾಲೆಗಳು ಎನ್‌ಇಪಿ ಶಿಕ್ಷಣದಿಂದ ವಂಚಿತವಾಗಿವೆ ಎಂದು ಪೂಜಾರಿ ಹೇಳಿದರು.

ಕಾನೂನು ಸುವ್ಯವಸ್ಥೆ ಇಲ್ಲ
ರಾಜ್ಯ ಸರಕಾರ ಕಲ್ಲಡ್ಕ ಪ್ರಭಾಕರ ಭಟ್‌, ಪ್ರತಾಪಸಿಂಹ ಅವರನ್ನು ಬಂಧಿಸುವುದರಲ್ಲೇ ಮುಳುಗಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುತ್ತಿಲ್ಲ. ಕೇಂದ್ರ ಸರಕಾರ 6.50 ಲಕ್ಷ ಗ್ರಾ.ಪಂ.ನಲ್ಲಿ ವಿಕಸಿತ ಭಾರತ ಕಾರ್ಯಕ್ರಮ ನಡೆಸುತ್ತಿದೆ. ಹಲವಾರು ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಜಗತ್ತು ಭಾರತದ ಕಡೆಗೆ ನೋಡುವ ವಾತಾವರಣ ನಿರ್ಮಾಣವಾಗಿದೆ. ಸಮೃದ್ಧ, ಸ್ವಾಭಿಮಾನಿ ಭಾರತ ನಿರ್ಮಾಣಕ್ಕೆ ಮೋದಿಯವರ ಸರಕಾರ ಮತ್ತೂಮ್ಮೆ ಬರಬೇಕೆಂಬ ಹಂಬಲಕ್ಕೆ ಒತ್ತುಕೊಟ್ಟು ಬಿಜೆಪಿ ರಾಷ್ಟ್ರದಾದ್ಯಂತ ಸಂಘಟನಾತ್ಮಕ ಚಟುವಟಿಕೆ ನಡೆಸುತ್ತಿದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ನಿತಿನ್‌ ಕುಮಾರ್‌, ರಾಮದಾಸ್‌ ಬಂಟ್ವಾಳ, ಎಸ್‌ಸಿ/ಎಸ್‌ಟಿ ಮೋರ್ಚಾದ ಆರ್‌.ಸಿ. ನಾರಾಯಣ, ಕಾರ್ಯದರ್ಶಿ ಸತೀಶ್‌ ಕುಂಪಲ ಪತ್ರಿಕಾಗೋಷ್ಠಿಯಲ್ಲಿದ್ದರು.

ಯತ್ನಾಳ್‌ ವಿರುದ್ಧ ವರಿಷ್ಠರಿಂದ ಕ್ರಮ
ಬಸನಗೌಡ ಪಾಟೀಲ್‌ ಯತ್ನಾಳ್‌ ಮೇಲೆ ಪಕ್ಷ ಕ್ರಮ ಕೈಗೊಳ್ಳಲಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪೂಜಾರಿ ಅವರು, ಯತ್ನಾಳ್‌ ವಿಚಾರ ಕೇಂದ್ರದ ವರಿಷ್ಠರ ಮುಂದೆ ಇದೆ. ಅವರು ಸರಿಯಾದ ಕ್ರಮ ತೆಗೆದುಕೊಳ್ಳಲಿದ್ದಾರೆ. ಸದ್ಯದಲ್ಲೇ ಸಮಸ್ಯೆ ಪರಿಹಾರವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next