Advertisement

ಮತದಾರರ ಪಟ್ಟಿಯಲ್ಲಿ ಕಾರ್ಖಾನೆ ನೌಕರರು-ಬ್ಯಾಂಕ್‌ ಸಿಬ್ಬಂದಿ !

02:35 PM Jun 03, 2022 | Team Udayavani |

ಬಾಗಲಕೋಟೆ: ಪ್ರಸ್ತುತ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಮತದಾರರ ಪಟ್ಟಿಯಲ್ಲಿ ಕಾರ್ಖಾನೆ ನೌಕರರು, ಬ್ಯಾಂಕ್‌ ಸಿಬ್ಬಂದಿ ಹೆಸರೂ ಸೇರಿಸಲಾಗಿದೆ. ಈ ಕುರಿತು ಸಮಗ್ರ ದಾಖಲೆ ಕಲೆ ಹಾಕುತ್ತಿದ್ದು, ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು ಎಂದು ಅತಿಥಿ ಉಪನ್ಯಾಸಕರೂ ಆಗಿರುವ ಪಕ್ಷೇತರ ಅಭ್ಯರ್ಥಿ ಬಸಪ್ಪ ಮನಿಗಾರ ಹೇಳಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಳೆದ 12 ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಬಾಗಲಕೋಟೆ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ ಅತಿಥಿ ಉಪನ್ಯಾಸಕರು, ಈ ಬಾರಿ ವಾಯವ್ಯ ಶಿಕ್ಷಕರ ಮತಕ್ಷೇತ್ರದಿಂದ ಸ್ಪರ್ಧಿಸಲು ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಹೀಗಾಗಿ ಮೂರು ಜಿಲ್ಲೆಗಳ ಶಿಕ್ಷಕರು, ಅತಿಥಿ ಉಪನ್ಯಾಸಕರು, ಮತದಾರರು ನನಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿರುವ ಅರುಣ ಶಹಾಪುರ ಅವರು, ಆಡಳಿತ ದುರುಪಯೋಗಪಡಿಸಿಕೊಂಡು, ಮತದಾರರ ಪಟ್ಟಿ ಅಕ್ರಮವಾಗಿ ರಚಿಸಲು ಕಾರಣರಾಗಿದ್ದಾರೆ. ಸುಮಾರು 3 ಸಾವಿರಕ್ಕೂ ಹೆಚ್ಚು ಮತದಾರರನ್ನು ಅಕ್ರಮವಾಗಿ ಸೇರಿಸಲಾಗಿದೆ. ನಾನು ಕಾರ್ಯ ನಿರ್ವಹಿಸುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ ಎಂಬ ದಾಖಲೆ ಸಲ್ಲಿಸಿ 7 ಜನರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರೆಲ್ಲ ವಾಸ್ತವದಲ್ಲಿ ಶಿಕ್ಷಕರೇ ಆಗಿಲ್ಲ. ಕಾರ್ಖಾನೆ, ಬ್ಯಾಂಕ್‌ ನೌಕರರಾಗಿದ್ದಾರೆ. ಹೀಗೆಯೇ ಮೂರೂ ಜಿಲ್ಲೆಗಳಲ್ಲಿ ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದವರ ದಾಖಲೆ ಸಂಗ್ರಹಿಸಲಾಗುತ್ತಿದೆ ಎಂದರು.

ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದವರು ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು. ಅಲ್ಲದೇ ಮತದಾನದ ದಿನ ಅವರು ಮತ ಚಲಾಯಿಸುವ ಕುರಿತೂ ವಿಡಿಯೋ ಮಾಡಿ, ಅದನ್ನೂ ಚುನಾವಣೆ ಆಯೋಗ ಹಾಗೂ ಪ್ರಕರಣದ ಜತೆಗೆ ದಾಖಲೆ ನೀಡಲಾಗುವುದು ಎಂದು ಹೇಳಿದರು.

ಈ ಕ್ಷೇತ್ರ ಪ್ರತಿನಿಧಿಸಿದ ವ್ಯಕ್ತಿಗಳು ಶಿಕ್ಷಕರ, ಉಪನ್ಯಾಸಕರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಕೆಲಸ ಮಾಡಿಲ್ಲ. ಅಲ್ಲದೇ ರಾಜ್ಯದಲ್ಲಿದ್ದ 14 ಸಾವಿರ ಅತಿಥಿ ಉಪನ್ಯಾಸಕರಲ್ಲಿ ಸುಮಾರು 7 ಸಾವಿರ ಅತಿಥಿ ಉಪನ್ಯಾಸಕರನ್ನು ಮನೆಗೆ ಕಳುಹಿಸಿ ಅವರ ಬದುಕೇ ಹಾಳು ಮಾಡಿದ ಅಪಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಈ 7 ಸಾವಿರ ಅತಿಥಿ ಉಪನ್ಯಾಸಕರ ಶಾಪ, ಬಿಜೆಪಿ ಸರ್ಕಾರಕ್ಕೆ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಶೈಕ್ಷಣಿಕ ಕ್ಷೇತ್ರದ ಸುಧಾರಣೆ, ಶಿಕ್ಷಕರು, ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನನ್ನದೇ ಆದ ಪ್ರಣಾಳಿಕೆ ಹಾಕಿಕೊಂಡಿದ್ದೇನೆ. ಆ ನಿಟ್ಟಿನಲ್ಲಿ ನಾನು ಕಾರ್ಯ ನಿರ್ವಹಿಸುವೆ. ಮೂರು ಜಿಲ್ಲೆಗಳ ಮತದಾರರು ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಅತಿಥಿ ಉಪನ್ಯಾಸಕರಾದ ವಿಜಯಕುಮಾರ ಕಂದಗಲ್‌, ಭೀಮಪ್ಪ ಇಟಕನ್ನವರ, ಮೊಹ್ಮದಆಸಿಫ್‌ ಪಡೇಕನೂರ, ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next