Advertisement
ಒಂದೆಡೆ ಕ್ರೀಸಿಗೆ ಫೆವಿಕಾಲ್ ಹಾಕಿದಂತೆ ಅಂಟಿಕೊಂಡು ನಿಂತಿದ್ದ ಆರಂಭಕಾರ, ದಕ್ಷಿಣ ಆಫ್ರಿಕಾದ ಟಿ20 ನಾಯಕ ಫಾ ಡು ಪ್ಲೆಸಿಸ್ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಪಂದ್ಯ ಅಂತಿಮ ಓವರಿನತ್ತ ಮುಖ ಮಾಡಿದಾಗ ಚೆನ್ನೈ ಗೆಲುವಿಗೆ ಅಗತ್ಯವಿದ್ದದ್ದು ಆರೇ ರನ್. ಭುವನೇಶ್ವರ್ ಕುಮಾರ್ ಅವರ ಮೊದಲ ಎಸೆತವನ್ನೇ ನೇರವಾಗಿ ಸಿಕ್ಸರ್‌ಗೆ ಬಡಿದಟ್ಟಿದ ಡು ಪ್ಲೆಸಿಸ್ ಚೆನ್ನೈಗೆ ನಂಬಲಾಗದ ಗೆಲುವನ್ನು ತಂದಿತ್ತರು; ಖಚಿತ ಗೆಲುವಿನ ನಿರೀಕ್ಷೆಯಲ್ಲಿದ್ದ ಹೈದರಾಬಾದ್‌ಗೆ ನಂಬಲಾಗದ ಸೋಲನ್ನು ಕಾಣುವುದು ಅನಿವಾರ್ಯವಾಯಿತು!
ಇದೊಂದು ಪರಿಪಕ್ವ ಇನ್ನಿಂಗ್ಸ್, ಅನುಭವದ ಆಟ ಎಂಬುದಾಗಿ ಡು ಪ್ಲೆಸಿಸ್ ಸಾಹಸವನ್ನು ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಬಣ್ಣಿಸಿದ್ದಾರೆ.
“ಇದೊಂದು ಪಕ್ಕಾ ಅನುಭವದ ಇನ್ನಿಂಗ್ಸ್. ಕೂಟದಲ್ಲಿ ಹೆಚ್ಚು ಪಂದ್ಯ ಆಡದೇ ಇರುವಾಗ ಇಂಥದೊಂದು ಇನ್ನಿಂಗ್ಸ್ ಕಟ್ಟುವುದು ಸುಲಭವಲ್ಲ. ಇದಕ್ಕೆ ಮಾನಸಿಕ ಸಿದ್ಧತೆ ಅತ್ಯಗತ್ಯ. ಆಗಲೇ ಅನುಭವವನ್ನು ಧಾರೆ ಎರೆಯಲು ಸಾಧ್ಯ. ಡು ಪ್ಲೆಸಿಸ್ ಆಟ ನಿಜಕ್ಕೂ ಅದ್ಭುತ…’ ಎಂದು ಧೋನಿ ಪ್ರಶಂಸಿಸಿದರು. ಫೈನಲ್ ಪ್ರವೇಶ: ಧೋನಿ ಖುಷಿ
“ಗೆಲುವು ಯಾವತ್ತೂ ಹೆಚ್ಚಿನ ಸಂತಸ ಕೊಡುತ್ತದೆ. ಲೀಗ್ ಹಂತದಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದುದರಿಂದ ಒಂದು ಹೆಚ್ಚಿನ ಪಂದ್ಯವಾಡುವ ಅವಕಾಶ ನಮಗೆ ಲಭಿಸಿತು. ಇಲ್ಲಿ ಸೋತದ್ದಿದ್ದರೆ ಇನ್ನೊಂದು ಅವಕಾಶ ಲಭಿಸುತ್ತಿತ್ತು ನಿಜ. ಆದರೆ ನೇರವಾಗಿ ಫೈನಲ್ ಪ್ರವೇಶಿಸುವ ಖುಷಿಯೇ ಬೇರೆ. ಹೈದರಾಬಾದ್ ಬೌಲಿಂಗ್ ಅತ್ಯಂತ ಘಾತಕವಾಗಿತ್ತು. ಭುವಿ ಅಮೋಘ ದಾಳಿ ನಡೆಸುತ್ತಿದ್ದರು. ಅಲ್ಲದೇ ರಶೀದ್ ರೂಪದಲ್ಲಿ ಮಿಸ್ಟರಿ ಬೌಲರ್ ಕೂಡ ಇದ್ದರು. ಮಧ್ಯಮ ಹಂತದಲ್ಲಿ ಬೆನ್ನು ಬೆನ್ನಿಗೆ 3-4 ವಿಕೆಟ್ ಉರುಳಿದಾಗ ಒತ್ತಡವನ್ನು ನಿಭಾಯಿಸಿ ನಿಲ್ಲುವುದು ಕಷ್ಟ. ಆದರೆ ಡು ಪ್ಲೆಸಿಸ್ ಬ್ಯಾಟಿಂಗ್ ನಮಗೆ ಪ್ಲಸ್ ಆಗಿ ಪರಿಣಮಿಸಿತು…’ ಎಂದು ಧೋನಿ ಹೇಳಿದರು.
Related Articles
ಬ್ಯಾಟಿಂಗ್ ವೈಫಲ್ಯವೇ ತಂಡದ ಸೋಲಿಗೆ ಮುಖ್ಯ ಕಾರಣ ಎಂಬುದು ಸನ್‌ರೈಸರ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅಭಿಪ್ರಾಯ. “ಇದೊಂದು ಬ್ಯಾಟಿಂಗ್ ಯೋಗ್ಯ ಟ್ರ್ಯಾಕ್ ಕೂಡ ಆಗಿತ್ತು. ನಾವು ಹೆಚ್ಚುವರಿಯಾಗಿ ಇನ್ನೂ 20 ರನ್ನಾದರೂ ಮಾಡಬೇಕಿತ್ತು. ಬೌಲರ್‌ಗಳ ಸಾಧನೆ ಅಮೋಘ. ಆಗ ಪಂದ್ಯ ನಮ್ಮ ಕಡೆಗೇ ಇತ್ತು. ಆದರೆ ಕೊನೆಯ ಹಂತದಲ್ಲಿ ಎಡವಿದೆವು’ ಎಂದರು.
Advertisement
“ತಂಡದ ಕೀ ಬೌಲರ್ ಭುವೆನೇಶ್ವರ್ ಕುಮಾರ್ ಪವರ್-ಪ್ಲೇ ಅವಧಿಯಲ್ಲಿ 3 ಓವರ್ ಮುಗಿಸಿದ್ದರಿಂದ ಸಿದ್ಧಾರ್ಥ್ ಕೌಲ್ ಮತ್ತು ಕಾರ್ಲೋಸ್ ಬ್ರಾತ್‌ವೇಟ್ ಡೆತ್ ಓವರ್‌ಗಳಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಯಿತು. ಸಾಮಾನ್ಯವಾಗಿ ಡೆತ್ ಓವರ್‌ಗಳಲ್ಲಿ ಮೇಲುಗೈ ಸಾಧಿಸುವ ನಾವು ಇಲ್ಲಿ ಎಡವಿದೆವು. ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಹೋರಾಡುವುದು ಮುಖ್ಯ. ಪಂದ್ಯದ ಶ್ರೇಯಸ್ಸು ಡು ಪ್ಲೆಸಿಸ್ ಅವರಿಗೆ ಸಲ್ಲುತ್ತದೆ…’ ಎಂಬುದಾಗಿ ಕೇನ್ ವಿಲಿಯಮ್ಸನ್ ಹೇಳಿದರು.