ಮಹಾನಗರ: ವಾಹನಗಳ ವೇಗ ನಿಯಂತ್ರಣದ ಜತೆಗೆ ರಸ್ತೆ ಅಪಘಾತ ತಪ್ಪಿಸಲೆಂದು ಮಂಗಳೂರು ನಗರದ ವಿವಿಧ ಕಡೆಗಳಲ್ಲಿ ರೋಡ್ ಹಂಪ್ಸ್ ಅಳವಡಿಸಲಾಗಿದ್ದು, ಇದೀಗ ಬಹುತೇಕ ಕಡೆಗಳಲ್ಲಿ ರಸ್ತೆ ಹಂಪ್ಸ್‌ಗೆ ಬಳಿದ ಬಣ್ಣ ಮಾಸಿದೆ. ಮಳೆ ಬಿರುಸು ಕಡಿಮೆಯಾದ ಕೂಡಲೇ ಆದ್ಯತೆ ಮೇರೆಗೆ ರಸ್ತೆ ಹಂಪ್ ಗಳಿಗೆ ಬಣ್ಣ ಹಾಕುವ ಕೆಲಸ ಆರಂಭವಾಗಬೇಕಿದೆ.
ರಸ್ತೆ ಉಬ್ಬಿನ ಮೇಲೆ ಸ್ಕೂಟರ್ ಹಾರಿಬಿದ್ದು, ಸಹ ಸವಾರ ಮೃತಪಟ್ಟ ಘಟನೆ ಕೆಲವು ದಿನಗಳ ಹಿಂದೆಯಷ್ಟೇ ಸಂಭವಿಸಿದೆ. ಹಂಪ್‌ಗಳಲ್ಲಿ ಬಣ್ಣ ಮಾಸಿದ ಕಾರಣ, ಸಂಚಾರದ ವೇಳೆ ತತ್‌ಕ್ಷಣಕ್ಕೆ ಅವುಗಳು ಗಮನಕ್ಕೆ ಬಾರದೆ ಈ ರೀತಿಯ ಘಟನೆ ಉಂಟಾಗುತ್ತದೆ.
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ, ಬಲ್ಲಾಳ್‌ಬಾಗ್, ಉರ್ವಸ್ಟೋರ್, ಕೊಟ್ಟಾರ, ಕಾಪಿಕಾಡ್ ಸಹಿತ ನಗರದ ವಿವಿಧ ಕಡೆಗಳಲ್ಲಿ ಅಳವಡಿಸಿದ ಹಂಪ್‌ಗ್ಳಲ್ಲಿ ಬಣ್ಣ ಮರೆಯಾಗಿದೆ. ಹಾಗಾಗಿ ರಾತ್ರಿ ಹೊತ್ತಿನಲ್ಲಿ ಸಂಚರಿಸುವವರಿಗೆ ಅಪಾಯ ಉಂಟಾಗುವ ಸಂಭವವಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಸಂಚಾರ ಕಷ್ಟಕರವಾಗಿದೆ.
ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ಉಬ್ಬುಗಳಿಗೆ ಬಣ್ಣ ಬಳಿಯುವ ಕೆಲಸವನ್ನು ಸ್ಥಳೀಯಾಡಳಿತ ಮಾಡಬೇಕಿತ್ತು. ಆದರೆ ಹಲವು ಕಡೆಗಳಲ್ಲಿನ ಹಂಪ್ಸ್ ಕೆಲವು ವರ್ಷಗಳಿಂದ ಬಣ್ಣವನ್ನೇ ಕಂಡಿಲ್ಲ.
ಅಪಘಾತಕ್ಕೆ ಕಾರಣವಾಗುತ್ತಿದ್ದ ಬಹುತೇಕ ರಬ್ಬರ್ ಹಂಪ್‌ಗ್ಳನ್ನು ಸದ್ಯ ತೆರವು ಮಾಡಲಾಗಿದೆ. ಕೆಲವೆಡೆ ಹೊಸ ಹಂಪ್ಸ್ ನಿರ್ಮಾಣವಾದರೆ ಇನ್ನೂ ಕೆಲವೆಡೆ ನಿರ್ಮಿಸಬೇಕಷ್ಟೆ.
ಝೀಬ್ರಾ ಕ್ರಾಸ್: ಬಣ್ಣ ಮಾಯ
ಪಾದಚಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಮುಖ ಜಂಕ್ಷನ್‌ಗಳಲ್ಲಿ, ಅತೀ ಹೆಚ್ಚು ಜನ ಸೇರುವ ಕಡೆಗಳಲ್ಲಿ ಝೀಬ್ರಾ ಕ್ರಾಸ್ ಅನ್ನು ಅಳವಡಿಸಲಾಗಿದೆ. ಆದರೆ ಬಹುತೇಕ ಕಡೆ ಝೀಬ್ರಾ ಕ್ರಾಸ್‌ಗಳ ಬಣ್ಣ ಮಾಸಿದೆ. ಇದರಿಂದ ಸಿಗ್ನಲ್‌ಗಳಲ್ಲಿ ವಾಹನಗಳನ್ನು ನಿಲ್ಲಿಸಲು, ಸಾರ್ವಜನಿಕರು ರಸ್ತೆ ದಾಟಲು ಕಷ್ಟಪಡುವಂತಾಗಿದೆ. ಕೆಲವು ವಾಹನಗಳು ಝೀಬ್ರಾ ಕ್ರಾಸ್‌ನಲ್ಲೇ ನಿಲ್ಲುತ್ತಿದೆ.