Advertisement
ಕಳೆದ ರಾತ್ರಿ ಸಮಯದಲ್ಲಿ ಸಕ್ಕರೆ ಕಾರ್ಖಾನೆಯಿಂದ ರೈತರ ಜಮೀನುಗಳಿಗೆ ಕಲುಷಿತ ನೀರು ಹರಿಬಿಟ್ಟದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಕೆಲವು ರೈತರು ರೇಣುಕಾ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕಲುಷಿತ ನೀರನ್ನು ನಮ್ಮ ಜಮೀನುಗಳಿಗೆ ಹರಿಸಿದ ಪರಿಣಾಮ ವಿಷಪೂರಿತ ವಾತಾವರಣ ನಿರ್ಮಾಣವಾಗಿದೆ. ಅಥಣಿ ತಹಶೀಲ್ದಾರ್ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕೋಡಿ ಅಧಿಕಾರಿಗಳಿಗೆ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಿದರೂ ಯಾವುದಕ್ಕೂ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಈ ವಿಷಪೂರಿತ ನೀರಿನಿಂದ ಕೃಷಿ ಜಮೀನುಗಳ ಬಾವಿಯಲ್ಲಿದ್ದ ಸಾವಿರಾರು ಮೀನುಗಳು ಸಾವಿಗೀಡಾಗಿವೆ. ಈ ನೀರಿನಿಂದ ಜಾನುವಾರು ಸಾವು ಸಂಭವಿಸಿದೆ.
Related Articles
Advertisement
ಶುದ್ಧ ನೀರು ಕಪ್ಪು ಬಣ್ಣಕ್ಕೆ ತಿರುಗಿ ಕುಡಿಯುವ ಹಾಗೂ ದಿನನಿತ್ಯದ ಬಳಕೆ ಮಾಡೋದಕ್ಕೆ ಬರುತ್ತಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು. ರೈತರು ಪ್ರತಿಭಟನೆ ನಡೆಸಿದರೂ ರೇಣುಕಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ. ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಹಾನಿಗೆ ಒಳಗಾಗಿರುವ ರೈತರಿಗೆ ನ್ಯಾಯ ಒದಗಿಸಬೇಕು ಮತ್ತು ಕಾನೂನು ಉಲ್ಲಂಘಿಸಿದ ಕಾರ್ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.