ಕುಮಟಾ: ಕೋವಿಡ್ ವೈರಸ್ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಘೋಷಿಸಿರುವುದರಿಂದ ಸ್ಥಗಿತಗೊಂಡಿದ್ದ ಹಸಿ ಅಡಿಕೆ(ಫ್ಯಾಕ್ಟರಿ) ವ್ಯಾಪಾರವನ್ನು ಪುನಃ ಆರಂಭಿಸಲು ಕುಮಟಾ ಎಪಿಎಂಸಿ ಆಡಳಿತ ಮಂಡಳಿ ನಿರ್ಧರಿಸಿದೆ.
ರಾಜ್ಯದಲ್ಲಿಯೇ ಹಸಿ ಅಡಿಕೆ ವ್ಯಾಪಾರ ಕುಮಟಾದಲ್ಲಿ ಮಾತ್ರ ನಡೆಯುತ್ತಿದ್ದು, ಈ ಅಡಿಕೆಯನ್ನು ವ್ಯಾಪಾರಸ್ಥರು ಖರೀದಿಸಿ, ಉತ್ತರ ಭಾರತದ ಕಡೆಗಳಿಗೆ ರಫು¤ ಮಾಡುತ್ತಿದ್ದಾರೆ. ಆದರೆ ಕೋವಿಡ್ ಕಾರಣದಿಂದ ಸ್ಥಗಿತವಾಗಿದ್ದ ವಾಹನ ಸಂಚಾರ ಈಗ ಪುನಃ ಆರಂಭವಾಗಿರುವುದರಿಂದ ರೈತರು ತಮ್ಮ ಹಸಿ ಅಡಿಕೆಯನ್ನು ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಿದೆ. ಜೂ. 29ರಿಂದ ಅಧಿಕೃತವಾಗಿ ವ್ಯಾಪಾರ ನಡೆಸಲು ಎಪಿಎಂಸಿ ಮುಂದಾಗಿದೆ.
ಕೇಸರಿ ಅಡಿಕೆ: ಕುಮಟಾ, ಹೊನ್ನಾವರ ಹಾಗೂ ಭಟ್ಕಳ ಭಾಗದ ರೈತರು ನೀರಿನಲ್ಲಿ ಹಾಕಿಟ್ಟ ಹಸಿ ಅಡಿಕೆಯನ್ನು ವ್ಯಾಪಾರಸ್ಥರು ಕುಮಟಾ ಎಪಿಎಂಸಿ ಪ್ರಾಂಗಣದಲ್ಲಿ ಖರೀದಿಸಿ, ಉತ್ತರ ಭಾರತದ ಕಡೆಗಳಿಗೆ ರಫ್ತು ಮಾಡುತ್ತಾರೆ. ಅಲ್ಲಿ ಸಿಹಿ ಪಾನಿಗೆ ಬಳಸುವ ಕೇಸರಿ ಅಡಿಕೆಯನ್ನು ತಯಾರಿಸಿ ಮಾರುಕಟ್ಟೆಗೆ ಕಳುಹಿಸುತ್ತಾರೆ. ಇದರಿಂದ ಉತ್ತರ ಭಾರತದ ಕಡೆಗೆ ಇದು ದೊಡ್ಡ ಉದ್ಯಮವಾಗಿ ಮಾರ್ಪಟ್ಟಿದ್ದು, ಕುಮಟಾದ ಹಸಿ ಅಡಿಕೆಯಿಂದ ಉತ್ತರಭಾರತದ ಕಡೆಗೆ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗವೂ ಸೃಷ್ಟಿಯಾಗಿದೆ. ಕಳೆದ ಸಾಲಿನಲ್ಲಿ ಕುಮಟಾ, ಹೊನ್ನಾವರ ಹಾಗೂ ಭಟ್ಕಳದ ಭಾಗದಿಂದ ಸುಮಾರು 3 ಸಾವಿರ ಕ್ವಿಂಟಾಲ್‌ಗೂ ಅಧಿಕ ಹಸಿ ಅಡಿಕೆಯು ರಫ್ತಾಗಿದ್ದು, ಈ ಬಾರಿಯೂ ಅಷ್ಟೇ ಪ್ರಮಾಣದಲ್ಲಿ ವ್ಯಾಪಾರಕ್ಕೆ ಬರುವ ಸಾಧ್ಯತೆಯಿದೆ. ಸದ್ಯ ಪ್ರತಿ ಕೆ.ಜಿಗೆ 140ರಿಂದ 150 ದರವಿದೆ. ರೈತರಿಂದ ನೇರವಾಗಿ ಖರೀದಿಸಿದ ಹಸಿ ಅಡಿಕೆಯನ್ನು ವ್ಯಾಪಾರಸ್ಥರಿಗೆ ಸಂಗ್ರಹಿಸಿಡುವುದು ಕಷ್ಟಸಾಧ್ಯ.
ಕೋವಿಡ್ ಲಾಕ್‌ಡೌನ್‌ನಿಂದ ವಾಹನ ಸಂಚಾರ ಸ್ಥಗಿತಗೊಂಡ ಕಾರಣ ಹಸಿ ಅಡಿಕೆ ಖರೀದಿ ಬಂದ್ ಮಾಡಲಾಗಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆಯಾಗಿ, ಟ್ರಾನ್ಸ್‌ಪೊàರ್ಟ್ ಆರಂಭವಾಗಿರುವುದರಿಂದ ಜೂ. 29ರಿಂದ ಹಸಿ ಅಡಿಕೆ ಖರೀದಿ ಆರಂಭಿಸಲಾಗಿದೆ. ಹಸಿ ಅಡಿಕೆ ಮಾರಾಟದಿಂದ ರೈತರಿಗೆ ಶೀಘ್ರವಾಗಿ ಹಣ ದೊರೆಯುವುದಲ್ಲದೇ, ಖರ್ಚು-ವೆಚ್ಚವೂ ಕಡಿಮೆಯಾಗುತ್ತದೆ ಎನ್ನುತ್ತಾರೆ ಎಪಿಎಂಸಿ ವರ್ತಕರ ಪ್ರತಿನಿಧಿ ಅರವಿಂದ ಪೈ.
ವಾರದಲ್ಲಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಹಸಿ ಅಡಿಕೆ ವ್ಯಾಪಾರ ನಡೆಸಲಾಗುತ್ತದೆ. ಈ ನಡುವೆಯೂ ಉಳಿದ ವಾರದಲ್ಲಿ ರೈತರು ಅಡಿಕೆ ತಂದರೆ ವ್ಯಾಪಾರ ಮಾಡಿಕೊಡಲಾಗುತ್ತದೆ.
-ಎಂ.ಸಿ. ಪಡಗಾನೂರು, ಎಪಿಎಂಸಿ ಕಾರ್ಯದರ್ಶಿ
ಕೋವಿಡ್ ಕಾರಣದಿಂದ ಫ್ಯಾಕ್ಟರಿ(ಹಸಿ) ಅಡಿಕೆ ಖರೀದಿಯನ್ನು ಬಂದ್ ಮಾಡಲಾಗಿತ್ತು. ಜೂ. 29ರಿಂದ ಪುನಃ ವ್ಯಾಪಾರ ಆರಂಭಿಸಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
-ರಮೇಶ ಪ್ರಸಾದ, ಎಪಿಎಂಸಿ ಅಧ್ಯಕ್ಷ, ಕುಮಟಾ